ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾಹಿತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಇದ್ದರು. 
ರಾಜ್ಯ

ಕ್ರೀಡಾಪಟುಗಳಿಗೆ ಸಿಹಿಸುದ್ದಿ!: ವಾರ್ಷಿಕ ಹಾಜರಾತಿಯಲ್ಲಿ ವಿನಾಯಿತಿ, ಕ್ರೀಡಾದಿನದಂದೇ ಕ್ರೀಡಾ ಪ್ರಶಸ್ತಿ ಪ್ರದಾನ

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ವಾರ್ಷಿಕ ಹಾಜರಾತಿಯಲ್ಲಿ ಕ್ರಮವಾಗಿ ಶೇ.15 ಮತ್ತು ಶೇ.25 ವಿನಾಯಿತಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಅನುಮೋದಿಸಿದೆ. ಜತೆಗೆ ಕಳೆದ ಎರಡು ವರ್ಷಗಳಿಂದ ಬಾಕಿಯಿರುವ ಏಕಲವ್ಯ, ಕ್ರೀಡಾರತ್ನ ಸಹಿತ ರಾಜ್ಯ ಕ್ರೀಡಾ ಪ್ರಶಸ್ತಿಗಳನ್ನು ಈ ಬಾರಿ ರಾಷ್ಟ್ರೀಯ ಕ್ರೀಡಾದಿನವಾದ ಆಗಸ್ಟ್ 29ರಂದೇ ಪ್ರದಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ಗುರುವಾರ ಯವನಿಕಾ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಹಾಜರಾತಿ ಕೊರತೆ ಎದುರಿಸಲಿದ್ದು, ಶೇ.50 ಹಾಜರಾತಿ ಇದ್ದರೂ ಪರೀಕ್ಷೆ ಬರೆಯಲು ಅವಕಾಶ ನೀಡುವ ಉದ್ದೇಶದಿಂದ ಒಟ್ಟು 34 ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಹಾಜರಾತಿ ವಿನಾಯಿತಿ ನೀಡಲಾಗಿದೆ. ಇದರ ಅನುಷ್ಠಾನಕ್ಕೆ ಸರ್ಕಾರ ಆದೇಶವನ್ನೂ ಹೊರಡಿಸಿದೆ ಎಂದರು. ಕಳೆದ ಎರಡು ವರ್ಷದಿಂದ ಏಕಲವ್ಯ, ಕ್ರೀಡಾ ರತ್ನ, ಕ್ರೀಡಾ ಪೋಷಕ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗಳನ್ನು ನೀಡಿಲ್ಲ. ಈ ಪ್ರಶಸ್ತಿಗಳನ್ನು ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಜನ್ಮದಿನವೂ ಆಗಿರುವ ಆಗಸ್ಟ್ 29ರಂದು ವಿತರಿಸಲಾಗುವುದು ಎಂದು ಖಚಿತಪಡಿಸಿದರು.
ರಾಜ್ಯ ಕ್ರೀಡಾನೀತಿಯ ಅನ್ವಯ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಹುದ್ದೆಗಳ ಭರ್ತಿಯಲ್ಲಿ ಶೇ.2 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಕ್ರೀಡಾ ಮೀಸಲಾತಿ ಪ್ರಕಾರ 2 ಸಾವಿರ ಹುದ್ದೆಗಳು ಕ್ರೀಡಾಪಟುಗಳಿಗೆ ಲಭ್ಯವಾಗಲಿವೆ. ಸಾರ್ವಜನಿಕರ ಮತ್ತು ಕ್ರೀಡಾಪಟುಗಳ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ, ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸುವ ಭರವಸೆ ನೀಡಿದರು.
*ಯುವ ಜನೋತ್ಸವ ಆಯೋಜನೆ
ಸಂಸ್ಕೃತಿ, ಕ್ರೀಡೆ ಮತ್ತು ಯುವಕರ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮೊದಲ ಬಾರಿಗೆ ‘ಅಂತಾರಾಷ್ಟ್ರೀಯ ಮಟ್ಟದ ಯುವ ಜನೋತ್ಸವ’ವನ್ನು ಆಯೋಜಿಸಲು ಇಲಾಖೆ ವತಿಯಿಂದ ಚಿಂತನೆ ನಡೆಸಲಾಗಿದೆ. ಇದು ಡಿಸೆಂಬರ್ ಅಥವಾ ಜನವರಿಯಲ್ಲಿ ಆಯೋಜನೆಗೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಮುನ್ನ ತಾಲೂಕು ಮಟ್ಟದಿಂದಲೇ ಅತ್ಯಂತ ವ್ಯವಸ್ಥಿತವಾಗಿ ದಸರಾ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ.
ಕಂಠೀರವ ಕ್ರೀಡಾಂಗಣದ ಅಭಿವೃದ್ಧಿ
ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯ ಒದಗಿಸುವ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇದರ ಜತೆಗೆ ರಾಜ್ಯದ 32 ಕಡೆ ₹36 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಗೆ ನಿರ್ಧರಿಸಲಾಗಿದೆ. 50 ಕಾಯಂ ತರಬೇತುದಾರರ ಹುದ್ದೆಗಳ ಶೀಘ್ರ ನೇಮಕಾತಿಗೆ ಕ್ರಮ ವಹಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.
ಭಾರತ್ ಜೋಡೋ ಸಂಘಕ್ಕೆ
1,010 ಕೋಟಿ ರೂ. ಮೀಸಲು
ಭಾರತ್ ಜೋಡೋ ಸಂಘ ರಚಿಸಲು ಸರ್ಕಾರ ಆದೇಶ ಹೊರಡಿಸಿದ್ದು, ಕ್ರೀಡಾ ಇಲಾಖೆಗೆ ಈ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ 200 ಜನರನ್ನೊಳಗೊಂಡ 10 ಸಾವಿರ ಸಂಘಗಳನ್ನು ಮಾಡಿ, ವರ್ಷಕ್ಕೆ ಪ್ರತಿ ಸಂಘಕ್ಕೆ 10 ಲಕ್ಷ ರೂ. ನೀಡಲಾಗುವುದು. ಇದರ ಪರಿಶೀಲನೆಗೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಇದಕ್ಕೆ1,010 ಕೋಟಿ ರೂ. ಮೀಸಲಿಡಲಾಗಿದೆ ಎಂದು ಕ್ರೀಡಾ ಸಚಿವರು ಮಾಹಿತಿ ನೀಡಿದರು.