ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ)
- ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಗಳ ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಿಸುವ ಉದ್ದೇಶ
- ದಾಖಲಾತಿ ದಂಡ ಶುಲ್ಕ 670 ರೂ. ಮತ್ತು ವಿಶೇಷ ದಂಡ ಶುಲ್ಕ 2,220 ರೂ.ಗಳ ವಿನಾಯಿತಿ ನೀಡಲಾಗಿದೆ
- ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರೇ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಳಂಬವಾಗಿ ದಾಖಲಾಗುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ‘ದಾಖಲಾತಿ ದಂಡ ಶುಲ್ಕ ಮತ್ತು ವಿಶೇಷ ದಂಡ ಶುಲ್ಕ’ಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ (2026-27) ಸಂಪೂರ್ ವಿನಾಯಿತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿ ಪೂರ್ವ) ಆದೇಶ ಹೊರಡಿಸಿದೆ.
ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವುದು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಗಳ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳದಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಇದೊಂದು ಮಹತ್ವದ ನಿರ್ಧಾರವಾಗಿದೆ.
ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರೇ ಸೇರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ದಾಖಲಾತಿ ದಂಡ ಶುಲ್ಕ 670 ರೂ. ಮತ್ತು ವಿಶೇಷ ದಂಡ ಶುಲ್ಕ 2,220 ರೂ.ಗಳ ವಿನಾಯಿತಿ ನೀಡಲಾಗಿದೆ ಎಂದು ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಈ ದಂಡ ಶುಲ್ಕವನ್ನು2018-19ನೇ ಸಾಲಿನಲ್ಲಿ ಪರಿಷ್ಕರಿಸಲಾಗಿತ್ತು. ಸರ್ಕಾರಿ ಕಾಲೇಜುಗಳಿಗೆ ದಾಖಲಾಗುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಗ್ರಾಮೀಣ ಭಾಗದವರು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಕುಟುಂಬ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ದಾಖಲಾತಿಯ ನಿಗದಿತ ಅವಧಿ ಮುಕ್ತಾಯವಾದ ನಂತರ ವಿಧಿಸುತ್ತಿದ್ದ ವಿಳಂಬ ದಾಖಲಾತಿ ದಂಡ ಶುಲ್ಕ ಹಾಗೂ ವಿಶೇಷ ದಂಡ ಶುಲ್ಕವನ್ನು ಪಾವತಿಸುವುದು ಕಷ್ಟಕರವಾಗಿದ್ದು, ಹಲವಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳಿರುತ್ತವೆ.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ರಾಜ್ಯದಲ್ಲಿ ಪಿಯು ಕಾಲೇಜುಗಳ ದಾಖಲಾತಿ ಹೆಚ್ಚಿಸುವ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.