ಹೊಸಕೋಟೆ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕುಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟಕ್ಕೆ ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ರಮೇಶಪ್ಪ ಚಾಲನೆ ನೀಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್, ಪ್ರಾಂಶುಪಾಲ ಸತೀಶ್, ತ್ರಿವೇಣಿ, ಸುರೇಶ್, ಮಂಜುನಾಥ್, ಸೀನಪ್ಪ ಇತರರು ಇದ್ದರು.
ಹೊಸಕೋಟೆ : ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ ಮಾತ್ರ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೊಸಕೋಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ.ರಮೇಶಪ್ಪ ತಿಳಿಸಿದರು.
ನಗರದ ಚನ್ನಭೈರೇಗೌಡ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 2026&27ನೇ ಸಾಲಿನ ತಾಲೂಕುಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಆರೋಗ್ಯ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಎಂಬ ಮಾತು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕಿಂತ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಲಕ್ಷಾಂತರ ಜನರ ಆರೋಗ್ಯ ಕಾಪಾಡಬಹುದು ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಇಂದಿಗೂ ಪ್ರಸ್ತುತ. ಡಿಜಿಟಲ್ ಯುಗದಲ್ಲಿ ಮಕ್ಕಳು ಹಾಗೂ ಯುವಜನರು ಹೆಚ್ಚಿನ ಸಮಯ ಮೊಬೈಲ್, ಟ್ಯಾಬ್ಲೆಟ್ಗಳಲ್ಲಿ ಕಳೆಯುತ್ತಿದ್ದಾರೆ. ಇದರಿಂದ ಹೊರಬಂದು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದರು.
ಪ್ರಾಂಶುಪಾಲರ ಸಂಘದ ಜಿಲ್ಲಾ ಕಾರ್ಯದರ್ಶಿ ಭೈರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜತೆಗೆ ಶಿಸ್ತು, ಏಕಾಗ್ರತೆ, ನಾಯಕತ್ವ ಗುಣ ಹಾಗೂ ಉತ್ತಮ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಲು ಕ್ರೀಡೆ ಉತ್ತಮ ವೇದಿಕೆ. ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಸುಮಾರು 30 ಕಾಲೇಜುಗಳ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ಜತೆಗೆ ಉತ್ತಮ ಕ್ರೀಡಾಪಟುಗಳನ್ನು ರೂಪಿಸುವುದು ಕ್ರೀಡಾಕೂಟದ ಉದ್ದೇಶ ಎಂದು ಹೇಳಿದರು.
ಮಹದೇವ ಕಾಲೇಜು ಪ್ರಾಂಶುಪಾಲ ರಾಮನಾಥ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಗೂ ಮಹತ್ವವಿದೆ. ಕ್ರೀಡೆಯಲ್ಲಿ ಸೋಲು&ಗೆಲುವು- ಸಹಜ. ಸೋಲನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು. ಗೆಲುವಿನಿಂದ ಅಹಂಕಾರಪಡದೆ ಮುನ್ನಡೆಯಬೇಕು. ಕ್ರೀಡೆಗಳು ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಚಿಂತನಾ ಸಾಮರ್ಥ್ಯ ವೃದ್ಧಿಸುತ್ತವೆ. ದೈಹಿಕ ಚಟುವಟಿಕೆಗಳ ಕೊರತೆಯಿಂದ ಇತ್ತೀಚೆಗೆ ಯುವಜನರಲ್ಲಿಯೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದ ಜತೆಗೆ ಕ್ರೀಡೆ, ಸಾಂಸತಿಕ ಚಟುವಟಿಕೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಬೇಕು ಎಂದರು.
ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೀರೇಂದ್ರ ಸಿಂಗ್, ಪ್ರಾಂಶುಪಾಲ ಸತೀಶ್, ತ್ರಿವೇಣಿ, ಸುರೇಶ್, ಮಂಜುನಾಥ್, ಸೀನಪ್ಪ, ಶ್ರೀನಿವಾಸ್, ಮೋಹನ್, ಗಜೇಂದ್ರ, ಬಾಬುರೆಡ್ಡಿ, ತ್ರಿಶೂರ್, ಮಲ್ಲಿಕಾರ್ಜುನ ಸದವಾಮಿ, ವೆಂಕಟರಾಜು, ಶಶಿಕಲಾ, ವಿನೋದ್, ಕಿರಣ್, ಕೃಷ್ಣಪ್ಪ ಇತರರು ಇದ್ದರು.
ಕ್ರೀಡಾಕೂಟ ಅವ್ಯವಸ್ಥೆಯ ಆಗರ : ಕ್ರೀಡಾಕೂಟದಲ್ಲಿ ಕ್ರೀಡಾಪಟು ಕುಸಿದು ಬಿದ್ದು ಆಂತಕ ಸೃಷ್ಟಿಯಾಗಿತ್ತು. ತುರ್ತು ಸೇವೆಗಾಗಿ 112ಗೆ ಕರೆ ಮಾಡಿದರೆ ಅರ್ಧ ಗಂಟೆ ತಡವಾಗಿ ಸಿಬ್ಬಂದಿ ಬಂದಿದ್ದರಿಂದ ಅಸ್ಪತ್ರೆಗೆ ದಾಖಲಿಸುವುದು ತಡವಾಯಿತು. ಕ್ರೀಡಾಕೂಟದ ಸೂಕ್ತ ನಿರ್ವಹಣೆಗೆ ಮೇಲ್ವಿಚಾರಕ ಸತೀಶ್ ಎಂಬುವವರು 10 ಸಾವಿರ ರೂ. ಪಡೆದಿದ್ದರೂ ಅವ್ಯವಸ್ಥೆಯ ಆಗರವಾಗಿತ್ತು. ಕ್ರೀಡಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನಗರಸಭೆ ನೀರು ಸರಬರಾಜಿನ ಸಮಸ್ಯೆಯಿಂದ ಕಾರ್ಯನಿರ್ವಹಿಸದೆ ಬಾಟಲಿ ನೀರಿಗೆ ಕ್ರೀಡಾಪಟುಗಳು ಮೊರೆಹೋಗುವಂತಾಗಿತ್ತು. ಶೌಚಗೃಹದಲ್ಲಿ ಸಹ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಇನ್ನು ಕ್ರೀಡಾಪಟುಗಳ ಆರೋಗ್ಯದ ಮುನ್ನೆಚ್ಚರಿಕೆಯಿಂದ ಅಂಬುಲೆನ್ಸ್ ಒದಗಿಸಲು ತಾಲೂಕು ಆರೋಗ್ಯ ಇಲಾಖೆಗೆ ಮುಂಗಡವಾಗಿ ಮನವಿ ನೀಡಿದ್ದರೂ ಇಲಾಖಾ ಅಧಿಕಾರಿಗಳು ಗೈರಾಗಿದ್ದರು.