ನಗರದ ಸುಚಿತ್ರಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 6 ಪುಸ್ತಕಗಳನ್ನು ನಟ, ನಾಟಕಕಾರ ಶ್ರೀನಿವಾಸ ಪ್ರಭು ಬಿಡುಗಡೆಗೊಳಿಸಿದರು. ಸಾಹಿತಿ ಎಚ್​.ಎಸ್​. ಸತ್ಯನಾರಾಯಣ, ಕಥೆಗಾರ ವಿಕಾಸ ನೇಗಿಲೋಣಿ, ಲೇಖಕ ಶರತ್​ ಭಟ್​ ಸೇರಾಜೆ ಮತ್ತಿತರರಿದ್ದರು.  
ರಾಜ್ಯ

ಕನ್ನಡ ಸಾಹಿತ್ಯಕ್ಕೀಗ ಸುವರ್ಣ ಯುಗ

ಬೆಂಗಳೂರು: ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಉತ್ತಮ ಕೃತಿಗಳನ್ನು ಕನ್ನಡದ ಸಾಹಿತಿಗಳು ರಚಿಸುತ್ತಿದ್ದಾರೆ. ಹಾಗೆಯೇ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ, ಈ ಕಾಲವನ್ನು ಕನ್ನಡ ಸಾಹಿತ್ಯ ಲೋಕದ ಸುವರ್ಣ ಯುಗ ಎಂದು ಕರೆಯಬಹುದು ಎಂದು ನಟ, ನಾಟಕಕಾರ ಶ್ರೀನಿವಾಸ ಪ್ರಭು ಹೇಳಿದ್ದಾರೆ.
ನಗರದ ಸುಚಿತ್ರಾ ಸಭಾಂಗಣದಲ್ಲಿ ಅಂಕಿತ ಪುಸ್ತಕ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
30 ವರ್ಷಗಳಿಂದ ಸಾಹಿತ್ಯ ಕೃತಿಗಳನ್ನು ಪ್ರಕಟಿಸುತ್ತಿರುವ ಅಂಕಿತ ಪ್ರಕಾಶನದಂತಹ ಸಂಸ್ಥೆಗಳು ಈ ಸುವರ್ಣ ಯುಗಕ್ಕೆ ವಿಶಿಷ್ಟ ಕಾಣಿಕೆ ನೀಡಿವೆ ಎಂದರು.

ಬಿಡುಗಡೆಗೊಂಡ ಕೃತಿಗಳು

ಸಮಾರಂಭದಲ್ಲಿ ಸು. ರುದ್ರಮೂರ್ತಿ ಶಾಸ್ತ್ರಿ (ಜನ ಭಾರತ), ಉಷಾ ನರಸಿಂಹನ್​ (ಆರ್ಯಾವರ್ತ), ಎನ್​. ಸಂಧ್ಯಾರಾಣಿ (ಕದಡಿದ ಕೊಳವು ತಿಳಿಯಾಗಿರಲು), ಹಳೆಮನೆ ರಾಜಶೇಖರ (ಮಾಯೆಯೆಂಬುದು ಮಾಯೆಯಲ್ಲ) ವಿಕ್ರಮ ಹತ್ವಾರ (ಓದಿದ್ದು, ನೋಡಿದ್ದು) ಮತ್ತು ಗುರುರಾಜ ಕೊಡ್ಕಣಿ (ಹೆಕ್ಕಿ ತಂದ ನೆನಪುಗಳು) ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಸಾಹಿತಿ ಎಚ್​.ಎಸ್​. ಸತ್ಯನಾರಾಯಣ ಮಾತನಾಡಿ, ಮಹಾಭಾರತವನ್ನು ಜನ ಭಾರತವಾಗಿ ನೋಡುವ ಪ್ರಯತ್ನವನ್ನು ರುದ್ರಮೂರ್ತಿ ಶಾಸ್ತ್ರಿ ಅವರು ಮಾಡಿದ್ದಾರೆ. ಕೌರವ-ಪಾಂಡವರನ್ನು ಪಾತ್ರವಾಗಿಸದೆ, ಎರಡೂ ಕಡೆಗಳಲ್ಲಿದ್ದ ಜನಸಾಮಾನ್ಯರ ಸಂಕಟವನ್ನು ಕಟ್ಟಿಕೊಟ್ಟಿದ್ದಾರೆ. ಉಷಾ ನರಸಿಂಹನ್​ ರಚನೆಯ ಆರ್ಯಾವರ್ತ ಕೃತಿಯು ಉತ್ತರ ಪಥೇಶ್ವರನೆಂದೇ ಗುರುತಿಸಿಕೊಂಡ ಹರ್ಷವರ್ಧನ ಮತ್ತು ಆತನ ಸಹೋದರಿ, ಬೌದ್ಧ ಬಿಕ್ಕುಣಿ ರಾಜ್ಯಶ್ರೀಯ ಕಥನವನ್ನು ಚಿತ್ರಿಸುತ್ತದೆ ಎಂದು ಹೇಳಿದರು.

ಶೋಷಿತನೇ ಶೋಷಕನಾಗುವ ದುರಂತ:

ಕಥೆಗಾರ, ಪತ್ರಕರ್ತ ವಿಕಾಸ ನೇಗಿಲೋಣಿ ಮಾತನಾಡಿ, ಶೋಷಣೆಗೊಳಪಟ್ಟು ಕಷ್ಟದಿಂದ ಮೇಲೆ ಬಂದ ವ್ಯಕ್ತಿಯೇ ಇನ್ನೊಬ್ಬರ ಶೋಷಕನಾಗುವ ವ್ಯವಸ್ಥೆಯ ದುರಂತವನ್ನು ರಾಜಶೇಖರ ಹಳೆಮನೆ ಅವರ ಮಾಯೆಯೆಂಬುದು ಮಾಯೆಯಲ್ಲ ಕಥಾ ಸಂಕಲನ ಬಿಂಬಿಸಿದೆ. ಹಾಗೆಯೇ ಸ್ತ್ರೀವಾದವನ್ನು ಕೇವಲ ವಾದವನ್ನಾಗಿ ನೋಡದೆ, ಅದು ನಮ್ಮ ಬದುಕಿನ ಕ್ರಮದಲ್ಲಿದೆ ಎಂದು ತಿಳಿಸುವ ಲೇಖನಗಳು ಸಂಧ್ಯಾರಾಣಿ ಅವರ ಕದಡಿದ ಕೊಳವು ತಿಳಿಯಾಗಿರಲು ಪುಸ್ತಕದಲ್ಲಿದೆ ಎಂದು ವಿವರಿಸಿದರು.

ಕಾವ್ಯವನ್ನು ಮಾತನಾಡಿಸುವ ಯತ್ನ

ಗುರುರಾಜ ಕೊಡ್ಕಣಿ ಅವರು ತಮ್ಮ ಬಾಲ್ಯ, ಯೌವನದ ಸ್ಮೃತಿ ಚಿತ್ರಗಳನ್ನು ವಿನೋದಮಯವಾಗಿ ಹೆಕ್ಕಿ ತಂದ ನೆನಪುಗಳು ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ವಿಕ್ರಮ ಹತ್ವಾರ ರಚನೆಯ ಓದಿದ್ದು, ನೋಡಿದ್ದು ಕೃತಿಯು ಸಾಹಿತ್ಯ ಮತ್ತು ಸಿನೆಮಾಗಳನ್ನು ಅವಲೋಕಿಸಿದ್ದು, ನಮ್ಮನ್ನು ಚಿಂತನೆಗೆ ದೂಡುತ್ತದೆ. ಕಾವ್ಯವನ್ನು ಸಾವಧಾನದಿಂದ ಮಾತನಾಡಿಸುವ ಪ್ರಯತ್ನ ಕೃತಿಯಲ್ಲಾಗಿದೆ.