ತಂಬಿಗೆಯಲ್ಲಿ ಸಿಕ್ಕ ಪ್ರಾಚೀನ ಕಾಲದ ಆಭರಣಗಳು
- ಗದಗ ಲಕ್ಕುಂಡಿಯಲ್ಲಿ ಪುರಾತನ ಕಾಲದ ಚಿನ್ನಾಭರಣಗಳು ಪತ್ತೆ
- ಮನೆ ಕಟ್ಟಿಸಲು ಅಡಿಪಾಯ ತೋಡುವಾಗ ತಂಬಿಗೆ ಪ್ರತ್ಯಕ್ಷ
- ನೀಲಮಣಿ, ಮುತ್ತು, ಹವಳ ಸೇರಿದಂತೆ ಹಲವು ಬೆಲೆ ಬಾಳುವ ಆಭರಣಗಳು
ಗದಗ: ಶನಿವಾರ (ಜ.10) ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ನಿರ್ಮಾಣಕ್ಕೆಂದು ಅಡಿಪಾಯ ತೋಡುವಾಗ ತಂಬಿಗೆಯೊಂದು ಪತ್ತೆಯಾಗಿದ್ದು, ಅದರಲ್ಲಿ ಮುತ್ತು, ಹವಳ, ಚಿನ್ನಾಭರಣ, ಖಡ್ಗ, ನೀಲಮಣಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳು ಸಿಕ್ಕಿವೆ. ನಿಧಿ ಸಿಕ್ಕ ಸ್ಥಳವನ್ನು ಜಿಲ್ಲಾಡಳಿತಕ್ಕೆ ಕುಟುಂಬ ತೋರಿಸಿದ್ದೇ ತಡ, ಆ ಜಾಗದಲ್ಲೀಗ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಇದರೊಟ್ಟಿಗೆ ಜಾಗವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವುದು ಸದ್ಯ ಮನೆಯಲ್ಲಿ ವಾಸವಿದ್ದ ತಾಯಿ ಮತ್ತು ಮಗನಿಗೆ ತೊಂದರೆಯಾಗಿ ಕಾಡಲಾರಂಭಿಸಿದೆ.
ಪತ್ತೆ ಆಗಿದ್ಹೇಗೆ?
ಗ್ರಾಮದ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬ ಮಹಿಳೆ ಮನೆ ಕಟ್ಟಿಸುವ ಆಸೆಯನ್ನು ಹೊತ್ತಿದ್ದರು. ಈ ಹಿನ್ನೆಲೆ ತಮ್ಮ ಜಾಗದಲ್ಲಿ ಶನಿವಾರ ಅಡಿಪಾಯಕ್ಕೆ ಗುಂಡಿ ಅಗೆಯುವ ಕೆಲಸಕ್ಕೆ ಮುಂದಾದರು. ಈ ವೇಳೆ, ಅವರ ಪುಟ್ಟ ಮಗನಿಗೆ ತಾಮ್ರದ ತಂಬಿಗೆಯಲ್ಲಿ ಪುರಾತನದ ವಸ್ತುಗಳು ಎಂದು ಸೂಚಿಸುವ ಚಿನ್ನಾಭರಣಗಳು ಸಿಕ್ಕಿತು. ಅಲ್ಲಿಂದ ಶುರುವಾದ ಪುರಾತತ್ವ ಇಲಾಖೆಯ ಕೆಲಸ, ಇದು ಯಾವ ಶತಮಾನದ್ದು ಎಂದು ಕಂಡುಹಿಡಿಯುವ ಸವಾಲಿಗೆ ದೂಡಿದೆ.
ಏನೆಲ್ಲ ಸಿಕ್ಕಿವೆ?
ತಂಬಿಗೆಯಲ್ಲಿ ಚಿನ್ನಾಭರಣ, ಹವಳ ಸೇರಿ ಹಲವು ಬೆಲೆ ಬಾಳುವ ವಸ್ತುಗಳು ಪತ್ತೆಯಾದ ಬೆನ್ನಲ್ಲೇ ಲಕ್ಕುಂಡಿ ಗ್ರಾಮದ ಶ್ರೀಮಂತಿಕೆ ಮತ್ತೊಮ್ಮೆ ಪುನರುಚ್ಚರಿಸಿದೆ. ಶನಿವಾರ ಸಿಕ್ಕ ಚಿನ್ನಾಭರಣದಲ್ಲಿ ಎರಡು ನೀಲಮಣಿ, ಎರಡು ಮಾಣಿಕ್ಯ ಮತ್ತು ಒಂದು ಹವಳ ಜತೆ ಒಂದು ಮುತ್ತು ದೊರೆತಿದ್ದು, ಚಿನ್ನಾಭರಣದ ಮೌಲ್ಯದಷ್ಟೇ ನೀಲಮಣಿ ಮುತ್ತು-ಹವಳ ಮಾಣಿಕ್ಯದ ಮೌಲ್ಯವು ಇನ್ನೂ ಅಧಿಕವಾಗಲಿದೆ ಎಂದು ತಿಳಿದುಬಂದಿದೆ. ಇದು ಪ್ರಾಚೀನ ಕಾಲದ್ದು ಎಂಬುದು ಬಹುತೇಕ ಖಚಿತವಾಗಿದೆ.
ಗ್ರಾಮ ಪೂರ ಉತ್ಖನನ?
ಅಪರೂಪದಲ್ಲಿ ಅಪರೂಪ ಎನ್ನುವಂತೆ ಹವಳ, ಮಾಣಿಕ್ಯ ನೀಲಮಣಿ ಸಿಕ್ಕಿರುವುದು ಭಾರೀ ವಿಶೇಷ. ಈ ಮುತ್ತು ಹವಳಗಳನ್ನು ಚಿನ್ನಾಭರಣದ ಜತೆಗೆ ಅತ್ಯಂತ ಸೂಕ್ಷ್ಮವಾಗಿ ಬಳಸಲಾಗಿದ್ದು, ಅಂದಿನ ಚಿನ್ನಾಭರಣದ ಕುಶಲ ಕರ್ಮಿಗಳ ಕೌಶ್ಯಲದ ಪ್ರಭುದ್ದತೆ ಅನಾವರಣಗೊಳ್ಳುತ್ತದೆ. ಈ ಮೂಲಕ ವ್ಯಾಪಾರ ಸಂಸ್ಕೃತಿಯು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಗ್ರಾಮದ ಜನರಿಗೆ ಸೂಕ್ತ ಪರಿಹಾರ ಮತ್ತು ಪುನರ್ವಸತಿ ನೀಡುವುದರ ಮೂಲಕ ಗ್ರಾಮದಲ್ಲಿ ಸಂಪೂರ್ಣ ಉತ್ಖನನ ಆಗಬೇಕು ಎನ್ನುವ ಕೂಗು ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.