Ranya Rao  
ರಾಜ್ಯ

ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌, ತರುಣ್‌, ಸಾಹಿಲ್‌ ಬಂಧನ ಎತ್ತಿ ಹಿಡಿದ ಹೈಕೋರ್ಟ್‌ | Ranya Rao

ಪ್ರಮುಖ ಮುಖ್ಯಾಂಶಗಳು

  • ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್ , ತರುಣ್ ಕೊಂಡೊರು ಮತ್ತು ಸಾಹಿಲ್ ಜೈನ್​ರನ್ನು ಬಂಧಿಸಲಾಗಿತ್ತು
  • ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು.
  • ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆಯ (ಕಾಫಿಪೋಸಾ) ಅಡಿ ಬಂಧಿಸಿದ್ದ ಕೇಂದ್ರ ಸರ್ಕಾರ
  • ಕಾಫಿಪೋಸಾ ಕಾಯಿದೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್​
ಕರ್ನಾಟಕ : ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌(Ranya Rao), ತರುಣ್‌ ಕೊಂಡೂರು ರಾಜು ಮತ್ತು ಸಾಹಿಲ್‌ ಜೈನ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆಯ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ. ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಡಿಸೆಂಬರ್‌ 1ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನ್ಯಾಯಪೀಠ ಆದೇಶವನ್ನು ಪ್ರಕಟಿಸಿದೆ. ರನ್ಯಾ ಮಲತಾಯಿ ಎಚ್‌.ಎಸ್‌.ರೋಹಿಣಿ ಮತ್ತು ತರುಣ್‌ ತಾಯಿ ರಮಾ ರಾಜು ಮತ್ತು ಸಾಹಿಲ್‌ ಜೈನ್‌ ತಾಯಿ ಪ್ರಿಯಾಂಕಾ ಸರ್ಕಾರಿಯಾ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಚಾರಣೆಯ ವೇಳೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ. ಅರವಿಂದ್‌ ಕಾಮತ್‌ ರನ್ಯಾಗೆ ಪೆನ್‌ಡ್ರೈವ್‌ ತಲುಪಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ. ಆಕೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದರಿಂದ ಜೈಲು ಕೈಪಿಡಿಯ ಪ್ರಕಾರ ಡಿಜಿಟಲ್‌ ಸಾಧನವಾದ ಪೆನ್‌ಡ್ರೈವ್‌ ಅವರಿಗೆ ನೀಡಲಾಗಿಲ್ಲ. ಬದಲಿಗೆ ಅವರು ಸೂಚಿಸಿದಂತೆ ಅವರ ವಕೀಲ ಶಾಶ್ವತ್‌ ಅವರಿಗೆ ನೀಡಲು ಪ್ರಯತ್ನಿಸಲಾಗಿತ್ತು. ಇದನ್ನು ಶಾಶ್ವತ್‌ ಸ್ವೀಕರಿಸದೇ ಇದ್ದುದರಿಂದ ಅಂತಿಮವಾಗಿ ರನ್ಯಾ ಸೂಚನೆಯ ಮೇರೆಗೆ ಅವರ ಮಲತಾಯಿ ರೋಹಿಣಿ ಅವರಿಗೆ ನೀಡಲಾಗಿದೆ. ಚಿನ್ನ ಕಳ್ಳ ಸಾಗಣೆಯಂಥ ಕೃತ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇರುವುದರಿಂದ ಅವರನ್ನು ಬಿಡುಗಡೆ ಮಾಡಬಾರದು. ಕನ್ನಡದಲ್ಲಿ ನೀಡಲಾಗಿರುವ ದಾಖಲೆಗಳನ್ನು ತಪ್ಪಾಗಿ ನೀಡಲಾಗಿದ್ದು, ಅದರಿಂದ ಅವರಿಗೆ ಯಾವುದೇ ಅನುಕೂಲವಿಲ್ಲ. ಇನ್ನು ಅಪೂರ್ಣವಾದ ದಾಖಲೆ ಎಂದು ವಾದಿಸುತ್ತಿರುವುದು ಸಮಂಜಸವಲ್ಲ. ಇದೆಲ್ಲವೂ ನ್ಯಾಯಾಲಯದ ಮುಂದೆ ಇದೆ. ಒಟ್ಟಾರೆಯಾಗಿ ನಿಯಮಾನುಸಾರವೇ ಎಲ್ಲರನ್ನೂ ಕಾಫಿಫೋಸಾ ಅಡಿ ವಶಕ್ಕೆ ಪಡೆಯಲಾಗಿದೆ ಎಂದು ವಾದ ಮಂಡಿಸಿದರು.
ರನ್ಯಾ ಪರವಾಗಿ ವಕೀಲ ಕೆ.ಚಂದ್ರಶೇಖರ ಬಂಧನ ಆದೇಶ ಹೊರಡಿಸುವುದಕ್ಕೆ ಪೂರಕವಾಗಿ ಡಿಆರ್‌ಐ ಪೆನ್‌ಡ್ರೈವ್‌ (ರನ್ಯಾ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗಿನ ವಿಡಿಯೊ ದಾಖಲೆ) ಆಧರಿಸಿದೆ. ಆದರೆ, ಅದನ್ನು ರನ್ಯಾ ಅವರಿಗೆ ಒದಗಿಸಲಾಗಿಲ್ಲ. ರನ್ಯಾ ಅವರನ್ನು ವಶಕ್ಕೆ ಪಡೆದಾಗಲೇ ಪಾಸ್‌ಪೋರ್ಟ್‌ ಜಫ್ತಿ ಮಾಡಿದ್ದು, ಅದು ಸದ್ಯ ವಿಶೇಷ ನ್ಯಾಯಾಲಯದ ಕಸ್ಟಡಿಯಲ್ಲಿದೆ. ಹೀಗಿರುವಾಗ ರನ್ಯಾ ದೇಶ ತೊರೆಯುವ ಸಂದರ್ಭ ನಿರ್ಮಾಣವಾಗುವುದಿಲ್ಲ ಎಂದರು. ತರುಣ್‌ ರಾಜು ಪರವಾಗಿ ವಾದಿಸಿದ ಹಿರಿಯ ವಕೀಲ ಹಷ್ಮತ್‌ ಪಾಷಾಕಾಫಿಪೋಸಾ ಅಡಿ ಬಂಧನವೇ ಅಕ್ರಮ ಎಂದು ಘೋಷಸಿಬೇಕು ಎಂದು ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಗೆ ಎರಡು ಬಾರಿ ಮನವಿ ಸಲ್ಲಿಸಿಲಾಗಿದೆ. ಆದರೆ, ಕೇಂದ್ರವು ಅದನ್ನು ಹೈಕೋರ್ಟ್‌ನ ಸಲಹಾ ಸಮಿತಿಗೆ ರವಾನಿಸಿ ಕೈಬಿಟ್ಟಿದೆ. ಇಲ್ಲಿ ಜಂಟಿ ಕಾರ್ಯದರ್ಶಿಯು ಪೋಸ್ಟ್‌ ಮ್ಯಾನ್‌ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ತರುಣ್‌ ರಾಜು ಅವರು ದುಬೈನಲ್ಲಿ ರನ್ಯಾ ಜೊತೆ ವ್ಯವಹರಿಸಿದ್ದು, ಅಲ್ಲಿ ಮಾಡಿರುವ ಕೆಲಸಕ್ಕೆ ಅವರನ್ನು ಭಾರತದಲ್ಲಿ ಹೊಣೆ ಮಾಡಲಾಗದು ಎಂದು ವಾದ ಮಂಡಿಸಿದರು.

ಪ್ರಕರಣದ ಹಿನ್ನೆಲೆ

ಮಾರ್ಚ್‌ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್‌ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್‌ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿತ್ತು.(ಏಜನ್ಸೀಸ್).