Belagavi news > ನೆಲ ಅಗೆಯುವಾಗ 8.20 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಪತ್ತೆ! 
ರಾಜ್ಯ

ನೆಲ ಅಗೆಯುವಾಗ 8.20 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಪತ್ತೆ!: ಅಧಿಕಾರಿಗಳಿಗೆ ಹಸ್ತಾಂತರಿಸಿದ ಕಾರ್ಮಿಕರು!

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕಾಮಗಾರಿ ವೇಳೆ ಅಪರೂಪದ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಗ್ರಾಮದ ಬಿಸಿಎಂ ಹಾಸ್ಟೆಲ್ ಸಮೀಪ ವಿಬಿ–ಜಿ ರಾಮ್ ಜಿ ಯೋಜನೆಯಡಿ ನೆಲ ಅಗೆಯುವ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಕಾರ್ಮಿಕರಿಗೆ ಮಡಕೆಯೊಂದರಲ್ಲಿ ಇಡಲಾಗಿದ್ದ ಒಟ್ಟು 14 ಚಿನ್ನದ ನಾಣ್ಯಗಳು ಸಿಕ್ಕಿವೆ.
ಈ ನಾಣ್ಯಗಳನ್ನು ಪತ್ತೆ ಹಚ್ಚಿದ ಕಾರ್ಮಿಕರಾದ ಯಲ್ಲಪ್ಪ ಕರಿಗಾರ, ಅಪ್ಪಣ್ಣ ತಳವಾರ, ಕೆಂಚಪ್ಪ ಬಂಡಗಿ ಹಾಗೂ ದೇಮಣ್ಣ ತಳವಾರ ಅವರು ತಕ್ಷಣವೇ ಪ್ರಾಮಾಣಿಕತೆ ಮೆರೆದು ನಾಣ್ಯಗಳನ್ನು ಸವದತ್ತಿ ತಹಸೀಲ್ದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ. ಸಿಕ್ಕಿರುವ ಒಟ್ಟು ನಾಣ್ಯಗಳು 54.880 ಗ್ರಾಂ ತೂಕವಿದ್ದು, ಇವುಗಳ ಅಂದಾಜು ಮೌಲ್ಯ ಸುಮಾರು 8.20 ಲಕ್ಷ ರೂಪಾಯಿ ಎಂದು ಪರಿಗಣಿಸಲಾಗಿದೆ.
ಪತ್ತೆಯಾಗಿರುವ ಈ ಚಿನ್ನದ ನಾಣ್ಯಗಳ ಮೇಲೆ ಆನೆಯ ಲಾಂಛನ ಮುದ್ರಿತವಾಗಿರುವುದು ವಿಶೇಷ ಕುತೂಹಲ ಮೂಡಿಸಿದೆ. ಇವು ಯಾವ ರಾಜವಂಶ ಹಾಗೂ ಯಾವ ಕಾಲಘಟ್ಟಕ್ಕೆ ಸೇರಿದ ನಾಣ್ಯಗಳು ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಇತಿಹಾಸಕಾರರು ಮತ್ತು ಪ್ರಾಚ್ಯವಸ್ತು ಸಂಗ್ರಹಣಾ ಇಲಾಖೆಯ ತಜ್ಞರು ಪರಿಶೀಲನೆ ನಡೆಸಬೇಕಿದೆ.