ಶ್ರೀ ಲಕ್ಷ್ಮಿದೇವಿ ದೇವಾಲಯದ ಹೊರನೋಟ
- ದಡಿಘಟ್ಟ ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯ
- ಭಕ್ತರ ನಂಬಿಕೆ ಹಾಗೂ ವಿಶಿಷ್ಟ ಆಚರಣೆಗಳಿಂದ ಪ್ರಸಿದ್ಧಿ
ಶ್ರವಣಬೆಳಗೊಳ: ವಿಶ್ವವಿಖ್ಯಾತ ಶ್ರವಣಬೆಳಗೊಳದ ಸಮೀಪದಲ್ಲಿರುವ ದಡಿಘಟ್ಟ ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಾಲಯ ಭಕ್ತರ ನಂಬಿಕೆ ಹಾಗೂ ವಿಶಿಷ್ಟ ಆಚರಣೆಗಳಿಂದ ಪ್ರಸಿದ್ಧಿ ಪಡೆದಿದೆ.
ವಿಶೇಷವಾಗಿ ಹೊಸ ವಾಹನಗಳ ಪೂಜೆಗೆ ಹೆಸರುವಾಸಿಯಾಗಿರುವ ಈ ದೇಗುಲಕ್ಕೆ ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಹೊಸದಾಗಿ ಕಾರು, ಬೈಕ್, ಟ್ರಾೃಕ್ಟರ್ ಸೇರಿದಂತೆ ಯಾವುದೇ ವಾಹನ ಖರೀದಿಸಿದರೂ ಜನರು ಲಕ್ಷ್ಮೀದೇವಿ ಅಮ್ಮನವರ ಸನ್ನಿಧಿಗೆ ವಾಹನ ಸಮೇತ ಬಂದು ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆ. ದೇವಿಯ ಸನ್ನಿಧಿಯಲ್ಲಿ ಪೂಜೆ ಮಾಡಿಸಿದರೆ ವಾಹನ ಸುಗಮವಾಗಿ ಸಂಚರಿಸುತ್ತದೆ, ಅಪಘಾತಗಳಿಂದ ರಕ್ಷಣೆ ದೊರೆಯುತ್ತದೆ, ಅದೃಷ್ಟ ಒಲಿಯುತ್ತದೆ, ದೇವಿಯ ಕೃಪೆಯಿಂದ ವಾಹನ ಮಾಲೀಕರಿಗೆ ಶುಭಫಲ ದೊರೆಯುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಕೇವಲ ವೈಯಕ್ತಿಕ ಬಳಕೆಯ ವಾಹನಗಳಷ್ಟೇ ಅಲ್ಲದೆ, ರೈತರು ಹೊಸದಾಗಿ ಖರೀದಿಸುವ ಕೃಷಿ ವಾಹನಗಳಿಗೂ ಇಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ವಾಹನಗಳನ್ನು ದೇವಿಯ ಸನ್ನಿಧಿಗೆ ತಂದು ಪೂಜೆ ಮಾಡಿಸುವ ಮೂಲಕ ಹೊಸ ಆರಂಭಕ್ಕೆ ದೇವಿಯ ಅನುಗ್ರಹ ಕೋರುತ್ತಾರೆ.
ಪ್ರತಿ ಶುಕ್ರವಾರ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಹೂವನ್ನು ಕೇಳಿ ಹರಕೆ ಹೊರುವುದು ಇಲ್ಲಿನ ವಿಶೇಷ. ಹರಕೆ ಹೊತ್ತ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವರು ಹೊಸ ವಾಹನಗಳನ್ನು ದೇವಾಲಯದ ಆವರಣಕ್ಕೆ ತಂದು ಪೂಜೆ ಮಾಡಿಸಿದರೆ, ಮತ್ತೆ ಕೆಲವರು ಮಕ್ಕಳ ಫಲ, ಕೌಟುಂಬಿಕ ಸಮಸ್ಯೆಗಳು ಹಾಗೂ ಜಾನುವಾರುಗಳಿಗೆ ಸಂಬಂಧಿಸಿದ ಹರಕೆಗಳನ್ನು ಹೊತ್ತು ಬಂದು ದೇವಿಯ ದರ್ಶನ ಪಡೆದು ಹರಕೆ ತೀರಿಸುತ್ತಾರೆ. ಪ್ರತಿ ಶುಕ್ರವಾರ ಹರಕೆ ಹೊತ್ತ ಭಕ್ತರು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಕುಟುಂಬದ ಸಮಸ್ಯೆಗಳು ನಿವಾರಣೆಯಾಗಲಿ, ಮಕ್ಕಳ ಫಲ ದೊರೆಯಲಿ, ಜಾನುವಾರುಗಳಿಗೆ ಆರೋಗ್ಯಸಂತೃಪ್ತಿ ದೊರೆಯಲಿ ಎಂಬ ಆಶಯದೊಂದಿಗೆ ಭಕ್ತರು ದೇವಿಗೆ ಹರಕೆ ಹೊರುವುದು ಇಲ್ಲಿನ ಮತ್ತೊಂದು ವಿಶೇಷ.
ಹರಕೆ ಈಡೇರಿದ ಬಳಿಕ ಮತ್ತೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು, ಮಡಿಲುಅಕ್ಕಿ, ನೈವೇದ್ಯ ಅರ್ಪಿಸುವುದು ಸೇರಿದಂತೆ ಶಕ್ತಿಗೆ ಅನುಗುಣವಾಗಿ ವಿವಿಧ ಸೇವೆಗಳನ್ನು ನೆರವೇರಿಸುತ್ತಾರೆ. ಮಕ್ಕಳ ಫಲಕ್ಕಾಗಿ ಹಾಗೂ ಕುಟುಂಬದಲ್ಲಿ ನೆಮ್ಮದಿ ನೆಲೆಸಲಿ ಎಂಬ ಉದ್ದೇಶದಿಂದಲೂ ಅನೇಕರು ದೇವಿಯ ಮೊರೆ ಹೋಗುತ್ತಾರೆ. ಇನ್ನು ಜಾನುವಾರುಗಳ ಆರೋಗ್ಯ ಹಾಗೂ ಕ್ಷೇಮಕ್ಕಾಗಿ ದೇವಿಗೆ ಹರಕೆ ಹೊರುವ ಭಕ್ತರೂ ಇದ್ದಾರೆ. ಜಾನುವಾರುಗಳಿಗೆ ತೊಂದರೆ ಉಂಟಾದಾಗ ಅಥವಾ ಹಾಲು ಕೊಡದಿದ್ದಾಗ ದೇವಿಯ ಮೊರೆ ಹೋಗಿ ಹರಕೆ ಹೊತ್ತು, ಸಮಸ್ಯೆ ಪರಿಹಾರವಾದ ಬಳಿಕ ಹರಕೆ ತೀರಿಸುವ ನಂಬಿಕೆಯ ಆಚರಣೆ ಇಲ್ಲಿದೆ.
ತೆರಳುವ ಮಾರ್ಗ: ದಡಿಘಟ್ಟ ಗ್ರಾಮ ಶ್ರವಣಬೆಳಗೊಳಕ್ಕೆ ಸಮೀಪದಲ್ಲಿದ್ದು, ರಸ್ತೆ ಮಾರ್ಗದ ಮೂಲಕ ಸುಲಭವಾಗಿ ತಲುಪಬಹುದು. ಶ್ರವಣಬೆಳಗೊಳದಿಂದ 5 ಕಿ.ಮೀ., ಚನ್ನರಾಯಪಟ್ಟಣದಿಂದ 17 ಕಿ.ಮೀ. ಹಾಗೂ ಹಾಸನದಿಂದ 52 ಕಿ.ಮೀ. ದೂರದಲ್ಲಿದೆ.
ಪ್ರತಿ ಶುಕ್ರವಾರ ದೇವಾಲಯದಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಪೂಜೆ ನೆರವೇರುತ್ತದೆ. ಹರಕೆ ಹೊತ್ತ ಭಕ್ತರು ಬೆಳಗ್ಗಿನಿಂದಲೇ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ. ಕುಟುಂಬದ ಸಮಸ್ಯೆಗಳು ನಿವಾರಣೆಯಾಗಲಿ, ಮಕ್ಕಳ ಫಲ ದೊರೆಯಲಿ, ಜಾನುವಾರುಗಳಿಗೆ ಆರೋಗ್ಯಸಂತೃಪ್ತಿ ದೊರೆಯಲಿ ಎಂಬ ಆಶಯದೊಂದಿಗೆ ಭಕ್ತರು ದೇವಿಗೆ ಹರಕೆ ಹೊರುತ್ತಾರೆ.
ಚಿಕ್ಕೇಗೌಡ ಅರ್ಚಕರು, ಶ್ರೀ ಲಕ್ಷ್ಮಿದೇವಿ ದೇವಾಲಯ, ದಡಿಘಟ್ಟ
ಗ್ರಾಮೀಣ ಬದುಕಿನಲ್ಲಿ ಜಾನುವಾರುಗಳು ಕೃಷಿಕರ ಜೀವನದ ಅವಿಭಾಜ್ಯ ಅಂಗ. ಹೀಗಾಗಿ ಜಾನುವಾರುಗಳ ಆರೋಗ್ಯ ಹಾಗೂ ಕ್ಷೇಮಕ್ಕಾಗಿ ದೇವಿಗೆ ಹರಕೆ ಹೊರುವ ಭಕ್ತರೂ ಇದ್ದಾರೆ. ಜಾನುವಾರುಗಳಿಗೆ ತೊಂದರೆ ಉಂಟಾದಾಗ ಅಥವಾ ಹಾಲು ಕೊಡದಿದ್ದಾಗ ದೇವಿಯ ಮೊರೆ ಹೋಗಿ ಹರಕೆ ಹೊತ್ತು, ಸಮಸ್ಯೆ ಪರಿಹಾರವಾದ ಬಳಿಕ ಹರಕೆ ತೀರಿಸುವ ನಂಬಿಕೆಯ ಆಚರಣೆ ಇಲ್ಲಿದೆ.
ಲಕ್ಕೇಗೌಡ ಹಿರಿಯ ಅರ್ಚಕರು, ಶ್ರೀ ಲಕ್ಷ್ಮಿದೇವಿ ದೇವಾಲಯ, ದಡಿಘಟ್ಟ