ಕಕ್ಕೇರಾ ಸಮೀಪದ ಹುಣಸಿಹೊಳೆ ಬಳಿಯ ಹಜರತ್ ಮಹೆಬೂಬ್ ಸುಭಾನಿ ಜಾತ್ರಾ ಮಹೋತ್ಸವವನ್ನು ಪೂಜ್ಯ ಶ್ರೀ ನಂದಣ್ಣಪ್ಪ ಪೂಜಾರಿ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಪ್ರಭುಲಿಂಗ ಸ್ವಾಮೀಜಿ, ಭೀಮಣ್ಣ ಮುತ್ಯಾ, ಸೈಯಾದ್ ಖಾದ್ರಿ, ದಸ್ತಗಿರಸಾಹೇಬ್ ಶ್ಯಾನಿ ಪೂಜಾರಿ, ಅಲ್ಲಾಭಕ್ಷ ಹೊಳಿ ಪೂಜಾರಿ ಇತರರಿದ್ದರು.
- ಹೈದರಾಬಾದ್ನ ಸೈಯ್ಯದ್ ಭಾಷಾ ಖಾದ್ರಿ ಅಭಿಮತ
- ಹುಣಸಗಿಹೊಳೆ ಮಹೆಬೂಬ್ ಸುಭಾನಿ ಜಾತ್ರೆ
ಕಕ್ಕೇರಾ: ಜಗತ್ತಿನಲ್ಲಿರುವ ಎಲ್ಲ ದೇವರುಗಳು ಒಂದೆಯಾಗಿದ್ದು, ಹೆಸರು ಮಾತ್ರ ಹಲವು ಇವೆ. ದೇಶದಲ್ಲಿರುವ ಎಲ್ಲ ಧರ್ಮಿಯರು ತಮಗೆ ಇಷ್ಟವಾದ ದೇವರನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಿದ್ದಲ್ಲಿ ಸಕಲ ಸಂಪತ್ತು ದೊರೆಯುತ್ತದೆ ಎಂದು ಹೈದರಾಬಾದ್ನ ಸೈಯ್ಯದ್ ಭಾಷಾ ಖಾದ್ರಿ ಹೇಳಿದರು.
ಸಮೀಪದ ಹುಣಸಿಹೊಳೆ ಹತ್ತಿರದ ಹಜರತ್ ಮಹೆಬೂಬ್ ಸುಭಾನಿ ದರ್ಗಾದಲ್ಲಿ ಗುರುವಾರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಭವ್ಯ ಭಾರತದಲ್ಲಿ ಎಲ್ಲ ಧರ್ಮಿಯರಿದ್ದು ತಮ್ಮ ತಮ್ಮ ಧರ್ಮದ ದೇವರುಗಳನ್ನು ಶ್ರದ್ಧಾ ಹಾಗೂ ಭಕ್ತಿಯಿಂದ ಪೂಜಿಸುತ್ತಾರೆ. ಎಲ್ಲ ಧರ್ಮಿಯರು ನಮ್ಮಲ್ಲಿರುವ ರಕ್ತ ಒಂದೇ ಎನ್ನುವ ಭಾವನೆಯೊಂದಿಗೆ ಮುನ್ನಡೆದಾಗ ಮಾತ್ರ ಎಲ್ಲರಲ್ಲಿ ಭಾವೈಕ್ಯತೆಯ ಭಾತೃತ್ವ ಬೆಳೆಯಲು ಸಾಧ್ಯ ಎಂದರು.
ದೇವಾಪೂರದ ರವಿ ಮುತ್ಯಾ ಮಾತನಾಡಿ, ಸರ್ವಧರ್ಮಿಯರ ಬಡಜನರ ಉದ್ಧಾರಕ್ಕಾಗಿ ಹಾಗೂ ವೃದ್ಧರ ಆಶ್ರಯಕ್ಕಾಗಿ ಹಜರತ್ ದಸ್ತಗಿರಸಾಹೇಬ ಶ್ಯಾನಿ ಹಾಗೂ ಅಲ್ಲಾಭಕ್ಷ ಹೊಳಿಯವರು ಹಜರತ್ ಮಹೆಬೂಬ್ ಸುಭಾನಿ ಛಿಲ್ಲಾ ಅಶೋರ ಖಾನಾ ಮತ್ತು ರುದ್ರಾಶ್ರಮ ನಿರ್ಮಿಸುವಲ್ಲಿ ಬಹುವಾಗಿ ಶ್ರಮಿಸಿದ್ದಾರೆ ಎಂದು ಬಣ್ಣಿಸಿದರು.
ಇದಕ್ಕೂ ಮುಂಚೆ ಬೆಳಿಗ್ಗೆ ಬಂಡೊಳ್ಳಿ ಗ್ರಾಮದ ಮಸೀದಿಯಿಂದ ಕಳಸವನ್ನು ಶರಣಗೌಡರ ನೇತೃತ್ವದಲ್ಲಿ ವಾದ್ಯಮೇಳದೊಂದಿಗೆ ದರ್ಗಾದವರೆಗೆ ಗಂಧಾ, ದೀಪಾ ಅದ್ದೂರಿ ಮೆರವಣಿಗೆ ಮೂಲಕ ತರಲಾಯಿತು.
ಪೂಜ್ಯರಾದ ನಂದಣ್ಣಪ್ಪ ಪೂಜಾರಿಯವರು ದೀಪ ಬೆಳಗಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ದಸ್ತಗಿರಸಾಹೇಬ ಶ್ಯಾನಿ ಪೂಜಾರಿ ದಿವ್ಯಸಾನಿಧ್ಯ ವಹಿಸಿದ್ದರು. ಅಲಾಹೀ ಪರಂಪರೆಯ ಸಂತರನ್ನು ಸನ್ಮಾನಿಸಲಾಯಿತು.
ಸುರಪುರದ ಕಡ್ಲೆಪ್ಪ ಮಠದ ಪೂಜ್ಯ ಪ್ರಭುಲಿಂಗ ಮಹಾಸ್ವಾಮೀಜಿ, ಭೀಮಣ್ಣ ಮುತ್ಯಾ ಪೂಲಭಾವಿ, ರವಿ ಮುತ್ಯಾ ದೇವಾಪೂರ, ಅಭಿಮುಲ್ಲಾ ಖಾದ್ರಿ ಹುಣಸಗಿ, ಅಲ್ಲಾಭಕ್ಷ ಹೊಳಿ ಪೂಜಾರಿ, ಬಾಬು ಸಾಹೇಬ ಜಾಲಹಳ್ಳಿ, ರಾಚಪ್ಪ ಮುತ್ಯಾ ಕೆಂಭಾವಿ, ಸ್ವಾಮಿ ಪೂಜಾರಿ ಲಿಂಗದಳ್ಳಿ, ಗ್ಯಾನಪ್ಪ ಮುತ್ಯಾ, ಶರಣಗೌಡ ಬಂಡೊಳ್ಳಿ, ಮಮ್ಮದ ಶರೀಪ್ ಸೂಳೀಭಾವಿ, ಯಮುನಪ್ಪ ದೊರೆ, ಸಿದ್ದು ದೊರೆ, ಆಂಜನೇಯ ಪೂಜಾರಿ, ಭೂಮಿಕಾ ಅಮ್ಮ, ಸಿದ್ರಾಮ ಅವಂಟಿ, ರತ್ನರಾಜ ಶ್ಯಾಲಿಮನಿ, ಅಮರಪ್ಪ ಮಂಡಿ ಸೇರಿದಂತೆ ಸೂಪಿ&ಸಂತರು, ಶರಣ&ಶರಣಿಯರು ಅಪಾರ ಭಕ್ತರಿದ್ದರು. ಮನೋಹರ ಪತ್ತಾರ ಶಿಕ್ಷಕರು ನಿರೂಪಿಸಿ ವಂದಿಸಿದರು.