ಮಳವಳ್ಳಿ ತಾಲೂಕಿನ ಒಕ್ಕರಹಳ್ಳಿ ಗ್ರಾಮದ ತೋಟದ ಮನೆಯ ಆವರಣದಲ್ಲಿದ್ದ ಸಾಕು ನಾಯಿಯನ್ನು ಭಾನುವಾರ ರಾತ್ರಿ ಚಿರತೆ ಎಳೆದೊಯ್ಯುತ್ತಿರುವುದು. 
ರಾಜ್ಯ

ಚಿರತೆ ದಾಳಿಗೆ ಮೇಕೆ, ನಾಯಿ ಬಲಿ

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಹೋಬಳಿ ಎರಡು ಗ್ರಾಮಗಳಲ್ಲಿ ಭಾನುವಾರ ಚಿರತೆಗಳ ಪ್ರತ್ಯೇಕ ದಾಳಿಯಲ್ಲಿ ಮೇಕೆ ಮತ್ತು ಸಾಕು ನಾಯಿಯೊಂದನ್ನು ಬಲಿ ಪಡೆದಿವೆ.
ಒಕ್ಕರಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಂತೆ ನೀವೃತ್ತ ಪೊಲೀಸ್ ಅಧಿಕಾರಿ ಲಕ್ಷ್ಮೀಪತಿ ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಮನೆ ಆವರಣಕ್ಕೆ ಲಗ್ಗೆ ಇಟ್ಟ ಚಿರತೆ ಮನೆ ಮುಂದೆ ಕಟ್ಟಿದ್ದ ಸಾಕು ನಾಯಿಯನ್ನು ಕಚ್ಚಿ ಎಳೆದೊಯ್ದಿದೆ. ಬೆಳಗ್ಗೆ ಎದ್ದು ಬಂದ ಮಾಲೀಕನಿಗೆ ನಾಯಿ ಕಾಣದಿರುವುದನ್ನು ಗಮನಿಸಿ ಮನೆಗೆ ಅಳವಡಿಸಲಾಗಿದ್ದ ಸಿಸಿಟಿವಿ ಪರಿಶೀಲನೆ ಮಾಡಲಾಗಿ ಚಿರತೆ ದಾಳಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಸಹಳ್ಳಿ ಗ್ರಾಮದ ರೈತ ಮಹದೇವ ಎಂಬುವರು ಜಮೀನಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಮೇಕೆಯೊಂದನ್ನು ಎಳೆದೊಯ್ದಿದೆ. ಇದನ್ನು ಕಂಡ ರೈತ ಭಯದಿಂದ ಗ್ರಾಮಕ್ಕೆ ಓಡಿ ಬಂದು ಗ್ರಾಮಸ್ಥರನ್ನು ಕರೆದುಕೊಂಡು ಹೋಗುವಷ್ಟರಲ್ಲಿ ಮೇಕೆಯನ್ನು ಕೊಂದು ಚಿರತೆ ಪರಾರಿಯಾಗಿತ್ತು.
ಚಿರತೆಗಳ ಉಪಟಳ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿರುವುದರಿಂದ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಈಗಾಗಲೇ ಅಕ್ಕಪಕ್ಕದ ಗ್ರಾಮಗಳ ಜಮೀನುಗಳಲ್ಲಿ ಕುರಿ, ಮೇಕೆ, ಕರುಗಳ ಮೇಲೆ ದಾಳಿ ಇಡುತ್ತಿದ್ದ ಚಿರತೆಗಳ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.