ರಾಜ್ಯ

ರಾಜ್ಯದಲ್ಲಿ ಸಪ್ತ ಉತ್ಪಾದನಾ ಕ್ಲಸ್ಟರ್​ ಸ್ಥಾಪನೆ ಗುರಿ: ಹೊಸ ಏರೋಸ್ಪೇಸ್​, ರಕ್ಷಣಾ ನೀತಿ ಅಡಿ 5 ವರ್ಷದಲ್ಲಿ 60 ಸಾವಿರ ಕೋಟಿ ರೂ ಹೂಡಿಕೆ ಆಕರ್ಷಣೆ

  • ಬಂಡವಾಳ ಹೂಡಿಕೆಗೆ ಸಹಾಯಧನ

  • ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಉತ್ವೇಜಿಸುವ ಸಂಕಲ್ಪ

  • ಕೈಗಾರಿಕೆಗಳ ಜತೆಗೆ ನವೋದ್ಯಮಕ್ಕೆ ಬೆಂಬಲ

ಹರೀಶ್​ ಬೇಲೂರು

ಬೆಂಗಳೂರು: ಕರ್ನಾಟಕವನ್ನು ಪ್ರಮುಖ ಏರೋಸ್ಪೇಸ್​, ರಕ್ಷಣಾ, ವಿಮಾನಯಾನ, ಬಾಹ್ಯಾಕಾಶ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ, 2026&31ನೇ ಸಾಲಿನ "ನೂತನ ಏರೋಸ್ಪೇಸ್​ ಮತ್ತು ರಕ್ಷಣಾ ನೀತಿ' ಜಾರಿಗೆ ತಂದಿದೆ. ಮುಂದಿನ 5 ವರ್ಷಗಳಲ್ಲಿ ಈ ವಲಯದಲ್ಲಿ 60 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸುವುದು ಹಾಗೂ 60 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿರುವ ಈ ನೀತಿ ಅಡಿ ಕೈಗಾರಿಕಾ ಅಭಿವೃದ್ಧಿಗಾಗಿ 7 ಏರೋಸ್ಪೇಸ್​ ಮತ್ತು ರಕ್ಷಣಾ ಕ್ಲಸ್ಟರ್​ ಸ್ಥಾಪಿಸುವುದನ್ನು ಪ್ರಸ್ತಾಪಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕದ ಏರೋಸ್ಪೇಸ್​ ಮತ್ತು ರಕ್ಷಣಾ ವಲಯದ ಹಾಲಿ ಸಾಮರ್ಥ್ಯ ವಿಸ್ತರಿಸುವುದರ ಜತೆಗೆ ಹೊಸ ತಂತ್ರಜ್ಞಾನ, ಉತ್ಪಾದನಾ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಈ ಕ್ಷೇತ್ರಗಳಲ್ಲಿ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಉತ್ಪಾದನೆ ಮತ್ತು ರಫ್ತು ಚಟುವಟಿಕೆ ಉತ್ತೇಜಿಸಲು ಉದ್ದೇಶಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್​ಎಂಇ) ಹಾಗೂ ನವೋದ್ಯಮ ಕೂಡ ಏರೋಸ್ಪೇಸ್​ ಮತ್ತು ರಕ್ಷಣಾ ವಲಯದ ಪೂರೈಕೆ ಸರಪಳಿಯಲ್ಲಿ ಪಾಲ್ಗೊಳ್ಳಲು ನೀತಿಯಡಿ ಬೆಂಬಲ ಪಡೆಯಲಿವೆ. ನೀತಿಯ ಅನುಷ್ಠಾನ ಮತ್ತು ಪ್ರಗತಿ ಪರಿಶೀಲನೆಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯಮಟ್ಟದ ಸಮನ್ವಯ ಸಮಿತಿ ರಚಿಸಲಾಗುತ್ತದೆ. ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಎಂಟು ಕ್ಷೇತ್ರಗಳಿಗೆ ಆದ್ಯತೆ

  1. ರಕ್ಷಣಾ ವಿಮಾನ, ನಾಗರಿಕ ವಿಮಾನಯಾನ, ಇಂಜಿನ್​ಗಳ ಸಮಗ್ರ ಉತ್ಪಾದನೆ, ಅಂತಿಮ ಜೋಡಣೆ

  2. ನಾಗರಿಕ ಮತ್ತು ರಕ್ಷಣಾ ವಿಮಾನಗಳ ನಿರ್ವಹಣೆ, ದುರಸ್ತಿ

  3. ಉಪಗ್ರಹಗಳು, ಉಡಾವಣಾ ವಾಹನಗಳು, ಬಾಹ್ಯಾಕಾಶ ಬಿಡಿಭಾಗಗಳ ಉತ್ಪಾದನೆ

  4. ಏರೋಸ್ಪೇಸ್​ ಮತ್ತು ರಕ್ಷಣಾ ಕ್ಷೇತ್ರಕ್ಕೆ ಅಗತ್ಯ ಇರುವ ಸುಧಾರಿತ, ವಿಶೇಷ ವಸ್ತುಗಳ ತಯಾರಿಕೆ

  5. ರಕ್ಷಣಾ, ವಿಮಾನಯಾನ, ಬಾಹ್ಯಾಕಾಶ ಎಲೆಕ್ಟ್ರಾನಿಕ್ಸ್​ ಉತ್ಪಾದನೆ

  6. ಮಾನವರಹಿತ ವೈಮಾನಿಕ ವ್ಯವಸ್ಥೆಗಳು (ಡ್ರೋನ್​ ಮತ್ತು ಯುಎವಿ) ಅವುಗಳ ಅಂತಿಮ ಜೋಡಣೆ

  7. ಪರಿಸರಸ್ನೇಹಿ ವಿಮಾನಯಾನ, ವಿದ್ಯುತ್​ ಚಾಲಿತ ವಿಮಾನಗಳು, ಅಡ್ವಾನ್ಸ್​ಡ್​ ಏರ್​ ಮೊಬಿಲಿಟಿ

  8. ಮದ್ದುಗುಂಡು, ರಕ್ಷಣಾ ಸಾಮಗ್ರಿಗಳ ಉತ್ಪಾದನೆ

ನಮ್ಮ ಇಲಾಖೆ ರೂಪಿಸಿರುವ ಈ ನೀತಿಯು ಕರ್ನಾಟಕದ ಏರೋಸ್ಪೇಸ್​ ಮತ್ತು ರಕ್ಷಣಾ ವಲಯದ ಹಾಲಿ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ. ರಾಜ್ಯವು ಈಗಾಗಲೇ ದೇಶದ ಏರೋಸ್ಪೇಸ್​ ಮತ್ತು ರಕ್ಷಣಾ ಉದ್ಯಮದಲ್ಲಿ ಪ್ರಮುಖ ಸ್ಥಾನ ಹೊಂದಿದೆ. ಹಾಗಾಗಿ, ವಿಮಾನ ಮತ್ತು ರಕ್ಷಣಾ ಉತ್ಪಾದನಾ ಕೇಂದ್ರದಿಂದ ಬಾಹ್ಯಾಕಾಶ ತಂತ್ರಜ್ಞಾನ, ಡ್ರೋನ್​, ರಕ್ಷಣಾ ಎಲೆಕ್ಟ್ರಾನಿಕ್ಸ್​, ವಿದ್ಯುತ್​ ವಿಮಾನಯಾನ, ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳ ಜಾಗತಿಕ ಕೇಂದ್ರವನ್ನಾಗಿ ಕರ್ನಾಟಕವನ್ನು ಬೆಳೆಸುವುದು ಹೊಸ ನೀತಿಯ ಪ್ರಮುಖ ಆಶಯವಾಗಿದೆ.
ಎಂ.ಬಿ. ಪಾಟೀಲ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಚಿವ

ದೇಶದ ರಕ್ಷಣಾ ಸೇವೆಗಳಿಗೆ ಅಗತ್ಯವಿರುವ ವಿಮಾನ ಮತ್ತು ಹೆಲಿಕಾಪ್ಟರ್​ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.67ರಷ್ಟಿದೆ. ದೇಶದ ಏರೋಸ್ಪೇಸ್​ ಸಂಬಂಧಿತ ರಫ್ತಿನಲ್ಲಿ ರಾಜ್ಯದ ಪಾಲು ಶೇ.65ರಷ್ಟಿದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರಿನಲ್ಲಿ ದೇಶದ ಏರೋಸ್ಪೇಸ್​ ಉತ್ಪಾದನೆ, ರಕ್ಷಣಾ ಸಂಶೋಧನೆಯ ಅಂದಾಜು ಶೇ.60 ಚಟುವಟಿಕೆಗಳು ನಡೆಯುತ್ತಿದ್ದು, ಈ ವಲಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಏರೋಸ್ಪೇಸ್​ ಮತ್ತು ರಕ್ಷಣಾ ಉತ್ಪನ್ನಗಳ ಪರೀಕ್ಷೆ, ಪ್ರಮಾಣೀಕರಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರವು 2 ಪ್ರಮುಖ ಸಾಮಾನ್ಯ ಪರೀಕ್ಷೆ, ಪ್ರಮಾಣೀಕರಣ ಕೇಂದ್ರಗಳ ಬಂಡವಾಳ ವೆಚ್ಚವನ್ನು ಸಂಪೂರ್ಣವಾಗಿ ಭರಿಸಲು ಉದ್ದೇಶಿಸಿದೆ. ಡ್ರೋನ್​ ಪರೀಕ್ಷೆ, ರಾಡಾರ್​, ಎಲೆಕ್ಟ್ರಾನಿಕ್​ ಯುದ್ಧ ವ್ಯವಸ್ಥೆ, ವಿಮಾನಯಾನ ಎಲೆಕ್ಟ್ರಾನಿಕ್ಸ್​, ವಸ್ತುಗಳ ಗುಣಮಟ್ಟ ಪರಿಶೀಲನೆ, ಪರಿಸರ ಪರೀಕ್ಷೆ ಮತ್ತು ಸಾಫ್ಟ್​ವೇರ್​ ಪ್ರಮಾಣೀಕರಣ ಸೇರಿ ಹಲವು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

7 ಉತ್ಪಾದನಾ ಕ್ಲಸ್ಟರ್​ ಸ್ಥಾಪನೆ: ಉದ್ಯಮಗಳ ಬೆಳವಣಿಗೆ, ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ 7 ಏರೋಸ್ಪೇಸ್​ ಮತ್ತು ರಕ್ಷಣಾ ಕ್ಲಸ್ಟರ್​ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ವಿಜಯಪುರ, ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ರನ್​ವೇ ಸಂಪರ್ಕ ಹೊಂದಿರುವ ಉತ್ಪಾದನಾ ಪ್ರದೇಶ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದರ ಜತೆಗೆ 3 ವಿಶೇಷ ಉತ್ಪಾದನಾ ಕ್ಲಸ್ಟರ್​ಗಳನ್ನು ಸ್ಥಾಪಿಸಲಾಗುತ್ತದೆ. ಬೆಂಗಳೂರಿನ ಜಂಗಮಕೋಟೆಯಲ್ಲಿ ಏವಿಯಾನಿಕ್ಸ್​ ಕ್ಲಸ್ಟರ್​, ಚಿತ್ರದುರ್ಗದಲ್ಲಿ ಬಾಹ್ಯಾಕಾಶ ಉತ್ಪಾದನಾ ಕ್ಲಸ್ಟರ್​ ಮತ್ತು ಚಿಕ್ಕಬಳ್ಳಾಪುರದಲ್ಲಿ ಯುಎವಿ, ಯುಎಎಂ ಕ್ಲಸ್ಟರ್​ ಸ್ಥಾಪಿಸಲಾಗುತ್ತದೆ. ಈ ಕ್ಲಸ್ಟರ್​ಗಳಲ್ಲಿ ಉತ್ಪಾದನಾ ಘಟಕಗಳ ಜತೆಗೆ ಸಂಶೋಧನೆ, ಪರೀಕ್ಷೆ, ತರಬೇತಿ, ಗೋದಾಮು, ವಿದ್ಯುತ್​ ಮತ್ತು ನೀರು ಪೂರೈಕೆಯಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹೊಸ ಕ್ಲಸ್ಟರ್​ಗಳಲ್ಲಿ ಮೊದಲ ಮೂರು ಹೂಡಿಕೆದಾರರಿಗೆ ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ಭೂಮಿ ಖರೀದಿ ವೆಚ್ಚದ ಶೇ.50, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶೇ.25 ಸಬ್ಸಿಡಿ ನೀಡಲು ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಆಕರ್ಷಕ ಪ್ರೋತ್ಸಾಹಧನ: ಹೊಸ ನೀತಿಯಡಿ ಹೂಡಿಕೆದಾರರಿಗೆ ವಲಯವಾರು ಬಂಡವಾಳ ಹೂಡಿಕೆ ಸಹಾಯಧನ ಅಥವಾ ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪಿಎಲ್​ಐ) ನೀಡಲಾಗುತ್ತದೆ. ಮುದ್ರಾಂಕ ಶುಲ್ಕ ವಿನಾಯಿತಿ, ರಿಯಾಯಿತಿ ನೋಂದಣಿ ಶುಲ್ಕ ಹಾಗೂ ಭೂ ಪರಿವರ್ತನೆ ಶುಲ್ಕದ ಶೇ.100 ಮರುಪಾವತಿಯ ಸೌಲಭ್ಯಗಳನ್ನೂ ಒದಗಿಸಲಾಗಿದೆ. 1,000 ಕೋಟಿ ರೂ. ಅಧಿಕ ಹೂಡಿಕೆ ಮಾಡುವ ಯೋಜನೆಗಳು, ಕೆಲವು ಉದಯೋನ್ಮುಖ ಕ್ಷೇತ್ರಗಳ ಯೋಜನೆಗಳಿಗೆ ವಿಶೇಷ ಪ್ರೋತ್ಸಾಹ ಪ್ಯಾಕೇಜ್​ ನೀಡಲು ಅವಕಾಶವಿದೆ. ಸಮಗ್ರ ಅಂತಿಮ ಜೋಡಣೆ ಯೋಜನೆಗಳಿಗೆ ಕನಿಷ್ಠ 750 ಕೋಟಿ ರೂ. ಹೂಡಿಕೆ ಅಗತ್ಯವಿದೆ. ಈ ಸೌಲಭ್ಯಗಳು ಮುಖ್ಯವಾಗಿ ಹೊಸ ಹೂಡಿಕೆ ಅಥವಾ ಈಗಿರುವ ಘಟಕಗಳ ಕನಿಷ್ಠ ಶೇ.25 ಸಾಮರ್ಥ್ಯ ವಿಸ್ತರಣೆಗೆ ಅನ್ವಯಿಸಲಿವೆ.