Goal to eliminate uterine cancer
ತಿಪಟೂರು: ಹೆಣ್ಣುಮಕ್ಕಳ ಜೀವ ತಿನ್ನುತ್ತಿರುವ ಗರ್ಭಕೋಶ ಕ್ಯಾನ್ಸರ್ ಅನ್ನು ಕೊನೆಗಾಣಿಸಲು ಸರ್ಕಾರ ಪಣ ತೊಟ್ಟಿದೆ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಎಚ್ಪಿವಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಹೆಣ್ಣು ಮಕ್ಕಳ ಜೀವಕ್ಕೆ ಮಾರಕವಾಗಿರುವ ಗರ್ಭಕೋಶ ಕ್ಯಾನ್ಸರ್ ಹಿಂದಿನಿಂದಲೂ ಇದೆ. ಆದರೆ ಲಸಿಕೆಯ ವೆಚ್ಚ ಒಂದು ಡೋಸ್ಗೆ 5ರಿಂದ 8 ಸಾವಿರ ಇದ್ದ ಕಾರಣ ಉಳ್ಳವರು ಮಾತ್ರ ದುಬಾರಿ ಬೆಲೆ ತೆತ್ತು ಎಚ್ಪಿವಿ ಲಸಿಕೆ ಪಡೆಯಲು ಸಾಧ್ಯವಾಗಿತ್ತು. ಇದನ್ನು ಮನಗಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಮಾಯಕ ಹೆಣ್ಣುಮಕ್ಕಳ ಜೀವ ಉಳಿಸುವ ಸಲುವಾಗಿ ದುಬಾರಿ ಬೆಲೆಯ ಈ ಲಲಸಿಕೆಯನ್ನು ಸಂಪೂರ್ಣ ಉಚಿತವಾಗಿ ಪೂರೈಸುತ್ತಿದೆ. ಸಮೀಕ್ಷೆಯ ಪ್ರಕಾರ ಪ್ರತಿ 7 ನಿಮಿಷಕ್ಕೆ ಓರ್ವ ಮಹಿಳೆ ಗರ್ಭಕೋಶದ ಕ್ಯಾನ್ಸರಿನಿಂದ ಮೃತಪಡುತ್ತಿದ್ದು, ಈ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕೆಂದು ಸರ್ಕಾರ ಈ ಯೋಜನೆ ಜಾರಿಕೆ ತಂದಿದೆ ಎಂದರು.
14ರಿಂದ 15 ವಯಸ್ಸಿನೊಳಗಿನ ಬಹುತೇಕ ಪ್ರೌಡಶಾಲಾ ಹೆಣ್ಣು ಮಕ್ಕಳು ಗರ್ಭಕೋಶ ಕ್ಯಾನ್ಸರಿಗೆ ತುತ್ತಾಗುತ್ತಿರುವುದನ್ನು ಸಮೀಕ್ಷೆಯಿಂದ ಗುರುತಿಸಿ, ಪ್ರತಿ 6 ತಿಂಗಳಿಗೊಮ್ಮೆ ಎರಡು ಬಾರಿ ಎಚ್ಪಿವಿ ಲಸಿಕೆಯನ್ನು ನೀಡಲಾಗುವುದು. ತಾಲೂಕಿನ ಎಲ್ಲ 11 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಕಡ್ಡಾಯವಾಗಿ ಜಾರಿಗೊಳಿಸಿ, ಶೇ.100 ಪ್ರಗತಿ ಸಾಧಿಸಿ ಎಂದು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ತಾಪಂ ಇಒ ಎಚ್.ಎಂ.ಸುದರ್ಶನ್ ಮಾತನಾಡಿ, ಜಿಲ್ಲೆಯಲ್ಲಿ 14 ರಿಂದ 15 ವಯಸ್ಸಿನ ಒಟ್ಟು 24,950 ಹೆಣ್ಣುಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ ತಿಪಟೂರು ತಾಲೂಕಿನಲ್ಲಿ 1,540 ಹೆಣ್ಣುಮಕ್ಕಳಿದ್ದಾರೆ. ಕಳೆದ ಮೂರು ದಿನಗಳಿಂದ ಲಸಿಕಾ ಕಾರ್ಯಕ್ರಮ ಜಾರಿಯಲ್ಲಿದ್ದು, ಶೇ.81 ಪ್ರಗತಿ ಸಾಧಿಸಲಾಗಿದ್ದು. ಶೇ.100 ಗುರಿ ತಲುಪುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಲಾಗುತ್ತಿದೆ, ಶಾಲೆ ಬಿಟ್ಟ ಹೆಣ್ಣು ಮಕ್ಕಳನ್ನೂ ಗುರುತಿಸಿ ಲಸಿಕೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು ಮಾಶಹಿತಿ ನೀಡಿದರು.