ಡಾ. ಪುರುಷೋತ್ತಮ ಬಿಳಿಮಲೆ 
ರಾಜ್ಯ

ಕನ್ನಡ ಮಾಧ್ಯಮ ಶಾಲೆ ಮುಚ್ಚುವ ಗೋವಾ ಸರ್ಕಾರದ ಕ್ರಮಕ್ಕೆ ಖಂಡನೆ

ಪ್ರಮುಖ ಮುಖ್ಯಾಂಶಗಳು

  • * ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪತ್ರ
ಬೆಂಗಳೂರು: ಗೋವಾ ರಾಜ್ಯದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ನೆಪದಲ್ಲಿ ಮುಚ್ಚಲು ಹೊರಟಿರುವ ಅಲ್ಲಿನ ಸರ್ಕಾರದ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಗೋವಾ ಸರ್ಕಾರದ ಈ ನಡೆಯನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಹೇಳಿಕೆ ಅಘಾತಕಾರಿಯಾಗಿದೆ. ಜತೆಗೆ, ಭಾರತ ಸಂವಿಧಾನವು ಪ್ರತಿಪಾದಿಸುವ ವೈವಿಧ್ಯತೆಯಲ್ಲಿ ಏಕತೆಯ ಆಶಯಕ್ಕೂ ವಿರುದ್ಧವಾಗಿದೆ. ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯು ಭಾಷಾ ವೈವಿಧ್ಯ ಮತ್ತು ಸಹಬಾಳ್ವೆಯ ಮೌಲ್ಯಗಳಿಗೆ ಧಕ್ಕೆಯುಂಟು ಮಾಡಬಹುದು ಎಂಬುದಕ್ಕೂ ಇದು ಉದಾಹರಣೆಯಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಸಚಿವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೊಂದನ್ನು ತಕ್ಷಣವೇ ಗೋವಾಕ್ಕೆ ಕಳುಹಿಸಿ, ಅಲ್ಲಿನ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ, ಕನ್ನಡ ಶಾಲೆಗಳನ್ನು ಮುಚ್ಚದಂತೆ ತಡೆಯಬೇಕು. ಪ್ರಾದೇಶಕ ಭಾಷೆ ಅಥವಾ ಭಾಷಾ ಅಲ್ಪಸಂಖ್ಯಾತರ ಅಸ್ತಿತ್ವಕ್ಕೆ ಮಾರಕವಾಗದಂತೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೋರಿದ್ದಾರೆ.
ಮಾತೃಭಾಷೆಯಲ್ಲಿ ಕಲಿಯುವ ಅವಕಾಶವನ್ನು ಕಳೆದುಕೊಳ್ಳುತ್ತಿರುವ ಗೋವಾ ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಹಾಯಕ್ಕೆ ಕೂಡಲೇ ಧಾವಿಸಬೇಕು ಎಂದು ಅವರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಒತ್ತಾಯಿಸಿದ್ದಾರೆ.
ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ ಗೋವಾ ಸರ್ಕಾರದ ತೀರ್ಮಾನವು ಕೇವಲ ಆಡಳಿತಾತ್ಮಕವಾಗಿಲ್ಲ. ಬದಲಿಗೆ ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಪ್ರಯತ್ನ ಎಂದಿದ್ದಾರೆ.