ವಿಜಯಪುರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಿಇಒ ರಿಷಿ ಆನಂದ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ, ಅಭಿಯಂತರರಾದ ವಿ.ಬಿ. ಗೊಂಗಡಿ, ತಾರಾನಾಥ ಶಂಕರ, ಆರ್.ಎಸ್. ಬಂಡಿ ಇತರರಿದ್ದಾರೆ. 
ರಾಜ್ಯ

ಕಾಮಗಾರಿಗೆ ವೇಗದ ಸ್ಪರ್ಶ ನೀಡಿ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಿಷಿ ಆನಂದ ಸೂಚನೆ
  • ನೀರಿನ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ವಿಜಯಪುರ: ಮಹತ್ವಾಕಾಂಕ್ಷೆಯ ಜಲಧಾರೆ ಯೋಜನೆಯ ಕಾಮಗಾರಿ ಶೇ. 81.25ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು, ಕಾಮಗಾರಿಗೆ ವೇಗದ ಸ್ಪರ್ಶ ನೀಡಿ, 2027ರ ಫೆಬ್ರವರಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ‘ಬಹು ಗ್ರಾಮ ಕುಡಿಯುವ ನೀರು ಜಲಧಾರೆ ಯೋಜನೆ ಹಾಗೂ ಜಲ ಜೀವನ್ ಮಿಷನ್ ಅಡಿಯಲ್ಲಿ ಹರ್ ಘರ್ ಜಲ್ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪೈಪ್ ಲೈನ್ ಕಾಮಗಾರಿ ಬಾಕಿ ಉಳಿದಿರುವುದು ಆತಂಕಕಾರಿ ವಿಷಯ. ಈಗಾಗಲೇ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು ಪರಿಹಾರವಾಗಿದ್ದರೂ, ಕಾಮಗಾರಿ ಪೂರ್ಣಗೊಳ್ಳದಿರುವುದು ಖೇದಕರ. ಜೂನ್ 15ರೊಳಗೆ ಬಾಕಿ ಪೈಪ್ ಲೈನ್ ಕಾಮಗಾರಿಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ಗ್ರಾಮಗಳಲ್ಲಿ ಕಾರ್ಮಿಕರ ತಂಡ ಹೆಚ್ಚಿಸಿ ಹೈಡ್ರೋ ಟೆಸ್ಟಿಂಗ್ ಪ್ರಕ್ರಿಯೆ ತ್ವರಿತಗೊಳಿಸಿ ಕನಿಷ್ಠ ಶೇ. 70ರಷ್ಟು ಗುರಿ ಸಾಧಿಸಲು ಮತ್ತು ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಲೈನ್ ಕ್ರಾಸಿಂಗ್ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಬಾಕಿ ಅನುಮತಿಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಹರ್ ಘರ್ ಜಲ್ ಘೋಷಣೆ ಮಾಡುವ ಕುರಿತು ಮಾತನಾಡಿದ ಸಿಇಒ, ಹರ್ ಘರ್ ಜಲ್ ಪ್ರಗತಿ ತುಂಬಾ ಕಡಿಮೆಯಾಗಿದ್ದು, ಎಲ್ಲ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರರು, ಸಹಾಯಕ ಇಂಜಿನಿಯರರು ಹಾಗೂ ಕಿರಿಯ ಇಂಜಿನಿಯರ್ ಅವರು ಸಂಬಂಧಪಟ್ಟ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಪ್ರತಿ ಸಹಾಯಕ ಇಂಜಿನಿಯರರು ಮತ್ತು ಕಿರಿಯ ಇಂಜಿನಿಯರ್‌ಗಳಿಗೆ 5 ಗ್ರಾಮಗಳನ್ನು ಹರ್ ಘರ್ ಜಲ್ ಘೋಷಿಸಲು ಗುರಿ ನಿಗದಿಪಡಿಸಿ ಮೇ 18ರೊಳಗೆ ಕನಿಷ್ಠ 100 ಗ್ರಾಮಗಳನ್ನು ಹರ್ ಘರ್ ಜಲ್ ಯೋಜನೆಯಡಿ ಘೋಷಿಸಲು ಸೂಚಿಸಿದರು.
ಜಿಲ್ಲೆಯ ಯಾವುದೇ ಗ್ರಾಮ ಹಾಗೂ ಜನವಸತಿಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗಬಾರದು. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಎಲ್ಲ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಸರಿಯಾಗಿ ನಿರ್ವಹಿಸಬೇಕು. ಸಮಸ್ಯಾತ್ಮಕ ಗ್ರಾಮಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು. ಎಲ್ಲ ತಾಲೂಕು ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂಖ್ಯೆಗಳು ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಲು ಸಭೆ ನಿರ್ಧರಿಸಿತು.
ನೀರು ಸರಬರಾಜು ಮಾಡುವ ಪೂರ್ವ ಕಡ್ಡಾಯವಾಗಿ ಕ್ಷೇತ್ರ ಪರೀಕ್ಷಾ ಕಿಟ್ ಮೂಲಕ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಗ್ರಾಮೀಣ ಜನತೆಗೆ ನೀರು ಪೂರೈಕೆಯಲ್ಲಿ ಯಾವುದೇ
ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಾಲೂಕು ಹಂತದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳನ್ನು ಜರುಗಿಸಿ, ಕುಡಿಯುವ ನೀರಿನ ನಿರ್ವಹಣೆ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಇಒ ಸೂಚನೆ ನೀಡಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಪಾಟೀಲ, ಅಭಿಯಂತರರಾದ ವಿ.ಬಿ. ಗೊಂಗಡಿ, ತಾರಾನಾಥ ಶಂಕರ, ಆರ್.ಎಸ್. ಬಂಡಿ, ಆರ್.ಎಸ್. ಹಿರೇಗೌಡರ ಇತರರಿದ್ದರು.