Give priority to organic farming
ತಿಪಟೂರು: ಮಣ್ಣು ಮತ್ತು ನೀರಿನ ಗುಣಮಟ್ಟದ ಕುಸಿತದಿಂದಾಗಿ ಮಣ್ಣಿನ ಉತ್ಪಾದಕತೆ ಕಡಿಮೆಯಾಗುತ್ತದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ತಾಲೂಕಿನ ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಹಾಗೂ ಪಾರಾದೀಪ್ ಪಾಸ್ಫೇಟ್ ಲಿಮಿಟೆಡ್, ಜೆ.ಫಾಮಾರ್ ಸರ್ವೀಸಸ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಾತನಾಡಿ, ರೈತರು ಶಿಫಾರಸಿನ ಅನುಸಾರ ರಾಸಾಯನಿಕ ಗೊಬ್ಬರಗಳು, ಪೀಡೆನಾಶಕಗಳನ್ನು ಬಳಸಬೇಕು ಮತ್ತು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಬೇಸಾಯಶಾಸ್ತ್ರ ವಿಜ್ಞಾನಿ ಡಾ.ತಸ್ಮಿಯಾಕೌಸರ್ ಮಾತನಾಡಿ, ಆರೋಗ್ಯಯುತ ನಗರಗಳಿಗೆ ಆರೋಗ್ಯದಾಯಕ ಮಣ್ಣು ಎಂಬ ಘೋಷಣೆಯೊಂದಿಗೆ ಜಾಗತಿಕ ಮಣ್ಣಿನ ದಿನಾಚರಣೆ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಸುಸ್ಥಿರ ಕೃಷಿ, ಆಹಾರದ ವ್ಯವಸ್ಥೆಗಳು, ಹವಾಮಾನ ವೈಪರಿತ್ಯ, ಜೀವ ವೈವಿದ್ಯ ಮತ್ತು ಮಾನವನ ಯೋಗಕ್ಷೇಮಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎಂ.ಎಚ್.ಶಂಕರ ವಿಶ್ವ ಮಣ್ಣು ದಿನದ ಹಿನ್ನೆಲೆ, ಮಣ್ಣಿನ ಮಹತ್ವ ಮತ್ತು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್.ಯೋಗೀಶ್ ಮಾತಾನಾಡಿ, ಮಣ್ಣಿನಲ್ಲಿ ಇಂಗಾಲವನ್ನು ಬಂದಿಸುವುದು, ಮಣ್ಣಿನ ಆರೋಗ್ಯ ಕಾಪಾಡುವುದು ನಮ್ಮ ಕರ್ತವ್ಯ, ಮಣ್ಣನ್ನು ರಕ್ಷಣೆ ಮಾಡಿದರೆ ಪ್ರಕೃತಿ ಉಳಿಸಬಹುದು, ಪ್ರಕೃತಿ ಉಳಿದರೆ ನಾವು ಬದುಕಬಹುದು ಎಂದರು.
ಪಾರಾದೀಪ್ ಫಾಸ್ಫೇಟ್ಸ್ ಲಿಮಿಟೆಡ್ ಮುಖ್ಯ ವ್ಯವಸ್ಥಾಪಕ ಎಚ್.ಎಸ್.ಶಫಿ ಮಾತನಾಡಿ, ಕೃಷಿಯಲ್ಲಿ ನ್ಯಾನೋ ಗೊಬ್ಬರದ ಬಳಕೆಯಿಂದ ಶೇ.25ರಷ್ಟು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹೆಚ್ಚು ಇಳುವರಿ ಪಡೆಯಬಹುದು. ಸಮತೋಲನ ಸಾವಯವ ಹಾಗೂ ರಾಸಾಯನಿಕ ಗೊಬ್ಬರದ ಬಳಕೆಯಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ತಿಳಿಸಿದರು.