Give ministerial berth to MLA Srinivas 
ರಾಜ್ಯ

ಶಾಸಕ ಶ್ರೀನಿವಾಸ್​ಗೆ ಸಚಿವ ಸ್ಥಾನ ನೀಡಿ

ಗುಬ್ಬಿ: ಸತತ ಐದು ಬಾರಿ ಶಾಸಕರಾಗಿರುವ ಗುಬ್ಬಿಯ ಎಸ್​.ಆರ್​.ಶ್ರೀನಿವಾಸ್​ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಡುಗೊಲ್ಲ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್​ ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಡಿ.ಕೆ.ಶಿವಕುಮಾರ್​ ಅವರ ಸಂಪುಟದಲ್ಲಿ ವಾಸಣ್ಣಗೆ ಅವಕಾಶ ಕಲ್ಪಿಸಬೇಕು. ಶಾಸಕರು ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಹಾಗೂ ಬಡವರಪರ ಕೆಲಸ ಮಾಡಿದ್ದಾರೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಈ ಹಿಂದೆ ಸಿದ್ದರಾಮಯ್ಯ ಅವರು ಕಾಡುಗೊಲ್ಲರಿಗೆ ಎಸ್ಟಿ ಮೀಸಲು ನೀಡಲು ಶಿಫಾರಸು ಕಡತವನ್ನು ಕೇಂದ್ರ ಸರ್ಕಾರಕ್ಕೆ 2014ರಲ್ಲಿ ಕಳುಹಿಸಿದ್ದಾರೆ. ಜತೆಗೆ ಅಭಿವೃದ್ಧಿ ನಿಗಮ ಮಂಡಳಿ ತೆರೆದು ನಮ್ಮ ಸಮುದಾಯಕ್ಕೆ ಅನುದಾನಗಳನ್ನು ನೀಡಿದ್ದರು. ಇದೇ ಮಾದರಿಯಲ್ಲಿ ಡಿಕೆಶಿ ಅವರು ಕಾಡು ಗೊಲ್ಲರನ್ನು ಗುರುತಿಸಿ ವಿಶೇಷ ಆದ್ಯತೆ ಹಾಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ಕಾಡು ಗೊಲ್ಲ ಅಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಬಿ.ಕೆ.ಸದಾಶಿವಯ್ಯ ಮಾತನಾಡಿ, ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದ ಬುಡಕಟ್ಟು ಸಂಸತಿಯ ಕಾಡುಗೊಲ್ಲರನ್ನು ಮುಖ್ಯವಾಹಿನಿಗೆ ತರಲು ಮುಖ್ಯಮಂತ್ರಿಗಳು ಗುಬ್ಬಿಯ ಶ್ರೀನಿವಾಸ್​ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದರು. ಸಂಘದ ಗೌರವಾಧ್ಯಕ್ಷ ತಿಪ್ಪಯ್ಯ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡವಿರಯ್ಯ, ತಾಲೂಕು ಉಪಾಧ್ಯಕ್ಷ ಮಂಜುನಾಥ್​, ಕಾರ್ಯದರ್ಶಿ ಕುಮಾರ್​, ಖಜಾಂಚಿ ಮುದ್ದೇನಹಟ್ಟಿ ಶ್ರೀನಿವಾಸ್​, ಸಂಘಟನಾ ಕಾರ್ಯದರ್ಶಿ ಜಗದೀಶ್​, ಹೋಬಳಿ ಅಧ್ಯಕ್ಷ ಮೋಹನ್​ ಇದ್ದರು.