ತೇರದಾಳ ಪಟ್ಟಣದ ಅಲ್ಲಮಪ್ರಭು ದೇವಸ್ಥಾನದಲ್ಲಿ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿದರು. ಮುಖ್ಯಾಧಿಕಾರಿ ಇರ್ಫಾನ್ ಝಾರೆ, ಅರ್ಚಕ ಅಲ್ಲಯ್ಯ ದೊಡಮನಿ ಇದ್ದರು.
- ತೇರದಾಳ ಶಾಸಕ ಸಿದ್ದು ಸವದಿ ಸೂಚನೆ
- ಅಲ್ಲಮಪ್ರಭು ಜಾತ್ರೆ ನಿಮಿತ್ತ ಪೂರ್ವಭಾವಿ ಸಭೆ
ತೇರದಾಳ: ಸೆ.6ರಿಂದ ಪ್ರಾರಂಭಗೊಳ್ಳಲಿರುವ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತೆ ಬೀದಿ ದೀಪ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಾಸಕ ಸಿದ್ದು ಸವದಿ ಪುರಸಭೆ ಮುಖ್ಯಾಧಿಕಾರಿ ಇರ್ಫಾನ್ ಝಾರೆ ಅವರಿಗೆ ಸೂಚನೆ ನೀಡಿದರು.
ಪಟ್ಟಣದ ಅಲ್ಲಮ ಪ್ರಭುದೇವರ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ಭಾನುವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಚರಂಡಿಗಳನ್ನು ಸ್ವಚ್ಛಗೊಳಿಸಿ. ಭಕ್ತರು ಬರುವ ಪ್ರಮುಖ ಬೀದಿಗಳಲ್ಲಿ ಬೀದಿ ದೀಪಗಳ ತೊಂದರೆ ಆಗಬಾರದು. ಅದರಂತೆ ದೀಡ ನಮಸ್ಕಾರ ಹಾಕುವ ಭಕ್ತಾಧಿಗಳ ಸ್ನಾನಕ್ಕೆ ನೀರಿನ ಸಮಸ್ಯೆ ಉಂಟಾಗಬಾರದು. ಬಟ್ಟೆಗಳನ್ನು ತಗೆದುಕೊಂಡು ಹೋಗಲು ವಾಹನ ವ್ಯವಸ್ಥೆಗೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.
ತರಕಾರಿ ಮಾರುಕಟ್ಟೆಯಲ್ಲಿನ ಶೌಚಗೃಹ ದುರಸ್ತಿಗೊಳಿಸಿ ಮಹಿಳೆಯರಿಗೆ ಅನುಕೂಲ ಕಲ್ಪಿಸಬೇಕು. ಬಯಲು ಶೌಚಕ್ಕೆ ಹೋಗದಂತೆ ಜಾಗೃತಿ ಮೂಡಿಸಿ. ಅಂತಾರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ಸುವ್ಯವಸ್ಥೆಯಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಮುಖ್ಯಾಧಿಕಾರಿ ಇರ್ಫಾನ್ ಝಾರೆ ಸಭೆಗೆ ಮಾಹಿತಿ ನೀಡುತ್ತಾ, ಅಲ್ಲಮಪ್ರಭು ದೇವಸ್ಥಾನದಲ್ಲಿ ಹೈ ಮಾಸ್ಟ್ ಅಳವಡಿಸುವ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆ ಜತೆಗೆ ಸ್ಥಳ ಪರಿಶೀಲನೆ ನಡೆಸಿ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಕುಸ್ತಿ ಮೈದಾನದಲ್ಲಿ ಇಂಟರ್‌ಲಾಕ್ ಸೇರಿ ಜಾತ್ರೆ ಅಚ್ಚುಕಟ್ಟಾಗಿ ನಡೆಯಲು ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ದೇವಸ್ಥಾನ ಅರ್ಚಕ ಅಲ್ಲಯ್ಯ ದೊಡಮನಿ, ಅಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡಿದ್ದರು.