ಯಡ್ರಾಮಿ ತಾಲೂಕಿನ ಬಳಬಟ್ಟಿಯಲ್ಲಿ ಹಮ್ಮಿಕೊಂಡಿದ್ದ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶ್ರೀ ಗುರುಲಿಂಗ ಸ್ವಾಮೀಜಿ, ಭೀಮನಗೌಡ ಹಿರೇಗೌಡ, ದಿನೇಶ ಪೂಜಾರಿ, ಈರಣ್ಣ ಮುಕ್ಕಣ್ಣಿ, ಮಾಲತೇಶ, ಮಲ್ಲಮ್ಮ ಇತರರಿದ್ದರು. 
ರಾಜ್ಯ

ದೇಗುಲದಷ್ಟೆ ಪ್ರಾಮುಖ್ಯ ಕೆರೆಗಳಿಗೂ ನೀಡಿ

ಯಡ್ರಾಮಿ: ಕಡಿಮೆ ಮಳೆಯಿಂದಾಗಿ ಅಂತರ್ಜಲಮಟ್ಟ ಕ್ಷೀಣಿಸುತ್ತಿದ್ದು, ಹೀಗಾಗಿ ನೀರಿನ ಸಂರಕ್ಷಣೆ ಅನಿವಾರ್ಯವಾಗಿದೆ. ನಾವೆಲ್ಲರೂ ದೇವಸ್ಥಾನಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕೆರೆಗಳಿಗೆ ನೀಡಬೇಕು. ಸ್ವಚ್ಛತೆ ಕಾಪಾಡುವುದರ ಜತೆಗೆ ರಕ್ಷಣೆಗೆ ಮುಂದಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ತಿಳಿಸಿದರು.
ಬಳಬಟ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಳಬಟ್ಟಿ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯಿತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಸವ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ನೀರಿನ ಮೂಲ ರಸುವುದು ಹಾಗೂ ಕೃಷಿಗೆ ಒತ್ತು ನೀಡುವ ಉದ್ದೇಶದಿಂದ ರಾಜ್ಯಾದ್ಯಂತ ಧರ್ಮಸ್ಥಳ ಸಂಸ್ಥೆಯಿಂದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸುಮಾರು 84 ಕೋಟಿ ರೂ. ವೆಚ್ಚದಲ್ಲಿ 995 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ ಎಂದರು.
ಗ್ರಾಮಸ್ಥರ ಸಹಕಾರದಿಂದ ಬಳಬಟ್ಟಿಯ ಬಸವ ಕೆರೆಯನ್ನು ಕೇವಲ 2-3 ತಿಂಗಳಲ್ಲಿಯೇ ಪುನಶ್ಚೇತನಗೊಳಿಸಲಾಗಿದೆ. ಕೆರೆಯ ಒಟ್ಟು 18,565 ನ ಮೀಟರ್​ ಹೂಳೆತ್ತಿದ್ದು, ಇದಕ್ಕೆ 11.82 ಲಕ್ಷ ರೂ. ವೆಚ್ಚವಾಗಿದೆ. ಸಂಸ್ಥೆ 8.11 ರೂ. ಅನುದಾನ ಒದಗಿಸಿದ್ದು, ಸಾಗಾಟದ ವೆಚ್ಚ 3.71 ಲಕ್ಷ ರೂ.ಗಳನ್ನು ಗ್ರಾಮಸ್ಥರೇ ಭರಿಸಿದ್ದಾರೆ. ಪ್ರತಿ ವರ್ಷ ಯುವಕರು ಶ್ರಮದಾನ ಮಾಡುವ ಮೂಲಕ ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಯಲಗೋಡ, ಅರಕೇರಾದ ಶ್ರೀ ಗುರುಲಿಂಗ ಸ್ವಾಮೀಜಿ, ಕೆರೆ ಸಮಿತಿ ಅಧ್ಯಕ್ಷ ಭೀಮನಗೌಡ ಹಿರೇಗೌಡ, ಗ್ರಾಪಂ ಪಿಡಿಒ ಎಂ.ಬಿ.ಮನಗೂಳಿ, ಗ್ರಾಪಂ ಮಾಜಿ ಅಧ್ಯಕ್ಷ ಈರಣ್ಣ ಮುಕ್ಕಣ್ಣಿ, ಸಂಸ್ಥೆ ಯೋಜನಾಧಿಕಾರಿ ಮಾಲತೇಶ, ಪ್ರಮುಖರಾದ ಮಹಾರಾಜ ಹಿರೇಗೌಡ, ರಾಜಶೇಖರ ನಂದಿ, ಶಂಕರಗೌಡ ಬಳಗುಂಪಿ, ವಸಂತ ಗೌಡ, ಆನಂದ, ಮಲ್ಲಮ್ಮ, ಬಸವರಾಜ, ರಾಜಾಹುಲಿ ಇತರರಿದ್ದರು.