ಹೆಣ್ಣು ಮಕ್ಕಳು ಎಚ್ಪಿವಿ ಲಸಿಕೆ ಹಾಕಿಸಿ HPV vaccination
ಚಿಂತಾಮಣಿ: ದೇಶದ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಭವಿಷ್ಯದ ಆರೋಗ್ಯ ರಕ್ಷಣೆಗಾಗಿ ಎಚ್ಪಿವಿ ಲಸಿಕೆ ಹಾಕಿಸಿ ಎಂದು ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶೋಭಾ ನಾಗೇಶ್ ಹೇಳಿದರು.HPV vaccination
ಕೈವಾರ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ತರವಾದ ಹೆಜ್ಜೆಯನ್ನಿಟ್ಟಿವೆ. ಮಹಿಳೆಯರಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಹಾಗೂ ಮಾರಣಾಂತಿಕವಾಗಬಲ್ಲ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ದೇಶದಾದ್ಯಂತ ಈ ಅಭಿಯಾನ ಆರಂಭಗೊಂಡಿದೆ. ಗರ್ಭಕಂಠದ ಕ್ಯಾನ್ಸರ್ ಪ್ರಪಂಚದಾದ್ಯಂತ ಹೆಚ್ಚುತ್ತಿದೆ, ಎಚ್ಪಿವಿ ಲಸಿಕೆ ಪಡೆಯುವ ಮೂಲಕ ತಡೆಯಬಹುದು.
ಭಾರತದಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಗರ್ಭಕಂಠದ ಕ್ಯಾನ್ಸರ್ ನಿಮೂರ್ಲನೆಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಈ ಲಸಿಕೆಯು ಸಂಪೂರ್ಣ ಸ್ವಯಂಪ್ರೇರಿತ ಮತ್ತು ಉಚಿತವಾಗಿರುತ್ತದೆ ಎಂದರು.
ಭಾರತದಲ್ಲಿ ಮಹಿಳೆಯರು ಮೃತಪಡಲು ಗರ್ಭಕಂಠ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದೆ. ದೇಶದಲ್ಲಿ ವಾರ್ಷಿಕವಾಗಿ ಸುಮಾರು 80,000 ಹೊಸ ಪ್ರಕರಣಗಳು ಮತ್ತು 42,000 ಕ್ಕೂ ಹೆಚ್ಚು ಸಾವುಗಳು ವರದಿಯಾಗುತ್ತಿವೆ. 14 ವರ್ಷ ವಯಸ್ಸಿನ ಬಾಲಕಿಯರಿಗೆ ಒಂದೇ ಡೋಸ್ ಲಸಿಕೆ ನೀಡಿದರೆ ಬಲವಾದ ರಕ್ಷಣೆ ನೀಡುತ್ತದೆ ಎಂದು ಜಾಗತಿಕ ಮತ್ತು ಭಾರತೀಯ ವೈಜ್ಞಾನಿಕ ಪುರಾವೆಗಳು ದೃಢಪಡಿಸಿವೆ. ಆರಂಭದಲ್ಲಿ 14 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಅಭಿಯಾನವನ್ನು ಶಾಲಾ-&ಕಾಲೇಜುಗಳ ಮಟ್ಟದಲ್ಲಿ ಇನ್ನೂ ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದು ತಿಳಿಸಿದರು.
ನರ್ಸ್ ಮೋನಿಕಾ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕಿದರು.