ವಿಜ್ಞಾನ ಲೋಕದ ದಿಗ್ಗಜರು 
ರಾಜ್ಯ

ವಿಜ್ಞಾನ ಲೋಕದ ದಿಗ್ಗಜರು

ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ಸಣ್ಣ ಘಟನೆಯೂ ಕ್ಷಣಾರ್ಧದಲ್ಲಿ ಇಡೀ ಜಗತ್ತಿಗೆ ತಲುಪುತ್ತದೆ. ಇದಕ್ಕೆ ಕಾರಣ ವಿಜ್ಞಾನದ ಆವಿಷ್ಕಾರಗಳು. ಅಂತಹ ಆವಿಷ್ಕಾರಗಳನ್ನು ಮಾಡಿದ ವಿಜ್ಞಾನಿಗಳು ಜಗದ್ವಂದ್ಯರು. ದೇಶದ ವಿಜ್ಞಾನ ಕ್ಷೇತ್ರವನ್ನು ಸದೃಢವಾಗಿ ಅಭಿವೃದ್ಧಿಪಡಿಸಿದ ಹಲವು ದಿಗ್ಗಜರ ತವರೂರು ಈ ನಮ್ಮ ಕನ್ನಡನಾಡು ಎಂಬುದು ಹೆಮ್ಮೆಯ ವಿಷಯ.

ಬಹುತೇಕ ಯುವಕರ ಬಿಡಲಾರದ ನಂಟಾಗಿರುವ ಸಾಮಾಜಿಕ ಜಾಲತಾಣದ ಬಳಕೆಯ ಹಿಂದಿರುವ ಬಾಹ್ಯಾಕಾಶ ವಿಜ್ಞಾನದ ಉಪಗ್ರಹಗಳ ಕಾರ್ಯ ವರ್ಣಿಸಲು ಸಾಧ್ಯವಿಲ್ಲ. ಬಾಹ್ಯಾಕಾಶ ವಿಜ್ಞಾನದ ಜತೆಗೆ ವೈದ್ಯಕೀಯ ವಿಜ್ಞಾನ, ಕೃಷಿ ವಿಜ್ಞಾನ, ಭೌತವಿಜ್ಞಾನ, ಜೈವಿಕ ವಿಜ್ಞಾನ ಹಾಗೂ ವೈಮಾನಿಕ ವಿಜ್ಞಾನ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರಲ್ಲಿ ಕನ್ನಡಿಗರದು ಸಿಂಹಪಾಲು. ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ. ರಾಮನ್, ಭಾರತರತ್ನ ಡಾ. ಸಿಎನ್​ಆರ್ ರಾವ್, ಬಾಹ್ಯಾಕಾಶ ವಿಜ್ಞಾನಿಗಳಾದ ಡಾ. ಕಸ್ತೂರಿ ರಂಗನ್, ಡಾ.ಯು.ಆರ್. ರಾವ್, ಡಾ. ಎ.ಎಸ್. ಕಿರಣ್​ಕುಮಾರ್, ಸಿ.ವಿ. ವಿಶ್ವೇಶ್ವರ, ರಾಜೇಶ್ವರಿ ಚಟರ್ಜಿ, ಎಂ.ಬಿ. ರಾಮಚಂದ್ರರಾವ್ ಮುಂತಾಗಿ ಅನೇಕರು ವಿಜ್ಞಾನ ಕ್ಷೇತ್ರದ ಮಿನುಗು ನಕ್ಷತ್ರಗಳಾಗಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್

ಸಿ.ವಿ. ರಾಮನ್ 1888ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದರು. ಅವರ ತಂದೆ ತಮಿಳಿಗರಾದರೂ, ತಾಯಿ ಕನ್ನಡಿಗರಾಗಿದ್ದರಿಂದ ಅವರ ಮಾತೃಭಾಷೆ ಕನ್ನಡವಾಗಿತ್ತು. ವಿದ್ಯಾಭ್ಯಾಸ, ವೃತ್ತಿಜೀವನದ ನಂತರ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದರು. ಅವರು ಚಿಕ್ಕವರಿದ್ದಾಗಿನಿಂದ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರು. ವಿಶೇಷವಾಗಿ ಬೆಳಕಿನ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ರಾಮನ್ ಪರಿಣಾಮ ಎಂದೇ ಪ್ರಸಿದ್ಧವಾಗಿರುವ ಅವರ ಸಂಶೋಧನೆಗೆ ನೆಲೆಯೊದಗಿಸಿದ್ದು ಬೆಂಗಳೂರು. ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನ ದಿಕ್ಕಿನತ್ತ ಹೊರಳಿರುವುದನ್ನು ಅವರ ಸಂಶೋಧನೆ ಸಾಬೀತುಪಡಿಸಿತ್ತು. ಇದು 1928ರಲ್ಲಿ ರಾಮನ್ ಅವರಿಗೆ ನೊಬೆಲ್ ಪಾರಿತೋಷಕವನ್ನು ತಂದುಕೊಟ್ಟಿತು.

ಡಾ. ಕೆ. ಕಸ್ತೂರಿ ರಂಗನ್

1940ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅಪಾರ. ಇಸ್ರೋ ಮುಖ್ಯಸ್ಥರಾಗಿ, ಕೇಂದ್ರ ಯೋಜನಾ ಆಯೋಗದ ಮುಖ್ಯಸ್ಥರಾಗಿ, ಕೇಂದ್ರ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿ, ದೇಶದ ಹಲವು ಅತ್ಯುನ್ನತ ಸಂಸ್ಥೆಗಳ ಮುಖ್ಯಸ್ಥರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಭಾರತದ ಪ್ರಾಯೋಗಿಕ ಭಾಸ್ಕರ 1 ಮತ್ತು 2 ಉಪಗ್ರಹಗಳ ಯೋಜನಾ ನಿರ್ದೇಶಕರಾಗಿ ಅವುಗಳನ್ನು ಯಶಸ್ವಿಗೊಳಿಸಿದ ಕೀರ್ತಿ ಇವರದು. ಇನ್ನೂ ಹಲವು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿ ಖಗೋಳ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ.

ಭಾರತ ರತ್ನ ಸಿಎನ್​ಆರ್ ರಾವ್

1934ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಚಿಂತಾಮಣಿ ನಾಗೇಶ ರಾಮಚಂದ್ರ (ಸಿಎನ್​ಆರ್) ರಾವ್ ರಾಸಾಯನಿಕ ವಿಜ್ಞಾನದಲ್ಲಿ ಮಾಡಿದ ಅದ್ವಿತೀಯ ಸಂಶೋಧನೆಗಳು ಇಡೀ ವಿಶ್ವದ ಗಮನ ಸೆಳೆದಿವೆ. ಪ್ರಧಾನಮಂತ್ರಿಗಳ ವೈಜ್ಞಾನಿಕ ಸಲಹೆಗಾರರಾಗಿ, ದೇಶದ ಅತ್ಯುನ್ನತ ಸಂಸ್ಥೆಗಳಲ್ಲಿ ವಿವಿಧ ಹುದ್ದೆ ನಿರ್ವಹಿಸಿದ್ದಾರೆ. ನ್ಯಾನೋ ವಿಜ್ಞಾನ, ಸೂಪರ್ ಕಂಡಕ್ಟಿವಿಟಿ ಕ್ಷೇತ್ರದಲ್ಲಿ ಅವರ ಸಂಶೋಧನೆಗಳನ್ನು ಸರಿಗಟ್ಟುವ ಮತ್ತೊಬ್ಬ ವ್ಯಕ್ತಿ ಇಲ್ಲ. 40ಕ್ಕೂ ಹೆಚ್ಚು ವಿಜ್ಞಾನ ಪುಸ್ತಕ, ಸಾವಿರಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ರಾವ್ ಅವರನ್ನು ವೈಜ್ಞಾನಿಕ ದಿಗ್ಗಜ ಸ್ಥಾನಕ್ಕೇರಿಸಿವೆ. ಭಾರತ ಸರ್ಕಾರ 2013ರಲ್ಲಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ.

ಡಾ. ಎ.ಎಸ್. ಕಿರಣಕುಮಾರ್

1952ರಲ್ಲಿ ಹಾಸನ ಜಿಲ್ಲೆಯ ಆಲೂರಿನಲ್ಲಿ ಜನಿಸಿದ ಡಾ. ಎ.ಎಸ್. ಕಿರಣಕುಮಾರ್ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಅಲಹಾಬಾದ್​ನ ಸ್ಪೇಸ್ ಅಪ್ಲಿಕೇಶನ್ ಸೆಂಟರ್​ನಲ್ಲಿ ಬಹುಕಾಲ ಸೇವೆ ಸಲ್ಲಿಸಿರುವ ಕಿರಣಕುಮಾರ್ ನಂತರ ಇಸ್ರೋ ಅಧ್ಯಕ್ಷರಾಗಿ, ಕೇಂದ್ರ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಭಾರತದ ಮೊಟ್ಟ ಮೊದಲ ದೂರಸಂವೇದಿ ಉಪಗ್ರಹದ ಯಶಸ್ಸಿನಲ್ಲಿ ಕಿರಣಕುಮಾರ್ ಪಾತ್ರ ಪ್ರಮುಖವಾಗಿದೆ. ಇನ್ಸಾಟ್ 3ಡಿ, ಮೈಕ್ರೋ ಸ್ಯಾಟಲೈಟ್, ಮಂಗಳಯಾನ ಉಪಕರಣ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಿರಣಕುಮಾರ್, ಒಂದೇ ಉಡಾವಣಾ ಕೇಂದ್ರದಿಂದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ವಿಶ್ವದಾಖಲೆ ಮಾಡಿದ್ದಾರೆ. ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಸಂದಿವೆ.

ಡಾ. ಯು.ಆರ್. ರಾವ್

1932ರಲ್ಲಿ ಉಡುಪಿ ಯಲ್ಲಿ ಜನಿಸಿದ ಡಾ. ಯು.ಆರ್. ರಾವ್ ಕೂಡ ಇಸ್ರೋ ಅಧ್ಯಕ್ಷರಾಗಿದ್ದರು. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಹಾಲ್ ಆಫ್ ಫೇಮ್ ಅಂತಾರಾಷ್ಟ್ರೀಯ ಗೌರವ ಪಡೆದ ಏಕೈಕ ಭಾರತೀಯ ಇವರು. ಇವರಿಗೆ ಪದ್ಮವಿಭೂಷಣ ಗೌರವ ಕೂಡ ಸಂದಿದೆ.