ಬೀಳಗಿ ತಾಲೂಕಿನ ಹಲವು ಗ್ರಾಮಗಳಿಂದ ಆಗಮಿಸಿದ್ದ ನೂರಾರು ಗ್ರಾಹಕರು ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ್ದ ತಮ್ಮ ಹಣ ಹಿಂತಿರುಗಿಸುವಂತೆ ಆಗ್ರಹಿಸಿ ಸಂಘದ ಕಚೇರಿಗೆ ಘೇರಾವ್ ಹಾಕಿದರು. 
ರಾಜ್ಯ

ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘಕ್ಕೆ ಘೇರಾವ್

ಪ್ರಮುಖ ಮುಖ್ಯಾಂಶಗಳು

  • ಕೋಟ್ಯಂತರ ರೂ. ವಂಚನೆ ಆರೋಪ
  • ಮರಳಿ ಹಣ ನೀಡುವಂತೆ ಗ್ರಾಹಕರ ಆಗ್ರಹ
ಬೀಳಗಿ: ಪಟ್ಟಣದ ಗಾಂಧಿ ನಗರದ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಘದಲ್ಲಿ ಹಣ ಹೂಡಿಕೆ ಮಾಡಿದ್ದ ನೂರಾರು ಮಹಿಳಾ ಗ್ರಾಹಕರು ತಮ್ಮ ಹಣ ಮರಳಿ ಕೊಡುವಂತೆ ಆಗ್ರಹಿಸಿ, ಕಚೇರಿಗೆ ಘೇರಾವ್ ಹಾಕಿದ ಘಟನೆ ಸೋಮವಾರ ಮಧ್ಯಾಹ್ನ ನಡೆಯಿತು.
ಸಂಘವು ತಾಲೂಕಿನ ಪ್ರತಿ ಗ್ರಾಮದಲ್ಲಿ ಹತ್ತಾರು ಮಹಿಳಾ ಸಂಘಟನೆಗಳ ಮೂಲಕ ಅಂದಾಜು 270 ಮಹಿಳಾ ಸಂಘಗಳಿಂದ ಹಣ ಸಂಗ್ರಹಿಸಿದೆ. ಪ್ರತಿ ಸದಸ್ಯರಿಂದ ಮೂರು ವರ್ಷಕ್ಕೆ 7,500 ರೂ. ತೆಗೆದುಕೊಂಡು, ಅದಕ್ಕೆ 2,500 ರೂ. ಬಡ್ಡಿ ಸೇರಿಸಿ, ಒಟ್ಟು 10,000 ರೂ. ನೀಡುವ ಆಶ್ವಾಸನೆ ನೀಡಿತ್ತು. ಆದರೆ ಅವಧಿ ಮುಗಿದು ಒಂದು ವರ್ಷ ಕಳೆದರೂ ತುಂಬಿದ ಹಣವನ್ನು ಬಡ್ಡಿ ಸಮೇತ ಕೊಡದೇ ಸತಾಯಿಸುತ್ತಿದ್ದಾರೆ ಎಂಬುದು ಪ್ರತಿಭಟನೆ ನಿರತ ಮಹಿಳೆಯರ ಆರೋಪವಾಗಿದೆ.
ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಣ ಹೂಡಿಕೆ ಮಾಡಿದ ಸದಸ್ಯರಿಗೆ ಎಸ್‌ಬಿಐ ಖಾತೆಯ ಚೆಕ್ ನೀಡಿದ್ದರಾದರೂ, ಆ ಖಾತೆಯಲ್ಲಿ ಝೀರೋ ಬ್ಯಾಲೆನ್ಸ್ ಇರುವುದನ್ನು ಕಂಡು ಸಿಡಿಮಿಡಿಗೊಂಡು ಮಹಿಳಾ ಸದಸ್ಯರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಪೊಲೀಸರಲ್ಲಿ ದೂರು ದಾಖಲಿಸಲು ಮುಂದಾದರು. ಈ ಸಂದರ್ಭದಲ್ಲಿ ಬ್ಯಾಂಕ್ ಅಧ್ಯಕ್ಷೆ ವಿದ್ಯಾ ಹಳ್ಳೂರ, ಕಾರ್ಯದರ್ಶಿ ಆರ್.ಎಚ್. ಬದ್ನೂರ ನಡುವೆ ವಾಗ್ವಾದವೂ ನಡೆಯಿತು.
ಮಾಹಿತಿ ಅರಿತ ಸಿಪಿಐ ಹಣಮಂತ ಸಣಮನಿ ಸಂಘದ ಕಚೇರಿಗೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿ, ಪ್ರತಿಭಟನಾಕಾರರಿಗೆ ವಂಚನೆಯಾಗಿದ್ದರೆ ದೂರು ನೀಡಲು ಸೂಚನೆ ನೀಡಿದರು.
ಅದರಂತೆ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದಾಗ ಬಾಗಲಕೋಟೆ ಡಿವೈಎಸ್ಪಿ ಗಜಾನನ ಸುತಾರ ಅವರು ಬ್ಯಾಂಕ್‌ನ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಗ್ರಾಹಕರೊಂದಿಗೆ ಮಾಹಿತಿ ಪಡೆದು, ಮೇಲಾಧಿಕಾರಿಗೆ ತಿಳಿಸಿ ಸಮಗ್ರ ಪರಿಶೀಲನೆ ನಡೆಸಿ, ವಂಚನೆಯಾಗಿದ್ದರೆ ಕಾನೂನುಬದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.