ಒಂದೇ ಬಾರಿ ಪಡಿತರ ಚೀಟಿದಾರರ ಬೆರಳಚ್ಚು
ಬೆಂಗಳೂರು: ಬೆರಳಚ್ಚು ( ಬಯೋಮೆಟ್ರಿಕ್ ) ವಿನಾಯಿತಿ ಕೊಟ್ಟಿರುವ ಆಹಾರ ಇಲಾಖೆ, 2 ಬಾರಿ ಬದಲು ಒಂದೇ ಬಾರಿ ಪಡಿತರ ಚೀಟಿದಾರರ ಬೆರಳಚ್ಚು ಪಡೆದು ಎರಡು ತಿಂಗಳ ಅಕ್ಕಿಯನ್ನು ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಿದೆ.
‘ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ’ ಯೋಜನೆಯಡಿ ಎರಡು ತಿಂಗಳ ಪಡಿತರವನ್ನು ಕಳೆದ ಮೇನಲ್ಲಿ ಒಂದೇ ಬಾರಿ ಕಾರ್ಡ್‌ದಾರರಿಗೆ ವಿತರಿಸಲಾಗಿತ್ತು. ಈ ರೇಷನ್ ಪಡೆಯಲು ಕಾರ್ಡ್‌ದಾರರು ಎರಡು ಬಾರಿ ಬೆರಳಚ್ಚು ಕೊಡಬೇಕಿತ್ತು. ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದ ಲಕ್ಷಾಂತರ ಚೀಟಿದಾರರು ಬೆರಳಚ್ಚು ಕೊಟ್ಟು ತಮ್ಮ ಪಾಲಿನ ಅಕ್ಕಿ ಪಡೆಯಲು ಪರದಾಡಿದ್ದರು. ಸರ್ವರ್ ಸಮಸ್ಯೆ ಬಗೆಹರಿಸಲು ಇಲಾಖೆ ಹೆಣಗಾಡಿತ್ತು. ಜತೆಗೆ,ಸಾಕಷ್ಟು ಜಿಲ್ಲೆಗಳಲ್ಲಿ ಶೇ.100 ಪಡಿತರ ವಿತರಣೆ ಗುರಿ ಮುಟ್ಟುವುದಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಅಂತಹ ಸಮಸ್ಯೆ ಎದುರಾಗದಂತೆ ಇಲಾಖೆ ಕ್ರಮ ತೆಗೆದುಕೊಂಡಿದೆ.
ಕಳೆದ ತಿಂಗಳು ಕೇಂದ್ರದ ಪಾಲಿನ 2 ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ವಿತರಿಸಿದ್ದ ಪರಿಣಾಮ ರಾಜ್ಯದ ಪಾಲಿನ ಅಕ್ಕಿಯನ್ನು ಕಾರ್ಡ್‌ದಾರರಿಗೆ ನೀಡಲಾಗಿರಲಿಲ್ಲ. ಮೇ, ಜೂನ್ ತಿಂಗಳ ಅಕ್ಕಿಯನ್ನು ಒಂದೇ ಬಾರಿಗೆ ಪ್ರಸಕ್ತ ತಿಂಗಳಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಹಾಗಾಗಿ, ಒಂದೇ ಬಾರಿ ಬೆರಳಚ್ಚು ಪಡೆದು ಅಕ್ಕಿ ವಿತರಿಸುವಂತೆ ಮಾಲೀಕರಿಗೆ ಇಲಾಖೆ ತಾಕೀತು ಮಾಡಿದೆ.
ಸಾರ್ವಜನಿಕರಿಗೆ ತೊಂದರೆಯಾಗದಂತೆ ನ್ಯಾಯಬೆಲೆ ಅಂಗಡಿ ಸಮಯ ಬದಲಾಯಿಸಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಕಾರ್ಡ್‌ದಾರರು ಪಡಿತರ ಪಡೆದುಕೊಳ್ಳಬಹುದು. ಪ್ರತಿ ತಿಂಗಳು 5ನೇ ತಾರೀಕಿನಿಂದ ವಿತರಣೆ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಹಳೆಯ ಮೊಬೈಲ್ ಹಾಟ್‌ಸ್ಪಾಟ್ ಬಳಕೆಯಿಂದ ನೆಟ್‌ವರ್ಕ್ ಸಮಸ್ಯೆ ಇರುವುದರಿಂದ ಹೊಸದಾಗಿ ಉಪಕರಣ, ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯವಂತೆ ಇಲಾಖೆ ಸೂಚಿಸಿದೆ. ರಾಜ್ಯಾದ್ಯಂತ ಈಗಾಗಲೇ ಪಡಿತರ ವಿತರಣೆ ಪ್ರಕ್ರಿಯೆ ಶುರುವಾಗಿದ್ದು, ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ರೇಷನ್ ಪಡೆಯುತ್ತಿದ್ದಾರೆ.