ರಾಜ್ಯ

ಮುಂಗಾರು ಬಿತ್ತನೆಗೆ ಸರ್ವ ತಯಾರಿ ಮಾಡಿಕೊಳ್ಳಿ : ಡಿಸಿ ಇಕ್ರಮ್ ಶರೀಫ್ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ:
  • ಪ್ರವಾಹ ಪೀಡಿತ ಪ್ರದೇಶಗಳ ಮೇಲೆ ತೀವ್ರ ನಿಗಾ ವಹಿಸಬೇಕು
ಕಲಬುರಗಿ: ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೆ ಬಿತ್ತನೆ ಚಟುವಟಿಕೆಗಳು ಗರಿಗೆದರಲಿದ್ದು, ಕೃಷಿ ಸಂಬಂಧಿತ ಇಲಾಖೆಗಳು ಎಲ್ಲಾ ರೀತಿಯ ಪೂರ್ವ ಸರ್ವ ಸಿದ್ಧತೆ ಮಾಡಿಟ್ಟುಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ‌ ಇಕ್ರಮ್‌ ಶರೀಫ್ ಸೂಚಿಸಿದರು.
ಮುಂಗಾರು ‌ಮಳೆ ಅವಧಿ ಪೂರ್ವ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೂನ್‌ ಮಾಹೆಯಲ್ಲಿ ಸುರಿದ ಮಳೆಯಿಂದ ತೋಟಗಾರಿಕೆ ಇಲಾಖೆಯಿಂದ ಮಾತ್ರ 45 ಹೆಕ್ಟೇರ್ ಬೆಳೆ ಹಾನಿ ವರದಿ‌ ಸಲ್ಲಿಸಿದ್ದು, ಕೃಷಿ ಇಲಾಖೆಯಿಂದ ಇನ್ನು ಸಲ್ಲಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸರ್ವೆ ಮಾಡಿ ವರದಿ ಸಲ್ಲಿಸಬೇಕೆಂದರು.
ಜಿಲ್ಲೆಯಲ್ಲಿ 11,634 ಮೆಟ್ರಿಕ್ ಟನ್ ಯೂರಿಯಾ, 9,583 ಮೆಟ್ರಿಕ್ ಟನ್ ಡಿ.ಎ.ಪಿ, ಕಾಂಪ್ಲೆಕ್ಸ್ -13,990 ಮೆ.ಟನ್ ಸೇರಿದಂತೆ 38,351 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಈಗಾಗಲೆ ಇದರಲ್ಲಿ ಒಟ್ಟಾರೆ 5-6 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ವಿತರಣೆಯಾಗಿದೆ. ಇನ್ನು ಮಳೆಯಾಗಿಲ್ಲ, ಈಗಲೆ ಬಿತ್ತನೆ ಮಾಡುವುದು ಸರಿಯಲ್ಲ. ರೈತರಿಗೆ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಯಾವುದೇ ಕೊರತೆ ಇಲ್ಲ. ತಹಶೀಲ್ದಾರರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತಾಪಿ ಜನರಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಾದ್ಯಂತ ಪ್ರವಾಹಕ್ಕೆ ತುತ್ತಾಗುವ ಸುಮಾರು 153 ಗ್ರಾಮಗಳನ್ನು ಗುರುತಿಸಲಾಗಿದೆ. ನೆರೆಯ ಮಹಾರಾಷ್ಟ್ರದ ಅಧಿಕಾರಿಗಳೊಂದಿಗೆ ಸತತ ಸಂಪರ್ಕ‌ ಸಾಧಿಸಿ ಡ್ಯಾಂನಿಂದ ಕೆಳ ಹಂತದ ಪ್ರದೇಶಕ್ಕೆ ನೀರು ಬಿಡುಗಡೆ ಮುನ್ನವೆ ಮಾಹಿತಿ ಪಡೆದು ನದಿ ದಂಡೆಯ ಗ್ರಾಮಸ್ಥರಿಗೆ ಪ್ರಚೂರಪಡಿಸಬೇಕು. ಡಂಗೂರ ಸಾರಬೇಕು. ಸಿಡಿಲಿನಿಂದ ಸಾವು ತಪ್ಪಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಯಾವುದೇ ಕಾರಣಕ್ಕೂ ಪ್ರವಾಹ, ಮಳೆಯಿಂದ ಮಾನವ ಮತ್ತು ಪ್ರಾಣಿ ಹಾನಿಯಾಗದಂತೆ ಎಚ್ಚರ ವಹಿಸಬೇಕೆಂದರು.
ಶಿಥಿಲಾವಸ್ಥೆಯಲ್ಲಿರುವ ಶಾಲಾ, ಅಂಗನವಾಡಿ, ಹಾಸ್ಟೆಲ್ ಕಟ್ಟಡಗಳನ್ನು ಕೂಡಲೆ ಗುರುತಿಸಿ ಸ್ಥಳಾಂತರಿಸಬೇಕು. ಮಳೆಯಿಂದ ಬೆಳೆ, ಆಸ್ತಿ-ಪಾಸ್ತಿ, ರಸ್ತೆ-ಸೇತುವೆ ಹಾನಿಯಾದಲ್ಲಿ 24 ಗಂಟೆ ಒಳಗೆ ಮಾಹಿತಿ ಸಲ್ಲಿಸಬೇಕು. ವಿಳಂಬಕ್ಕೆ ಇಲ್ಲಿ ಅವಕಾಶ ಇಲ್ಲ. ಮಳೆ ಹೆಚ್ಚಾದಲ್ಲಿ, ಪ್ರವಾಹದಿಂದ ರಸ್ತೆ, ಸೇತುವೆ ಸಂಪರ್ಕ‌ ಕಡಿತವಾಗುವ ಸಾಧ್ಯತೆ ಇರುತ್ತದೆ. ಈಗಲೆ ಪರ್ಯಾಯ ಸಾರಿಗೆ ಸಂಪರ್ಕ ಗುರುತಿಸಬೇಕು ಎಂದ ಡಿ.ಸಿ. ಇಕ್ರಮ್‌ ಶರೀಫ್ ತಿಳಿಸಿದರು.
ಕಂಟ್ರೋಲ್ ರೂಂ ಸ್ಥಾಪಿಸಿ:
ಹೆಚ್ಚಿನ ಮಳೆ‌ ಮತ್ತು ನೆರ ಹಾವಳಿ ಪರಿಸ್ಥಿತಿ ಎದುರಾದಲ್ಲಿ ಪ್ರವಾಹದಿಂದ ಸಂತ್ರಸ್ತರು ಸಹಾಯಕ್ಕೆ ಇಂದಿನಿಂದಲೆ ತಾಲೂಕುವಾರು 24x7 ಕಂಟ್ರೋಲ್‌ ರೂಂ ಸ್ಥಾಪಿಸಿ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ತಹಶೀಲ್ದಾರರಿಗೆ ಡಿ.ಸಿ. ಇಕ್ರಮ್ ಶರೀಫ್ ತಿಳಿಸಿದರು.
ಎಂಟಿವೇನೋಮ್‌ ಡೋಸ್ ದಾಸ್ತಾನು ಮಾಡ್ಕೊಳ್ಳಿ:
ಮಳೆಗಾಲದಲ್ಲಿ ಸಹಜವಾಗಿ ಹಾವು ಕಚ್ಚಿ ಸಾವನಪ್ಪವವರ ಸಂಖ್ಯೆ ನೋಡುತ್ತೇವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಪಿ.ಎಚ್.ಸಿ. ಸಿ.ಎಚ್.ಸಿ, ಆಸ್ಪತ್ರೆಗಳಲ್ಲಿ ಎಂಟಿವೇನೋಮ್ ಡೋಸ್ ದಾಸ್ತಾನು ಇರುವಂತೆ ಡಿ.ಎಚ್.ಓ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಡಿ.ಸಿ. ಇಕ್ರಮ್‌ ಶರೀಫ್ ನಿರ್ದೇಶನ ನೀಡಿದರು.
ಚರಂಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳಿ:
ಮಳೆ‌ ಅರಂಭವಾದರೆ‌ ಸಾಕು, ತೆರೆದ ಚರಂಡಿಗಳು ಕಸ ಕಡ್ಡಿಯಿಂದ ಬ್ಲಾಕ್ ಆಗಿಯೇ ಹೆಚ್ಚು ನಗರ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ‌ ಪಂಚಾಯತಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮಳೆ ನೀರು ಚರಂಡಿಗಳು, ನಾಲಿ ಗಳಲ್ಲಿ ಹೂಳೆತ್ತಬೇಕು. ಮಳೆ ಬರುವ ಮುನ್ನವೆ ಸಂಪೂರ್ಣ ಸ್ವಚ್ಛತಾ ಅಭಿಯಾನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಡಿ.ಸಿ. ಖಡಕ್ ಸೂಚನೆ ನೀಡಿದರು.
ಕಾಳಜಿ ಕೇಂದ್ರ ತೆರೆಯಬೇಕು:
ಜಿಲ್ಲಾ ಪಂಚಾಯತ್ ಸಿ.ಇ.ಓ ರಾಜುಲ್‌ ಸಂಕನೂರ್ ಮಾತನಾಡಿ, ಪ್ರವಾಹ ಹೆಚ್ಚಾದಲ್ಲಿ ತಗ್ಗು ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಹೀಗಾಗಿ ಕಾಳಜಿ ಕೇಂದ್ರ ಸಹ ಗುರುತಿಸಬೇಕು. ಮಳೆಯ ನಡುವೆಯೂ ಶುದ್ಧ ಕುಡಿಯುವ ನೀರು ಪೂರೈಕೆಯು ನಮ್ಮ ಆದ್ಯತೆಯಾಗಬೇಕು ಎಂದರು.
ಸಭೆಯಲ್ಲಿ ಡಿ.ಸಿ.ಪಿ. ಶಾಲೂ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಸೇರಿದಂತೆ ಜಿಲ್ಲಾ‌ ಮಟ್ಟದ ಇತರೆ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು ಭಾಗವಹಿಸಿದ್ದರು.