ತಿಪಟೂರು: ಮಾನವ ಹಕ್ಕು ಕಾಯ್ದೆಯಡಿ 19ನೇ ಶತಮಾನದಿಂದಲೂ ಕಾರ್ಮಿಕ ಸಂಘಟನೆ ಮೂಲಕ ಶೋಷಿತ ವರ್ಗಕ್ಕೆ ನ್ಯಾಯ ದೊರಕಿಸಿ, ಸಮಾನತೆ ಕಲ್ಪಿಸುವ ಕೆಲಸವಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ ಹೇಳಿದರು.
ವಿಶ್ವಕಾರ್ಮಿಕ ದಿನಾಚರಣೆ ಪ್ರಯುಕ್ತ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಶ್ರಮಿಕರಿಗೆ ಸ್ಮಾರ್ಟ್ಕಾರ್ಡ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕಾರ್ಮಿಕ ಕಾಯ್ದೆ ಅನುಸಾರ ದಿನದಲ್ಲಿ 8 ಗಂಟೆ ಮಾತ್ರ ಕೆಲಸದ ಅವಧಿಯನ್ನು ನಿರ್ಧರಿಸಲಾಗಿದ್ದು, ಇದಕ್ಕೂ ಮೀರಿ ಕೆಲಸ ಮಾಡಿದರೆ ಹೆಚ್ಚುವರಿ ಭತ್ಯೆ ಮತ್ತು ಇತರ ಸೌಲಭ್ಯ ಕೊಡಬೇಕಾಗುತ್ತದೆ. ಅದೇ ರೀತಿ ಮಹಿಳಾ ಉದ್ಯೋಗಿಗೆ 6 ತಿಂಗಳು ಹೆರಿಗೆರಜೆ, ಸೇರಿದಂತೆ ಇತರ ಸೌಲಭ್ಯ ಕಲ್ಪಿಸಲಾಗಿದೆ. ಬಾಲಕಾರ್ಮಿಕ ಕಾಯ್ದೆ ಅನುಸಾರ 14 ವರ್ಷಕ್ಕೂ ಕೆಳ ವಯಸ್ಸಿನ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ. ಆದರೆ ಇವೆಲ್ಲವೂ ಕೇವಲ ಸಂಘಟಿತ ಕಾರ್ಮಿಕ ಸಂಘಟನೆಗಳಿಗೆ ಮಾತ್ರ ಸೀಮಿತವಾದಂತಿದೆ. ಸಂಘಟಿತ ಕಾರ್ಮಿಕರ ಹೋರಾಟಕ್ಕೆ ಸಿಗುವಷ್ಟು ಮಾನ್ಯತೆ, ಮನ್ನಣೆ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರು ಒಗ್ಗಟ್ಟಾಗಿ, ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ಏಷ್ಯಾ ಖಂಡದಲ್ಲೇ ಅತೀ ದೊಡ್ಡ ಮರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿದ್ದ ತಿಪಟೂರು ಕೊಬ್ಬರಿ ಮಾರುಕಟ್ಟೆಯನ್ನು ರಾಜ್ಯದ ಏಳೆಂಟು ಜಿಲ್ಲೆಗಳ ರೈತರು ಅವಲಂಭಿಸಿದ್ದರು. ಆದರೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯಲ್ಲಿ ತಿದ್ದುಪಡಿ ತಂದು ರೈತರು ತಮ್ಮ ಉತ್ಪನ್ನಗಳನ್ನ ಅವರ ಇಚ್ಛಾನುಸಾರ ಮಾರಾಟ ಮಾಡಬಹುದು ಎಂಬ ಕಾಯ್ದೆ ಜಾರಿಗೆ ತಂದ ನಂತರ ಎಪಿಎಂಸಿ ಮಾರುಕಟ್ಟೆಗಳ ಮಹತ್ವ ಸ್ವಲ್ಪ ಕಡಿಮೆ ಆಗಿದೆ. ನಂತರ ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂದಕ್ಕೆ ಪಡೆದಿದ್ದು, ರೈತರಿಗೆ ಸಂದ ಜಯವಾಗಿದೆ. ಯಾವುದೇ ಕಾಯ್ದೆಗಳ ಬದಲಾವಣೆ ಸುಲಭವಲ್ಲ. ಆದರೂ ರಾಜ್ಯ ಸರ್ಕಾರ ತಮ್ಮ ಮಿತಿಗೆ ಒಳಪಡುವ ಕೆಲ ಕಾಯ್ದೆಗಳನ್ನು ಬದಲಾಯಿಸಿ ರೈತರಿಗೆ ಅನುಕೂಲ ಮಾಡಿದೆ ಎಂದರು.
ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಹನುಮಂತರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಾಯಿತು.