ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಗುತ್ತಿಗೆದಾರರು ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರನ್ನು ಗುರುವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಜಿಬಿಎ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ.ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಚೇತನ್‌ಕುಮಾರ್ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಜಿಬಿಎ ಅನುದಾನದಡಿ ನಿರ್ವಹಿಸಲಾದ ಕಾಮಗಾರಿಗಳಿಗೆ ಐದು ಪಾಲಿಕೆಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ಬಿಲ್ ಪಾವತಿಯಾಗುತ್ತಿದೆ. ಕೆಲವು ಕಡೆ 26 ತಿಂಗಳಿಗೂ ಅಧಿಕ ಕಾಲ ಬಾಕಿ ಉಳಿದಿದೆ. ಇದರಿಂದ ಜೇಷ್ಠತೆ ತಪ್ಪಿ ಪಾವತಿಯಾಗುತ್ತಿದ್ದು, ಎಲ್ಲ ಪಾಲಿಕೆಗಳಲ್ಲಿ ಸಮಾನ ಅವಧಿಗೆ ತ್ವರಿತವಾಗಿ ಬಿಲ್ ಪಾವತಿಯಾಗಬೇಕು.ನಗರ ಪಾಲಿಕೆಗಳಲ್ಲಿ ಅಧಿಕಾರಿಗಳ ’ಅಧಿಕಾರ ಪ್ರತ್ಯಾಯೋಜನೆ’ ಕುರಿತು ಏಕರೂಪದ ಸುತ್ತೋಲೆ ಹೊರಡಿಸಬೇಕು. ಅಂದಾಜು 5 ವರ್ಷಗಳ ಹಿಂದೆ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿ ವೇಳೆ ತಡೆಹಿಡಿಯಲಾದ ಶೇ.10 ಭದ್ರತಾ ಠೇವಣಿ ಮೊತ್ತವನ್ನು ತಕ್ಷಣ ಹಿಂಪಾವತಿಸಬೇಕು ಎಂದು ಸಂಘದ ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ಮುಂಬರುವ ಅನುದಾನದಲ್ಲಿ ಕನಿಷ್ಠ ಶೇ.50 ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರಿಗೆ ಮೀಸಲಿಡುವಂತೆ ಟೆಂಡರ್ ಕರೆಯಬೇಕು. ಕೆಆರ್‌ಐಡಿಎಎಲ್ ವತಿಯಿಂದ ನಿರ್ವಹಿಸಲಾದ ಕಾಮಗಾರಿಗಳಿಗೆ ತಡೆಹಿಡಿಯಲಾಗಿರುವ ಶೇ.25 ಮೊತ್ತವನ್ನು ಬಿಡುಗಡೆ ಮಾಡಬೇಕು. ಜಾಗತಿಕ ಯುದ್ಧ ಕಾರಣ ಬಿಟುಮಿನ್ ದರ ಹೆಚ್ಚಾಗಿದೆ. ರಸ್ತೆ ಡಾಂಬರೀಕರಣಕ್ಕೆ ನೀಡಲಾದ 3 ತಿಂಗಳ ‘ಸ್ಟಾರ್ ರೇಟ್’ ಸೌಲಭ್ಯದ ಅವಧಿಯನ್ನು ವಿಸ್ತರಿಸಬೇಕು. ಪ್ಯಾಕೇಜ್ ಕಾಮಗಾರಿಗಳಿಗೆ ಸೀಮಿತಗೊಳಿಸದೆ ಎಲ್ಲ ಡಾಂಬರೀಕರಣ ಕಾಮಗಾರಿಗಳಿಗೂ ವಿಸ್ತರಿಸಬೇಕು ಎಂದು ಜಿ.ಎಂ.ನಂದಕುಮಾರ್ ಒತ್ತಾಯಿಸಿದರು.