Gaunipalli Veterinary Dispensary: ​​A Hub of Disarray 
ರಾಜ್ಯ

ಅವ್ಯವಸ್ಥೆ ಆಗರವಾದ ಗೌನಿಪಲ್ಲಿ ಪಶು ಚಿಕಿತ್ಸಾಲಯ

ರಾಯಲ್ಪಾಡು:

ಗೌನಿಪಲ್ಲಿ ಪಶು ಚಿಕಿತ್ಸಾಲಯ ಅವ್ಯವಸ್ಥೆಯ ಆಗರವಾಗಿದೆ. 36 ಹಳ್ಳಿಗಳ ಸಾವಿರಾರು ಜಾನುವಾರುಗಳಿಗೆ ಇದೊಂದೇ ಆಸ್ಪತ್ರೆಯಿದ್ದು, ಆಸ್ಪತ್ರೆಯಲ್ಲಿ ಇನ್ನಿಲ್ಲದ ಸಮಸ್ಯೆಗಳು ಕಾಡುತ್ತಿವೆ.

ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕೇಳುವಂತಿಲ್ಲ. ಜಾನುವಾರುಗಳ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ಮದ್ಯದ ಬಾಟಲಿಗಳು ರಾಶಿ ರಾಶಿಯಾಗಿ ಬಿದ್ದಿವೆ.
ಆಸ್ಪತ್ರೆ ಆವರಣ ಸಂಪೂರ್ಣ ಕುಡುಕರ ಅಡ್ಡೆಗೆ ಹೇಳಿ ಮಾಡಿಸಿದ ತಾಣವಾಗಿದೆ.

ಸ್ಥಳಿಯರ ಆರೋಪ

ಕಾಂಪೌಂಡ್​ ಬಿದ್ದು ಹೋಗಿ ತಿಂಗಳುಗಳೇ ಕಳೆದಿದ್ದರೂ ಗೋಡೆಯ ಇಟ್ಟಿಗೆ, ಕಲ್ಲುಗಳು ಚರಂಡಿ ಒಳಗೆ ಬಿದ್ದಿವೆ. ಇದರಿಂದ ಚರಂಡಿ ನೀರು ಹರಿಯಲು ಅಡ್ಡಿಯಅಗಿದೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ಥಳಿಯ ಗ್ರಾಮ ಪಂಚಾಯಿತಿ ಆಡಳಿತದವರಂತೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಜತೆಗೆ ಆಸ್ಪತ್ರೆ ಆವರಣದ ಒಂದು ಮೂಲೆಯಲ್ಲಿ ಕಸದ ರಾಶಿ ಬಿದ್ದಿದೆ. ಇದನ್ನು ಸ್ವಚ್ಛ ಮಾಡಲು ಪಂಚಾಯಿತಿಯವರು ಮುಂದೆ ಬಂದಿಲ್ಲ. ಇದರಿಂದ ಸಮಸ್ಯೆ ತೀವ್ರವಾಗಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

ಈ ಆಸ್ಪತ್ರೆಗೆ ಬೈರಿಗಾನಪಲ್ಲಿ, ಕೋಡಿಪಲ್ಲಿ, ತಾಡಿಗೋಳ್​ ಸ್ಥಳಿಯ ಕೇಂದ್ರ ಪಂಚಾಯಿತಿ ಸೇರಿ ಸುಮಾರು 36 ಹಳ್ಳಿಗಳು ಸೇರ್ಪಡೆಗೊಳ್ಳುತ್ತವೆ. 3000ಕ್ಕೂ ಹೆಚ್ಚು ಹಸುಗಳು, 18,000 ಕುರಿ, ಮೇಕೆಗಳನ್ನು ಈ ಭಾಗದ ಗ್ರಾಮೀಣ ಪ್ರದೇಶದಲ್ಲಿ ರೈತರು ಸಾಕಿದ್ದಾರೆ. ಇವೆಲ್ಲವೂ ಅನಾರೋಗ್ಯಗೊಂಡರೆ ಇರುವ ಇದೊಂದೇ ಆಸ್ಪತ್ರೆ ಚಿಕಿತ್ಸೆಗೆ ಆಸರೆಯಾಗಿದೆ. ಆದರೆ, ಇಲ್ಲಿ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ.

ಗ್ರಾಮ ಪಂಚಾಯಿತಿಯರು ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿರುವುದರಿಂದ ಆಸ್ಪತ್ರೆ ಕಾಂಪೌಂಡ್​ ಬಿದ್ದು ಹೋಗಿದೆ. ದುರಸ್ತಿಗೆ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಗಮನಹರಿಸಿಲ್ಲ. ಆವರಣದಲ್ಲಿ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಪ್ರತಿನಿತ್ಯ ನಾವೇ ಸ್ವಚ್ಛಗೊಳಿಸಬೇಕು. ಆಸ್ಪತ್ರೆ ನಿರ್ವಹಣೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ.

— ಡಾ. ನಂದಿನಿ, ಪಶುವೈದ್ಯೆ, ಗೌನಿಪಲ್ಲಿ

ಓರ್ವ ಪ್ರಭಾರಿ ವೈದ್ಯ ಬಿಟ್ಟರೆ, ಪರೀಕ್ಷಕರು ಯಾರೂ ಇಲ್ಲ. ಇನ್ನೊಬ್ಬ ವೈದ್ಯರು ತಿಂಗಳಲ್ಲಿ ಎರಡು ದಿನ ಬಂದು ಹೋಗುತ್ತಾರೆ. ಸಾವಿರಾರು ಜಾನುವಾರುಗಳನ್ನು ಸಾಕಲ್ಪಟ್ಟಿರುವ ಈ ಭಾಗದಲ್ಲಿ ಇನ್ನೊಂದು ಆಸ್ಪತ್ರೆ ಹಾಗೂ ಸಾಕಷ್ಟು ಸಿಬ್ಬಂದಿ ಅವಶ್ಯವಿದೆ.
ಸದ್ಯಕ್ಕೆ ಇರುವ ಗೌನಿಪಲ್ಲಿ ಪಶು ಆಸ್ಪತ್ರೆಯೂ ಸುರತವಾಗಿಲ್ಲ. ಆಸ್ಪತ್ರೆ ಮುಂಭಾಗದ ಹಳೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಬೀಗ ಹಾಕಲಾಗಿದೆ. ಕಟ್ಟಡದ ಮುಂಭಾಗ ಬಿರುಕು ಬಿಟ್ಟಿದೆ. ಆಸ್ಪತ್ರೆ ಪ್ರವೇಶದ್ವಾರದಲ್ಲಿ ನೀರಿನ ಸಂಪು ಸದಾ ತುಂಬಿ ಹರಿಯುತ್ತಿದೆ. ಇದನ್ನು ಈವರೆಗೂ ಸ್ವಚ್ಛಗೊಳಿಸಿಲ್ಲ. ನೀರು ಶೇಖರಣೆಯಾಗಿ, ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿದೆ. ಇದರ ಮೇಲ್ಭಾಗದ ಕಾಂಕ್ರಿಟ್​ ಬಿರುಕು ಬಿಟ್ಟಿದ್ದು, ಸಂಪೂರ್ಣ ಹಾಳಾಗಿದೆ. ಅಜಾಗರೂಕತೆಯಿಂದ ಯಾರಾದರೂ ಇದರ ಮೇಲೆ ಕಾಲು ಇಟ್ಟರೆ ಅನಾಹುತ ತಪ್ಪಿದ್ದಲ್ಲ. ಆಸ್ಪತ್ರೆ ಬಲಭಾಗದಲ್ಲಿ ಕಾಂಪೌಂಡ್​ ಗೋಡೆ ಬಿದ್ದು ಸುಮಾರು 4 ತಿಂಗಳುಗಳೇ ಕಳೆದಿವೆ.ಪಕ್ಕದಲ್ಲಿ ಚರಂಡಿ ನೀರು ಹರಿಯುತ್ತಿದೆ. ಹರಿಯುವ ನೀರಿನಿಂದ ಕಾಂಪೌಂಡ್​ ಕೂಡ ಬಿರುಕು ಬಿಟ್ಟು, ಬಿದ್ದು ಹೋಗಿದೆ.