Gas headache in Tiptur too
ತಿಪಟೂರು: ಗೃಹಬಳಕೆ ಅನಿಲ ಸರಬರಾಜಿನಲ್ಲಿ ಯಾವುದೇ ಅಡಚಣೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ್ದರೂ ತೀವ್ರ ಆತಂಕಕ್ಕೆ ಒಳಗಾಗಿರುವ ಜನತೆ ಗ್ಯಾಸ್ ಸರಬರಾಜು ಅಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ನೋಂದಣಿಗೆ ಕಾಯುತ್ತಿರುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ.
ತಿಪಟೂರು ನಗರ ಸೇರಿದಂತೆ ತಾಲೂಕಿನೆಲ್ಲೆಡೆ ಗೃಹ ಬಳಕೆಯ ಸಿಲಿಂಡರ್ಗಳು ಸಾಕಷ್ಟು ಲಭ್ಯವಿದೆ. ಆದರೂ ತೀವ್ರ ಆತಂಕಕ್ಕೆ ಒಳಗಾದವರಂತೆ ವರ್ತಿಸುತ್ತಿರುವ ಜನತೆ ಯೋಚಿಸುವ ವ್ಯವಧಾನ ಇಲ್ಲದವರಂತೆ ಬೆಳಗ್ಗೆಯಿಂದಲೇ ತಮ್ಮ ಕೆಲಸ, ಕಾರ್ಯ ಬದಿಗೊತ್ತಿ ಗ್ಯಾಸ್ ಸರಬರಾಜು ಮಳಿಗೆಗಳ ಎದುರು ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ. ಗ್ಯಾಸ್ ಏಜೆನ್ಸಿಯವರು ಎಷ್ಟು ಹೇಳಿದರೂ, ಹಠ ಹಿಡಿದವರಂತೆ ಇಂದೇ ನಮಗೆ ಸಿಲಿಂಡರ್ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಅವಧಿಗೂ ಮುಂಚೆ ಗ್ಯಾಸ್ ರೀಫಿಲ್ಗಾಗಿ ಒತ್ತಡ ಹೆಚ್ಚುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ನಿನ್ನೆಯಿಂದ ಜಾರಿಗೆ ಬರುವಂತೆ ಹೊಸ ಆದೇಶ ಜಾರಿಗೊಳಿಸಿದ್ದು, ನಗರ ಪ್ರದೇಶಗಳಲ್ಲಿ ರೀಫಿಲ್ ಪಡೆಯಲು ಕನಿಷ್ಠ 25 ದಿನ ಮತ್ತು ಗ್ರಾಮೀಣ ಭಾಗದವರಿಗೆ 45 ದಿನಗಳ ಕಾಲಮಿತಿ ಜಾರಿಗೊಳಿಸಿದೆ. ಆದರೆ ಇದರ ಮಾಹಿತಿ ಇಲ್ಲದವರು ಇಂದೇ ನಮಗೆ ರೀಫಿಲ್ ಬೇಕೆಂದು ಹಠ ಹಿಡಿಯುತ್ತಿದ್ದು. ಅವರಿಗೆ ಅರಿವು ಮೂಡಿಸುವುದು ಎಜೆನ್ಸಿಯವರಿಗೆ ತಲೆನೋವಾಗಿದೆ.
ತಾಲೂಕಿನ ನೊಣವಿನಕೆರೆ ಗ್ರಾಮದ ಭಾರತ್ಗ್ಯಾಸ್ ಏಜೆನ್ಸಿ ಗೋದಾಮಿನಲ್ಲಿ ಸಾಕಷ್ಟು ಸಿಲೆಂಡರ್ ಲಭ್ಯವಿದೆ. ಆದರೂ ಆತಂಕಕ್ಕೆ ಒಳಗಾಗಿರುವ ಕೆಲವರು ಅವರ ಬಳಿ ಇರುವ ಸಿಲೆಂಡರಿನಲ್ಲಿ 5ರಿಂದ 6 ಕಿಲೋ ಗ್ಯಾಸ್ ಇದ್ದರೂ, ಅದನ್ನು ಪೂರ್ತಿ ಖಾಲಿ ಮಾಡದೇ, ಹೊಸ ಸಿಲೆಂಡರಿಗೆ ಬೇಡಿಕೆ ಇಟ್ಟು ಕಾಯುತ್ತಿರುವುದನ್ನು ಖುದ್ದು ತಾಲೂಕು ಆಹಾರ ನಿರೀಕ್ಷಕರೇ ಗಮನಿಸಿದ್ದಾರೆ.