Mysore Palace 
ರಾಜ್ಯ

ಮೈಸೂರು ಅರಮನೆ ಮುಂಭಾಗ ಗ್ಯಾಸ್ ಸಿಲಿಂಡರ್ ಸ್ಫೋಟ: ಒರ್ವ ಸಾವು, ನಾಲ್ವರಿಗೆ ಗಂಭೀರ ಗಾಯ | Mysore Palace

ಮೈಸೂರು: ಮೈಸೂರು ಅರಮನೆಯ(Mysore Palace) ಮುಂಭಾಗದ ಜಯಮಾರ್ತಾಂಡ ಗೇಟ್ ಬಳಿ ಇಂದು ಸಂಜೆ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕ್ರಿಸ್‌ಮಸ್ ರಜೆ ಮತ್ತು ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಅರಮನೆ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಅಲ್ಲದೆ, ಸುಮಾರು ರಾತ್ರಿ 8:30ರ ಸಮಯದಲ್ಲಿ ಅರಮನೆಯಿಂದ ಹೊರಬಂದ ಪ್ರವಾಸಿಗರು ಫುಟ್‌ಪಾತ್ ವ್ಯಾಪಾರಿಗಳ ಬಳಿ ಖರೀದಿ ಮಾಡುತ್ತಿದ್ದಾಗ, ಸೈಕಲ್‌ನಲ್ಲಿ ಇರಿಸಲಾಗಿದ್ದ ಬಲೂನ್ ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿದ್ದವರಿಗೆ ಭೀಕರ ಗಾಯಗಳಾಗಿವೆ.
ಈ ಸ್ಪೋಟದಲ್ಲಿ ಸುಮಾರು 40 ರಿಂದ 42 ವರ್ಷದ ಓರ್ವ ಪುರುಷ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳು ಬೆಂಗಳೂರು ಮೂಲದ ಲಕ್ಷ್ಮೀ (ಸ್ಥಿತಿ ಗಂಭೀರ), ನಂಜನಗೂಡಿನ ಮಂಜುಳಾ, ರಾಣಿಬೆನ್ನೂರಿನ ಕೊಟ್ರೇಶ್ ಮತ್ತು ಕೊಲ್ಕತ್ತಾದ ಶಹೀನಾ ಶಬ್ಬೀರ್ ಅವರಿಗೆ ತೀವ್ರ ಗಾಯಗಳಾಗಿದ್ದು, ಎಲ್ಲರನ್ನೂ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಕಮಿಷನರ್ ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದು ಅನಿಲ ಸೋರಿಕೆಯಿಂದಾದ ಆಕಸ್ಮಿಕ ಸ್ಫೋಟ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.