ಸವಣೂರು ತಾಲೂಕು ಕುರಬರಮಲ್ಲೂರ ಗ್ರಾಮದಲ್ಲಿ ಯಲ್ಲಪ್ಪ ದೊಡ್ಡಮನಿ ಹಾಗೂ ಪತ್ನಿ ನಯನಾ ಅವರು ಸಗಣಿ ಗಣೇಶ ಮೂರ್ತಿ ತಯಾರಿಸುತ್ತಿರುವುದು.
- ಕುರುಬರಮಲ್ಲೂರಿನ ಯಲ್ಲಪ್ಪ ದೊಡ್ಡಮನಿ ಕೈಚಳಕ
- ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳ
- 40 ಮೂರ್ತಿಗಳನ್ನು ತಯಾರಿ
ಆಧುನಿಕತೆ ವ್ಯಾಪಿಸಿದಂತೆ ಪಿಒಪಿ ಗಣೇಶ ಮೂರ್ತಿಗಳ ತಯಾರಿ ಅಧಿಕವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿಯೇ ತಾಲೂಕಿನ ಕುರುಬರಮಲ್ಲೂರು ಗ್ರಾಮದ ಸಾವಯವ ಕೃಷಿಕ ಯಲ್ಲಪ್ಪ ದೊಡ್ಡಮನಿ ಸಗಣಿ ಬಳಸಿ ಗಣಪತಿ ಮೂರ್ತಿ ತಯಾರಿಸುತ್ತಿದ್ದು, ಇದು ಎಲ್ಲರ ಪ್ರಸಂಶೆಗೆ ಪಾತ್ರವಾಗಿದೆ.
ಗೋವುಗಳ ಪೋಷಣೆ ಮಾಡುತ್ತಿರುವ ಯಲ್ಲಪ್ಪ, ಅವುಗಳ ಸಗಣಿಯನ ಕುಳ್ಳು ಮಾಡಿ ಬಿಸಿಲಿನಲ್ಲಿ ಎರಡು ತಿಂಗಳು ಒಣಗಿಸುತ್ತಾರೆ. ನಂತರ ಅದೇ ಕುಳ್ಳುಗಳನ್ನು ಗಿರಣಿ ಮೂಲಕ ಸಣ್ಣದಾಗಿ ಹಿಟ್ಟು ಮಾಡಿಸುತ್ತ ಅದೇ ಹಿಟ್ಟನ್ನು ಕಲಿಸಿ ಅಂಟು ಸೇರಿ ಹದ ಮಾಡಿ ಮೂರ್ತಿ ತಯಾರಿಸುತ್ತಿದ್ದಾರೆ.
ಬೇಡಿಕೆ ಹೆಚ್ಚಳ: ನಿಷೇಧದ ನಡುವೆಯೂ ಅಲ್ಲಲ್ಲಿ ಪಿಒಪಿ ಮೂರ್ತಿಗಳೂ ಕಾಣಸಿಗುತ್ತಿವೆ. ಗೋವುಗಳ ಸಗಣಿ, ಗೋ ಮೂತ್ರ ನಂಬಿ ಸುಮಾರು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿರುವ ಯಲ್ಲಪ್ಪ ಅವರು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳದಲ್ಲಿ ‘ಅತ್ಯುತ್ತಮ ಸಾವಯವ ಕೃಷಿಕ’ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಸಗಣಿ ಬಳಸಿ ಕೃಷಿ ಮಾಡುವುದರ ಜತೆಯಲ್ಲಿಯೇ ಹೊಸದೇನಾದರೂ ಮಾಡಬೇಕೆಂಬ ತುಡಿತ ಹೊಂದಿದ್ದ ಯಲ್ಲಪ್ಪ, ಕನೇರಿಮಠದಿಂದ ಆಯೋಜಿಸಿದ್ದ ಶಿಬಿರಗಳಲ್ಲಿ ಪಾಲ್ಗೊಂಡು ಗಣಪತಿ ಮೂರ್ತಿ ತಯಾರಿ ಮಾಡುವುದನ್ನು ಕಲಿತಿದ್ದಾರೆ. ತರಬೇತಿ ಬಳಿಕ ತಮ್ಮೂರಿನಲ್ಲಿಯೇ ಆಕಳ ಸಗಣಿ ಬಳಸಿ ಗಣೇಶ ಮೂರ್ತಿ ತಯಾರಿಸಿದ್ದಾರೆ.
ಬಿಡುವಿನಲ್ಲಿ ತಯಾರಿ: ‘ಸಗಣಿಯಿಂದ ಹೇಗೆ ಗಣಪತಿ ಮೂರ್ತಿ ಮಾಡಲು ಸಾಧ್ಯ’ ಎಂದು ಪ್ರಶ್ನಿಸುತ್ತಿದ್ದ ಗ್ರಾಮಸ್ಥರು, ಈಗ ಯಲ್ಲಪ್ಪ ಅವರ ಕಾಯಕ ನೋಡಿ ಖುಷಿ ಪಡುತ್ತಿದ್ದಾರೆ. ಪ್ರತಿ ವರ್ಷವೂ ಸಗಣಿಯ ಮೂರ್ತಿಗಳಿಗೆ ಬೇಡಿಕೆ ಬರುತ್ತಿದೆ. ಆದರೆ, ಕೃಷಿಯ ಜತೆಯಲ್ಲಿ ಮೂರ್ತಿ ತಯಾರಿಕೆ ಮಾಡಬೇಕಿರುವುದರಿಂದ ಯಲ್ಲಪ್ಪ ಅವರಿಗೆ ಸಮಯ ಸಾಲುತ್ತಿಲ್ಲ. ಹೀಗಾಗಿ, ಅವರು ಬಿಡುವಿನ ಸಮಯದಲ್ಲಿ ಕೆಲವೇ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಅವರ ಕೆಲಸಕ್ಕೆ ಪತ್ನಿ ನಯನಾ ಸಹಕಾರ ನೀಡುತ್ತಿದ್ದಾರೆ.
ಸಗಣಿಯ ಮೂರ್ತಿಗೆ ಎರಡು ಬಗೆಯ ಬಣ್ಣವನ್ನಷ್ಟೇ ಹಚ್ಚಲಾಗುತ್ತದೆ. ಮಣ್ಣು ಹಾಗೂ ಪಿಒಪಿ ಗಣಪತಿ ಭಾರವಿರುತ್ತದೆ. ಸಗಣಿಯಿಂದ ಮಾಡಿದ ಗಣಪತಿ ಮೂರ್ತಿ ಹಗುರವಿರುತ್ತದೆ. ಮೂರ್ತಿ ತಯಾರಿ ಮಾಡಿಕೊಡುವಂತೆ ಹೆಚ್ಚು ಜನರು ಕೇಳುತ್ತಿದ್ದಾರೆ. ಆದರೆ, ಕೃಷಿ ಕೆಲಸವೂ ಇರುವುದರಿಂದ ಕೈಲಾದ ಮಟ್ಟಿಗೆ ಮೂರ್ತಿ ಮಾಡುತ್ತಿದ್ದೇನೆ. ಮನೆಯಿಂದ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಕೂರಿಸುವ ವಿವಿಧ ರೂಪದ ಗಣಪತಿ ಮೂರ್ತಿಗಳನ್ನು ಸಗಣಿಯಿಂದ ತಯಾರಿಸಬಹುದು. ನಾನೀಗ ಮನೆ ಗಣಪತಿ ಮಾತ್ರ ತಯಾರಿಸುತ್ತಿದ್ದೇನೆ. ಸಾರ್ವಜನಿಕ ಗಣಪತಿ ಮೂರ್ತಿ ತಯಾರಿಸಲು ಪ್ರಯತ್ನಿಸುತ್ತಿದ್ದೇನೆ.
ಸಗಣಿಯಲ್ಲಿ ಗಣೇಶನ ಮೂರ್ತಿ ತಯಾರಿಸುವ ಕುರಿತು ಹೇಳಿದ ಸಂದರ್ಭದಲ್ಲಿ ನಂಬಿಕೆ ಆಗರಲಿಲ್ಲ. ಆದರೆ, ಇಂದು ಸಗಣಿ ಗಣೇಶ ಮೂರ್ತಿಗೆ ಒದಗಿರುವ ಬೇಡಿಕೆ ಕಂಡು ಸಂತಸ ಆಗುತ್ತದೆ. ಈ ಹಿನ್ನಲೆಯಲ್ಲಿ ಯಲ್ಲಪ್ಪ ಅವರಿಗೆ ಅವಶ್ಯವಾಗಿರುವ ಸಹಾಯ, ಸಹಕಾರ ನೀಡುವ ಮೂಲಕ ಬೆಂಬಲ ನೀಡಲಾಗುತ್ತಿದೆ.