ಸಚಿವ ಎಚ್.ಕೆ.ಪಾಟೀಲ್ 
ರಾಜ್ಯ

ಗಾಂಧಿ ಅವರ ಸಿದ್ಧಾಂತ ಅಳಿಸಲು ಸಾಧ್ಯವಿಲ್ಲ- Mahatma Gandhi

ಹರೀಶ್​​ ಕೆ.ಸಿ.
ಬೆಂಗಳೂರು: ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸತ್ಯ, ಶಾಂತಿ,ಆಹಿಂಸೆಯ ಆಯಾಮ ಕೊಟ್ಟು ಚಳುವಳಿ ಮುನ್ನಡಿಸಿ ಯಶಸ್ಸು ಸಾಧಿಸಿದ ಮಹಾತ್ಮ ಗಾಂಧಿ ಅವರ ತತ್ವ ಮತ್ತು ಸಿದ್ಧಾಂತವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವೋದಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿ ಒಬ್ಬ ವ್ಯಕ್ತಿಯಲ್ಲ ಅವರೊಂದು ಜೀವನ ಕಲ್ಪನೆ, ಪ್ರತಿಯೊಬ್ಬರೂ ಅವರ ಜೀವನ ಕಥನ ಓದಿದಾಗ ಮಾತ್ರ ಅವರೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.ಇತ್ತೀಚಿನ ದಿನಗಳಲ್ಲಿ ಅವರ ಬಗ್ಗೆ ಮಾತನಾಡಲು ಹಿಂಜರಿಯಬೇಕಾದ ವಾತಾವರಣ ಸೃಷ್ಟಿಯಾಗುತ್ತಿರುವುದು ಸಚಿವರು ಕಳವಳ ವ್ಯಕ್ತಪಡಿಸಿದರು.
ಗಾಂಧಿ ಬಗ್ಗೆ ಮಾತನಾಡಲು ಧೈರ್ಯಬೇಕು, ಜನ ಏನೆಂದುಕೊಳ್ಳುತ್ತಾರೆಂದು ದೂರ ಉಳಿಯುವ ಸನ್ನಿವೇಶವೇ ಎದುರಾಗಿದೆ. ಬಹುಶಃ ನಾವೆಲ್ಲರೂ ದ್ವಂದ್ವದಲ್ಲಿ ಸಿಲುಕಿಕೊಂಡಿದ್ದೇವೆ. ಇಲ್ಲಿ ವಿದ್ಯಾರ್ಥಿಗಳೆ ಹೆಚ್ಚು ಸಂಖ್ಯೆಯಲ್ಲಿದ್ದು, ತಾವೆಲ್ಲರೂ ಒಂದು ಸಲ ಗಾಂಧಿ ಅವರ ಆತ್ಮಕಥೆಯನ್ನು ಓದಲೇಬೇಕು. ನಮ್ಮ ಸರ್ಕಾರ ಗಾಂಧಿ ಕನಸು ನನಸು ಮಾಡಿದೆ. ಹಸಿವು ಮುಕ್ತ ರಾಜ್ಯ ಮಾಡಿದ್ದೇವೆ, ಭಿಕ್ಷಾಟನೆ ಕಡಿಮೆ ಮಾಡಿದ್ದೇವೆ, ಭಿಕ್ಷಕರು ಇಲ್ಲದ ಸಮಾಜ ನಿರ್ಮಾಣ ಮಾಡಬೇಕು ಎಂಬ ಗುರಿ ಹೊಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಎಂ.ಜಿ.ಹೆಗಡೆ ಅವರಿಗೆ ಗಾಂಧಿ ಸಾಹಿತ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮತ್ತಿತರರಿದ್ದರು.