ಗದಗ 
ರಾಜ್ಯ

ಗೊಂದಲದ ಗೂಡಾದ ಕೂಸಿನ ಮನೆಗಳು

ವಿಜಯವಾಣಿ ವಿಶೇಷ ಗದಗ
ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡುವ ಉದ್ದೇಶದಿಂದ ಕೂಲಿ ಕಾಮಿರ್ಕರ ಮಕ್ಕಳಿಗೆ ಅಂಗನವಾಡಿ ಹೊರತು ಪಡಿಸಿ ಹೊಸದಾಗಿ ಕೂಸಿನ ಮನೆಗಳನ್ನು(ಶಿಶು ಪಾಲನಾ ಕೇಂದ್ರ) ಆರಂಭಿಸಿರುವ ರಾಜ್ಯ ಸರ್ಕಾರದ ಯೋಜನೆ ಗೊಂದಲ ಗೂಡಾಗಿದೆ. ಆರಂಭಿಕ ಹಂತದಲ್ಲಿ ಕೇಂದ್ರಗಳ ಆರಂಭಕ್ಕೆ ಉತ್ಸಾಹ ತೋರಿದಷ್ಟು ಸಮಪರ್ಕಕವಾಗಿ ಶಿಶು ಪಾಲನಾ ಕೇಂದ್ರಗಳು ನಡೆಯುತ್ತಿಲ್ಲ. ಆಟಕ್ಕೂಂಟು, ಲೆಕ್ಕಿಲ್ಲದಂತಹ ಸ್ಥತಿ ಉದ್ಭವಿಸಿದೆ. ನೋಂದಣಿ ಮಾಡಿಸಿದ ಶೇ. 50 ರಷ್ಟು ಮಕ್ಕಳು ಕೇಂದ್ರಕ್ಕೆ ಆಗಮಿಸುತ್ತಿಲ್ಲ. ಜತೆಗೆ ಕೇಂದ್ರದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಉಸ್ತುವಾರಿ ಶಿಕ್ಷಕರಿಗೂ ಸಂಬಳದ ಸಮಸ್ಯೆ ಉದ್ಭವಿಸಿದೆ ಎಂದು ತಿಳಿದು ಬಂದಿದೆ.
ಒಂದು ಗ್ರಾಮ ಪಂಚಾಯಿತಿ ಅಡಿಯಲ್ಲಿ ಮೂರ್ನಾಲ್ಕು ಹಳ್ಳಿಗಳಿದ್ದು, ಮಹಿಳಾ ಕೂಲಿಕಾರರು ಒಂದು ಗ್ರಾಮದಿಂದ ಮತ್ತೊಂದು ಗ್ರಾಮದ ಶಿಶು ಪಾಲನಾ ಕೇಂದ್ರಕ್ಕೆ ಆರೈಕೆಗಾಗಿ ಮಕ್ಕಳನ್ನು ಬಿಡುವುದು ಅಸಾಧ್ಯ. 3.5 ವರ್ಷದೊಳಗಿನ ಮಕ್ಕಳನ್ನು ಆರೈಕೆ ಕೇಂದ್ರದಲ್ಲಿ ಬಿಟ್ಟು ಮಹಿಳೆಯರೂ ಕೂಲಿಗಾಗಿ ತೆರಳುವುದು ಕೂಡ ಸಾಧ್ಯವಿಲ್ಲ. ಇನ್ನೂ ರಾಜ್ಯದ ಹಲವಡೆ ಯಂತ್ರೋಪಕರಣ ಬಳಸಿಯೇ ನರೇಗಾ ಕಾಮಗಾರಿಗಳು ಜರುಗುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿರುವುದು ಹೊಸತೇನಲ್ಲ. ಹೀಗಾಗಿ ಶಿಶು ಪಾಲನಾ ಕೇಂದ್ರಗಳ ಅಗತ್ಯತೆ ಕುರಿತು ಪ್ರಶ್ನೆ ಉದ್ಭವಿಸಿದೆ. ಯೋಜನೆಯಲ್ಲಿ ನ್ಯೂನ್ಯತೆ ಕಂಡು ಬರುತ್ತಿದ್ದು, ಅನಗತ್ಯ ವೆಚ್ಚ ಸರ್ಕಾರದ ಹೊರೆಯಾಗುತ್ತಿದೆ.
ಶಿಶು ಪಾಲಕರಿಗೂ ಸಮಸ್ಯೆ:
ನಿಯಮದಂತೆ ಶಿಶು ಪಾಲಕರಿಗೆ ವೇತನವನ್ನು ನರೇಗಾ ಯೋಜನೆಯ ಕೂಲಿಯನ್ನು ನೀಡಲಾಗುತ್ತಿದೆ. ಆದರೆ, ನರೇಗಾ ಕೂಲಿಕಾಮಿರ್ಕರ ಹಾಜರಾತಿಯಂತೆ ಶಿಶು ಪಾಲಕರ ಹಾಜರಾತಿ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಶಿಶು ಪಾಲಕರ ವೇತನ ಸಮಸ್ಯೆ ಆಗುತ್ತಿದೆ ಎಂದು ತಿಳಿದು ಬಂದಿದೆ.
ಬಾಕ್ಸ್​:
ನರೇಗಾ ಯೋಜನೆಯ ಬಲವರ್ಧನೆ ಗೊಳಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಮೊದಲ ಬಜೆಟ್​ ಅಧಿವೇಶನದಲ್ಲಿ ಶಿಶು ಪಾಲನಾ ಕೇಂದ್ರಗಳನ್ನು ತೆರೆಯುವ ಕುರಿತು ಘೋಷಿಸಿತ್ತು. ಮಹಿಳಾ ಕೂಲಿಕಾರರ 3.5 ವರ್ಷದೊಳಗಿನ ಮಕ್ಕಳ ಪೋಷಣೆಗೆ ಮತ್ತು ಉದ್ಯೋಗ ಖಾತ್ರಿ ದಿನಗಳನ್ನು ಅಧಿಕಗೊಳಿಸಲು ಈ ಯೋಜನೆ ಜಾರಿಗೆ ಉದ್ದೇಶಿಸಲಾಗಿತ್ತು. ಆರಂಭದಲ್ಲಿ ಜಿಲ್ಲೆಯಲ್ಲಿ 100 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿತ್ತು. ಶಿಶು ಪಾಲಕರಿಗೆ ತರಬೇತಿಯನ್ನೂ ನೀಡಿದೆ. ಆದರೆ, ಗ್ರಾಪಂ, ತಾಪಂ ಸದಸ್ಯರ ಸಮಿತಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿ ರಚಿಸದೇ, ಸಂಪನ್ಮೂಲ ಕ್ರೂಢಿಕರಣ, ಅನುದಾನ ವಿನಿಯೋಗ ಸೇರಿದಂತೆ ಹಲವು ನಿಯಮಗಳನ್ನು ರಚಿಸದೇ ತರಾತುರಿಯಲ್ಲಿ ಯೋಜನೆಗೆ ಸರ್ಕಾರ ಚಾಲನೆ ನೀಡಿತ್ತು. ಜಿಲ್ಲೆಯ ಪ್ರತಿ ಕೇಂದ್ರಕ್ಕೆ ಸರ್ಕಾರದಿಂದ 1 ಲಕ್ಷ ರೂ ವೆಚ್ಚ ಮಾಡಿ ಕೇಂದ್ರಗಳನ್ನು ತೆರೆಯಲಾಗಿದೆ.
ಅನುದಾನ ವಿನಿಯೋಗ:
ಗ್ರಾಪಂ ಆವರ್ತಕ ವೆಚ್ಚದಲ್ಲಿ ಕೇಂದ್ರಗಳ ಆರಂಭಕ್ಕೆ ಒಂದು ಬಾರಿ 35 ಸಾವಿರ ರೂ, ಮೂಲ ಸೌಕರ್ಯ ಅಭಿವೃದ್ಧಿಗೆ 30 ಸಾವಿರ ರೂ ಹಾಗೂ ವರ್ಷಕ್ಕೆ ಒಂದು ಬಾರಿ ಮಕ್ಕಳಿಗೆ ಆಟಿಕೆ ಸಾಮಗ್ರಿ ಖರೀದಿಗೆ 5000 ರೂ. ವೆಚ್ಚ ವಿನಿಯೋಗಿಸಬಹುದು. ಆವರ್ತಕ ವೆಚ್ಚದಲ್ಲಿ ವಷಕ್ಕೆ 57680 ರೂ.ಗಳನ್ನು ಪೌಷ್ಠಿಕ ಆಹಾರ ಪೂರೈಕೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಸಮುದಾಯ ಭಾಗವಹಿಸುವಿಕೆ, ಸಭೆಗಳಿಗೆ ಭರಿಸಲು ಸೂಚಿಸಿದೆ. ಶಿಶು ಪಾಲಕರಿಗೆ ಪುನಶ್ಚೇತನ ತರಬೇತಿ ನೀಡಲು ತಾಪಂ ಅನಿರ್ಭಂದಿತ ನಿಧಿಯಿಂದ ವಾಷಿರ್ಕ 8000 ರೂ. ವಿನಿಯೋಗಿಸಬಹುದು.
ನ್ಯೂನ್ಯತೆಗಳೇನು?
* 3.5 ವರ್ಷದೊಳಗಿನ ಮಗುವನ್ನು ಶಿಶು ಪಾಲನ ಕೇಂದ್ರಕ್ಕೆ ತಾಯಿ ಒಪ್ಪಿಸುವುದು ಅನುಮಾನ.
* ಅಂಗನವಾಡಿ ಈ ದಿಸೆಯಿಂದ ಈಗಾಗಲೇ ಕಾರ್ಯ ಮಾಡುತ್ತಿದ್ದು, ಅಂಗನವಾಡಿ ಹೊರತುಪಡಿಸಿ ಶಿಶು ಪಾಲನಾ ಕೇಂದ್ರಗಳ ಆರಂಭದ ಉದ್ದೇಶ ಹಿನ್ನೆಲೆ ಏನು ಎಂಬ ಪ್ರಶ್ನೆ?
* ಗ್ರಾಪಂ ಅಡಿಯಲ್ಲಿ ನಿರ್ವಹಿಸುವ ಈ ಕೇಂದ್ರಗಳಿಗೆ ಬೇರೆ ಗ್ರಾಮದ ಕೂಲಿಕಾರ ಮಕ್ಕಳನ್ನು ಕರೆತರುವುದು ಹಾಸ್ಯಾಸ್ಪದ.