Gadag 
ರಾಜ್ಯ

ಬೇಸಿಗೆ ಬಿಸಿಲಿಗೆ ತತ್ತರಿಸಿದ ಮೂಕ ಜೀವಿಗಳು.

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಬೇಸಿಗೆ ಹೆಚ್ಚಾಗುತ್ತಿದ್ದಂತೆಯೇ ಮನುಷ್ಯರು ತಂಪು ಪಾನಿಯ, ಫ್ರಿಡ್ಜ ನೀರಿಗೆ ಮೊರೆ ಹೋಗುತ್ತಾರೆ. ಮನೆಗೆ ಕೂಲರ್​, ಹವಾ ನಿಯಂತ್ರಕ ವಸ್ತುಗಳು ಅಗತ್ಯ ವಸ್ತುಗಳಾಗಿ ಬಿಡುತ್ತವೆ. ಜ್ಯೂಸ್​ ಮನುಷ್ಯನ ದಿನನಿತ್ಯದ ಆಹಾರ ಪದ್ಧತಿಗೆ ಸೇರ್ಪಡೆಗೊಳ್ಳುತ್ತದೆ. ಅದೇ ರೀತಿ ಸುಸ್ತು, ನಿರ್ಜಲೀಕರಣವು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಆದರೆ, ಬೇಸಿಗೆ ಬಿಸಿಲಿಗೆ ಮೂಕ ಪ್ರಾಣಿಗಳ ಕಷ್ಟು ನೋವು ಅರಿತು ನಡೆಯುವ ಮಾನವೀಯತೆ ಮರೆಯಾಗುತ್ತಿರುವುದು ಸತ್ಯ. ಜಿಲ್ಲೆಯಲ್ಲಿ ಮೂಕ ಜೀವಿಗಳು ಬಿಸಿಲಿನ ಹೊಡೆತಕ್ಕೆ ತತ್ತರಿಸಿ ಹೋಗಿವೆ.
ಈ ಹಿಂದೆ ನಗರದ ಹೊರ ವಲಯದಲ್ಲಿ ನೀರಿನ ಒರೆತಳಿದ್ದವು. ಜಾನುವಾರುಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅನುಕೂಲ ಇತ್ತು. ಆದರೆ, ಹಸಿರು ಮಾಯವಾಗಿ ನಗರದಲ್ಲಿ ಬಹುತೇಕ ಕಡೆ ಕಾಂಕ್ರೀಟ್​ ಕಾಡು ನಿರ್ಮಾಣ ಆದಂತೆ ನೈಸಗಿರ್ಕವಾಗಿ ನೀರು ನಿಲ್ಲುವ ಸ್ಥಳಗಳಿಗೂ ಕೊರತೆಯಾಗಿದೆ. ಖಾಲಿ ಜಾಗೆಗಳಲ್ಲಿ ಬಡವಾವಣೆಗಳು, ದೊಡ್ಡ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತಿದ್ದು, ಇದರಿಂದ ನೀರು ನಿಲ್ಲುವ ಸ್ಥಳಗಳು ಮಾಯವಾಗಿವೆ. ನೈಸಗಿರ್ಕ ನೀರನ್ನೇ ನಂಬಿಕೊಂಡ ಮೂಕ ಪ್ರಾಣಿಗಳ ಗೋಳನ್ನು ಕೇಳುವವರು ಯಾರೂ? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಬಿಸಿಲಿನ ತಾಪಕ್ಕೆ ಕಂಗೆಟ್ಟ ಮಂಗಗಳು ನೀರಿಗಾಗಿ ಮನೆಗಳ ಮೇಲಿನ ಸಿಂಟ್ಯಾಕ್ಸ್​ಗಳಲ್ಲಿ ಇಣುಕಿ ಅದರಲ್ಲಿರುವ ನೀರನ್ನು ಕುಡಿಯುವ ದೃಶ್ಯಗಳು ಆಗಾಗ ಕಾಣಸಿಗುತ್ತಿವೆ. ಮನೆಗಳ ಹೊರವಲಯದಲ್ಲಿರುವ ನಳಗಳನ್ನು ತಾವೇ ಆನ್​ ಮಾಡಿ ನೀರನ್ನು ಕುಡಿಯುವ ದೃಶ್ಯಗಳೂ ಕಡಿಮೆ ಇಲ್ಲ. ಇನ್ನೂ ಕೆಲವು ಮಂಗಗಳು ನೀರು ಕುಡಿಯುವ ಸಂದರ್ಭದಲ್ಲಿ ನಳಗಳಿಗೆ ಹಾನಿ ಮಾಡುತ್ತಿವೆ.
ಮಳೆಗಾಲದಲ್ಲಿ ತಂಗುಗುಂಡಿಗಳಲ್ಲಿ ಮಳೆನೀರು ನೀರು ನಿಲ್ಲುವುದು ಸಾಮಾನ್ಯ. ಆಗ ಕುರಿಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಆದರೆ ಬೇಸಿಗೆ ಬಂತು ಎಂದರೆ ಕುರಿಗಳಿಗೆ ನೀರಿನ ಅಭಾವ ಪ್ರಾರಂಭವಾಗುತ್ತದೆ. ನೀರಾವರಿ ಹೊಲದಲ್ಲಿ ನೀರು ಇರುತ್ತಾದರೂ ಕುರಿಗಳು ಹೊಲವನ್ನು ಹಾಳು ಮಾಡುತ್ತವೆ ಎಂದು ಹೊಲದ ಮಾಲೀಕರು ಹೊಲ ಗದ್ದೆಗಳಲ್ಲಿ ಕುರಿಗಳನ್ನು ಬಿಡುವುದಿಲ್ಲ. ಹಾಗಾಗಿ, ಊರ ಹೊರವಲಯದ ಕೆರೆ ನೀರಿನ ಮೇಲೆಯೇ ಅವಲಂಬನೆ ಆಗಿವೆ. ಆದರೆ, ಕೆರೆಗಳು ಮಾಯವಾಗುತ್ತಿವೆ. ಬಿಸಿಲು ಜಾಸ್ತಿ ಆದರೆ ಕೆರೆ ನೀರು ಕಡಿಮೆ ಆಗುತ್ತದೆ ಎನ್ನುವ ಆತಂಕ ಕುರಿಗಾಹಿಗಳಿಗೆ ಎದುರಾಗಿದೆ ಎನ್ನುತ್ತಾರೆ.
ನಗರದಲ್ಲಿ ಬಿಡಾಡಿದನಗಳಿಗರ ನೀರಿಗೆ ಹಾಹಾಕಾರ ಶುರುವಾಗಿದೆ. ಕುಡಿಯಲು ನೀರಿಲ್ಲಿದೆ ಹೈರಾಣಾಗಿವೆ. ಸಾವರ್ಜನಿಕ ನಳಗಳಲ್ಲಿ ದನಕರುಗಳು ನೀರನ್ನು ಕುಡಿಯುವ ಧೃಶ್ಯಗಳು ಕಂಡುಬರುವುದು ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿವೆ. ಬಿಸಿಲಿನ ತಾಪಕ್ಕೆ ಪಕ್ಷಿಗಳಿಗೂ ಆಹಾರ ನೀರು ಇಲ್ಲದ ಕಾರಣ, ಪಕ್ಷಿಗಳು ಮನೆ ಮೇಲೆ ಬಂದು ನೀರಿಗಾಗಿ ಹುಡುಕಾಟ ನಡೆಸುತ್ತಿರುವ ಸನ್ನಿವೇಶಗಳು ಕಂಡು ಬರುತ್ತಿವೆ. ಒಟ್ಟಾರೆ ಮೂಕಪ್ರಾಣಿಗಳು ಬೇಸಿಗೆಯ ಬಿಸಿಲಿಗೆ ಬೇಸತ್ತು ಗಿಡ ಮರಗಳ ಕೆಳಗಿನ ನೆರಳಿನಡಿ ನಿಲ್ಲಲು ಹಾತೂರಿಯುತ್ತಿವೆ.
ಕೋಟ್​:
ಬೇಸಿಗೆ ಹೆಚ್ಚಾದಂತೆ ಕಪ್ಪತ್ತಗುಡ್ಡದಲ್ಲಿ ನೀರಿನ ತೊಟ್ಟಿಗಳಿಗೆ ಟ್ಯಾಂಕರ ಮೂಲ ಪ್ರತಿ 3 ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತದೆ ಹಾಗೂ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಡಿಬಿಒಟಿ ಮೂಲಕ ನೀರು ಪೂರೈಕೆ ಆಗುತ್ತಿದ್ದು ಯಾವುದೇ ರೀತಿಯ ನೀರು ಅಭಾವ ಇಲ್ಲ. ಬಿಸಿಲಿಗೆ ಮನುಷ್ಯರೇ ತತ್ತರಿಸಿ ಹೋಗಿದ್ದಾರೆ. ಅಂತಹದರಲ್ಲಿ ಮೂಕ ಪ್ರಾಣಿಗಳು ನೀರು ನೆರಳಿಗಾಗಿ ಪರದಾಡುವ ದೃಶ್ಯ ನಗರದಲ್ಲಿ ಕಂಡುಬರುತ್ತಿದೆ. ಎಲ್ಲರೂ ತಮ್ಮ ಮನೆ ಮೇಲೆ ಮತ್ತು ಮನೆ ಮುಂದೆ ನೀರು ಇಟ್ಟರೆ ಪ್ರಾಣಿ, ಪಕ್ಷಿಗಳಿಗೆ ಉಪಯೋಗವಾಗುತ್ತದೆ.
ವೀರೇಂದ್ರ ಮರಿಬಸನ್ನವರ, ವಲಯ ಅರಣ್ಯ ಅಧಿಕಾರಿ, ಗದಗ