ಗದಗ ಜಿಪಂನಲ್ಲಿ ಏರ್ಪಡಿಸಿದ್ದ ವಿಬಿಜಿರಾಮ್​ಜಿ ಕಾರ್ಯಾಗಾರವನ್ನು ಸಿ.ಆರ್​. ಮುಂಡರಗಿ ಉದ್ಘಾಟಿಸಿದರು. ಎ. ಎ. ಕಂಬಾಳಿಮಠ, ಮಲ್ಲಯ್ಯ ಕೊರವನವರ ಹಲವರು ಇದ್ದರು. 
ರಾಜ್ಯ

ನರೇಗಾ ಬದಲು ಜು.1ರಿಂದ ವಿಬಿ-ಜಿರಾಮ್​ಜಿ ಯೋಜನೆ ಜಾರಿ

ಶಿವಾನಂದ ಹಿರೇಮಠ
ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಸಿದ್ಧತೆ, ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ
ವಿಜಯವಾಣಿ ಸುದ್ದಿಜಾಲ ಗದಗ
ಗ್ರಾಮೀಣ ಉದ್ಯೋಗ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್​ ರೋಜ್​ಗಾರ್​ ಆ್ಯಂಡ್​ ಅಜೀವಿಕ ಮಿಷನ್​ (ವಿಬಿ-ಜಿರಾಮ್​ಜಿ) ಯೋಜನೆ ದೇಶಾದ್ಯಂತ ಜು.1ರಿಂದ ಜಾರಿಗೆ ಬರಲಿದೆ. ಗದಗ ಜಿಲ್ಲೆಯಲ್ಲಿಯೂ ಯೋಜನೆಯ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದಶಿರ್ ಸಿ.ಆರ್​. ಮುಂಡರಗಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಬಿ-ಜಿರಾಮ್​ಜಿ ಯೋಜನೆ ಕುರಿತು ಜಿಲ್ಲೆಯ ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಗ್ರಾಮೀಣ ಕುಶಲ ಕಾಮಿರ್ಕರಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಯೋಜನೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.
ವಿಬಿ-ಜಿ ರಾಮ್​ಜಿ ಯೋಜನೆಯಡಿ ಸ್ವಯಂ ಪ್ರೇರಿತವಾಗಿ ಕುಶಲ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸುವ ಗ್ರಾಮೀಣ ಕುಟುಂಬಗಳ ವಯಸ್ಕ ಸದಸ್ಯರಿಗೆ ಒಂದು ಆಥಿರ್ಕ ವರ್ಷದಲ್ಲಿ 125 ದಿನಗಳ ಕಡ್ಡಾಯ ಉದ್ಯೋಗ ಖಾತ್ರಿ ನೀಡಲಾಗುತ್ತದೆ. ಯೋಜನೆಯು ವಿಕಸಿತ ಗ್ರಾಮ ಪಂಚಾಯಿತಿ ಯೋಜನೆ ಮೂಲಕ ಸ್ಥಳಿಯ ಅಗತ್ಯಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಆಯ್ಕೆ ಮಾಡಿ ಅನುಷ್ಠಾನಗೊಳಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಗ್ರಾಮ ಪಂಚಾಯಿತಿಗಳಿಗೆ ಕುಟುಂಬಗಳ ನೋಂದಣಿ, ಉದ್ಯೋಗ ಅಜಿರ್ ಸ್ವೀಕಾರ, ಕಾಮಗಾರಿಗಳ ನಿರ್ವಹಣೆ ಹಾಗೂ ದಾಖಲೆಗಳ ಸಂರಕ್ಷಣೆ ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು.
ಜಲ ಭದ್ರತೆ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಜೀವನೋಪಾಯ ಸೌಲಭ್ಯಗಳು ಹಾಗೂ ಹವಾಮಾನ ವೈಪರೀತ್ಯ ಶಮನ ಕಾಮಗಾರಿಗಳಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಜೊತೆಗೆ ಸಮಗ್ರ ಡಿಜಿಟಲ್​ ವ್ಯವಸ್ಥೆಯ ಮೂಲಕ ಆಡಳಿತ, ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ನಾಗರಿಕರ ಭಾಗವಹಿಸುವಿಲೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸರ್ಕಾರದ ಮಾರ್ಗಸೂಚಿಯಂತೆ ಜು. 1ರಿಂದ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲ ವರ್ಗದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಂತ ಹಂತವಾಗಿ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮಲ್ಲಿ ಹಿಂದಿನ ನರೇಗಾ ಯೋಜನೆ ಹಾಗೂ ಪರಿಷತ ವಿಬಿ-ಜಿ ರಾಮ್​ಜಿ ಯೋಜನೆಯ ನಡುವಿನ ಪ್ರಮುಖ ಬದಲಾವಣೆಗಳ ಕುರಿತು ಮೈಸೂರಿನ ಅಬ್ದುಲ್​ ನಜೀರ್​ ಸಾಬ್​ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಂಸ್ಥೆಯಿಂದ ತರಬೇತಿ ಪಡೆದ ತಜ್ಞರು ಅಧಿಕಾರಿಗಳಿಗೆ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು ಹಲವರು ಇದ್ದರು.
ಕೋಟ್​
ಭಾರತ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ, ಭಾರತವನ್ನು ಸಂರ್ಪೂಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ವಿಕಸಿತ ಭಾರತ 2047 ಗುರಿ ಸಾಧನೆಗೆ ಈ ಯೋಜನೆ ಮಹತ್ವದ ಹೆಜ್ಜೆಯಾಗಿದ್ದು, ಗ್ರಾಮೀಣ ಉದ್ಯೋಗ ಭದ್ರತೆ ಮತ್ತು ಜೀವನೋಪಾಯ ವೃದ್ಧಿಗೆ ಹೊಸ ದಿಕ್ಕು ನೀಡಲಿದೆ
ಸಿ. ಆರ್​. ಮುಂಡರಗಿ, ಜಿಪಂ