ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತು. ಕೆಲವೆಡೆ ಗಿಡ-ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದದ್ದು, ದ್ವಿಚಕ್ರ ವಾಹನ ಸೇರಿ ಮನೆಯ ಗೋಡೆಗಳು ಜಖಂಗೊಂಡಿವೆ.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿಯಿತು.
ಅವಳಿ ನಗರದ ತಿಲಕ್ ಪಾರ್ಕ್, ಗ್ರೇನ್ ಮಾರ್ಕೆಟ್, ಮಹಾತ್ಮ ಗಾಂಧಿ ವೃತ್ತ, ತೋಂಟದಾರ್ಯ ರಥಬೀದಿ, ಬಸವೇಶ್ವರ ವೃತ್ತ, ರೋಟರಿ ಸರ್ಕಲ್, ಬಳ್ಳಾರಿ ಬ್ರಿಡ್ಜ್, ಹಳೆ ಜಿಲ್ಲಾಧಿಕಾರಿ ಕಚೇರಿ ವೃತ್ತ, ಹಾತಲಗೇರಿ ನಾಕಾ, ಜೆಟಿ ಕಾಲೇಜ್ ಸೇರಿ ಹಲವೆಡೆ ರಸ್ತೆ ಮೇಲೆ ನೀರು ಹರಿದಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಬೀದಿ ಬದಿಯ ಹೂವು-ಹಣ್ಣಿನ ವ್ಯಾಪಾರಸ್ಥರು, ಸಾರ್ವಜನಿಕರು ತೊಂದರೆ ಅನುಭವಿಸಿದರು.
ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆಯ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಮಳೆ ಸುರಿಯುತ್ತಿದ್ದು, ಭಾನುವಾರವೂ ಜಿಲ್ಲೆಯ ವಿವಿಧೆಡೆ ಮಳೆ ಸುರಿಯಿತು. ಬಾನುವಾರ ಅವಳಿ ನಗರದಲ್ಲಿ ಸುರಿದ ಮಳೆಯಿಂದ ಬಿಸಿಲಿನಿಂದ ಬಸವಳಿದಿದ್ದ ನಗರದ ಜನರಿಗೆ ತುಸು ಆಹ್ಲಾದಕರ ಅನುಭವ ನೀಡಿತು.
ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನ ಹಲವು ಭಾಗಗಳಲ್ಲಿಯೂ ಮಳೆ ಚುರುಕುಗೊಂಡಿದ್ದು ಜಿಲ್ಲೆಯ ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ರೋಣ ಭಾಗದಲ್ಲೂ ಗುಡಗು, ಬಿರುಗಾಳಿ ಸಹಿತ ಮಳೆ ಸುರಿಯಿತು.
ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ರಭಸವಾಗಿ ಹರಿಯಿತು. ಇದರಿಂದ ರಸ್ತೆಯೆಲ್ಲಾ ಕೆಸರು ಮಯವಾಗಿತ್ತು. ಬೈಕ್, ಸವಾರರು, ಸೈಕಲ್ ಸವಾರರು, ಪಾದಚಾರಿಗಳು ರಸ್ತೆ ದಾಟಲು ಹರ ಸಾಹಸ ಪಡುವಂತಾಯಿತು.
ರಸ್ತೆಯಲ್ಲಿ ನೀರು: ಗದಗ-ಬೆಟಗೇರಿ ಅವಳಿ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಮಳೆ ನೀರಿನೊಂದಿಗೆ ಚರಂಡಿ ರಸ್ತೆ ಮೇಲೆ ಹರಿದ ಪರಿಣಾಮ ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶದಲ್ಲಿ ಮಳೆ ನೀರು ನುಗ್ಗಿದ ಪರಿಣಾಮ ಸ್ಥಳೀಯರು ತೊಂದರೆಗೀಡಾದರು. ಹಳೆ ಬಸ್ ನಿಲ್ದಾಣ, ಮಹಾತ್ಮ ಗಾಂಧಿ ವೃತ್ತ, ಹಳೇ ಡಿಸಿ ಕಚೇರಿ ವೃತ್ತ, ಝಂಡಾ ಸರ್ಕಲ್ ಸೇರಿದಂತೆ ವಿವಿಧ ಭಾಗದಲ್ಲಿ ಹೆಚ್ಚಿನ ನೀರು ಹರಿವು ಇದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ರಸ್ತೆಗಳಲ್ಲಿ ನೀರು ಹರಿದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಬಿರುಗಾಳಿಯ ವೇಗ ಹೆಚ್ಚಿದ್ದರಿಂದ ಅನೇಕ ಕಡೆ ಮರದ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಸಣ್ಣ ಪ್ರಮಾಣದಲ್ಲಿ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿವೆ.
ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಮುಂಡರಗಿ, ನರಗುಂದ, ರೋಣ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ಭಾಗಗಳಲ್ಲಿ ಭಾರೀ ಮಳೆಯ ಅಬ್ಬರ ಹೆಚ್ಚಾಗಿ ಕಂಡುಬಂದಿದೆ. ಮಳೆಯ ಜೊತೆಗೆ ಬಿರುಗಾಳಿ ಬೀಸಿದ ಪರಿಣಾಮ ಕೆಲವೆಡೆ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಸಂಜೆ ವೇಳೆಯಲ್ಲಿ ಏಕಾಏಕಿ ಕತ್ತಲೆ ಆವರಿಸಿ, ಮಿಂಚು-ಗುಡುಗಿನ ಸದ್ದಿಗೆ ಜನರು ಆತಂಕಗೊಂಡರು.
24ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ:
ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಹೊರವಲಯಗಳಲ್ಲಿ 24ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪರಿಣಾಮ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ರಾತ್ರಿ ವೇಳೆಗೆ ಕತ್ತಲೆ ಆವರಿಸಿತು. ಹೆಸ್ಕಾಂ ಸಿಬ್ಬಂದಿ ತುರ್ತು ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದು, ವಿದ್ಯುತ್ ಮರುಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ.
ಕೆಲವೆಡೆ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮಳೆ ಮತ್ತು ಗಾಳಿಯ ತೀವ್ರತೆಯಿಂದ ಟ್ರಾನ್ಸ್‌ಫಾರ್ಮರ್‌ಗಳಿಗೂ ಹಾನಿಯಾದ ಮಾಹಿತಿ ಲಭ್ಯವಾಗಿದೆ.
ರಸ್ತೆಗೆ ಬಿದ್ದ ಮರದ ರೆಂಬೆಗಳು:
ಭಾರೀ ಗಾಳಿಗೆ ಅನೇಕ ಮರಗಳ ದೊಡ್ಡ ರೆಂಬೆಗಳು ಮುರಿದು ರಸ್ತೆಗಳ ಮೇಲೆ ಬಿದ್ದಿವೆ. ಗದಗ ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ಅಗ್ನಿಶಾಮಕ ದಳ ಹಾಗೂ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ರೆಂಬೆಗಳನ್ನು ತೆರವುಗೊಳಿಸಿದರು.
ಕೆಲ ಗ್ರಾಮೀಣ ಭಾಗಗಳಲ್ಲಿ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಮತ್ತಷ್ಟು ಹೆಚ್ಚಾಗಿದೆ. ಗ್ರಾಮಸ್ಥರು ಆತಂಕದ ನಡುವೆ ರಾತ್ರಿ ಕಳೆದಿದ್ದಾರೆ.
ಗದಗ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಮನೆಗಳೊಳಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತಾಯಿತು. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ರಸ್ತೆಗಳು ಕೆರೆಯಂತಾಗಿದ್ದವು. ಹಲವೆಡೆ ಅಂಗಡಿಗಳೊಳಗೂ ನೀರು ನುಗ್ಗಿ ವ್ಯಾಪಾರಸ್ಥರಿಗೆ ನಷ್ಟ ಉಂಟಾಗಿದೆ.
ನಗರದ ಪ್ರಮುಖ ವೃತ್ತಗಳು ಹಾಗೂ ಬಡಾವಣೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನ ಸವಾರರು ನಿಧಾನಗತಿಯಲ್ಲಿ ಸಂಚರಿಸಿದರು. ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಸಂಕಷ್ಟ ಅನುಭವಿಸಿದರು.
ರೈತರಿಗೆ ಆತಂಕ – ಕೆಲವರಿಗೆ ಆಶಾಭಾವನೆ:
ಮಳೆಯ ಅಬ್ಬರದಿಂದ ಕೆಲವೆಡೆ ಬೆಳೆ ಹಾನಿಯ ಆತಂಕ ವ್ಯಕ್ತವಾಗಿದ್ದರೂ, ಬೇಸಿಗೆಯ ತಾಪಮಾನದಿಂದ ಬಳಲುತ್ತಿದ್ದ ಜನರಿಗೆ ತುಸು ನಿರಾಳತೆ ದೊರಕಿದೆ. ಮುಂಗಾರು ಪೂರ್ವ ಮಳೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗಿದೆ. ಆದರೆ ಗಾಳಿ-ಮಳೆಯಿಂದ ಬೆಳೆಗಳಿಗೆ ಹಾನಿಯಾಗುವ ಭೀತಿ ಸಹ ರೈತರನ್ನು ಕಾಡುತ್ತಿದೆ.