ಗದಗ 
ರಾಜ್ಯ

ಮೆಕ್ಕೆಜೋಳ! ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲ

ಶಿವಾನಂದ ಹಿರೇಮಠ
ಶಿವಾನಂದ ಹಿರೇಮಠ ಗದಗ
ಕಬ್ಬು, ಹೆಸರು ಜತೆಗೆ ಮೆಕ್ಕೆಜೋಳ ಬೆಳೆದ ರೈತರಿಗೆ ಈ ವರ್ಷ ಬಿಸಿ ತುಪ್ಪವಾಗಿ ಪರಿಣಮಿಸಿದೆ. 15 ದಿನಗಳ ವರೆಗೆ ಪ್ರತಿಭಟನೆ ನಡೆಸಿದರೂ ಸಹ ಮೆಕ್ಕೆಜೋಳ ಬೆಳೆದ ರೈತರಿಗೆ ಪರಿಪೂರ್ಣವಾಗಿ ಸಮಸ್ಯೆ ಬಗೆಹರಿದಂತೆ ಕಾಣುತ್ತಿಲ್ಲ. ರೈತರ ಪ್ರತಿಭಟನೆಗೆ ಮಣಿದು ಖರೀದಿ ಕೇಂದ್ರ ಆರಂಭವಾದರೂ ಸಹ ನೋಂದಣಿ ಪ್ರಕ್ರಿಯೆಯಲ್ಲಿ ಅನುಸರಿಸುವ ಮಿತಿಯಂದ ಜಿಲ್ಲೆಯ ಎಲ್ಲ ರೈತರಿಗೆ ಬೆಂಬಲ ಬೆಲೆ ಖರೀದಿ ಅಡಿಯಲ್ಲಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೆಕ್ಕೆಜೋಳ ಸಮಸ್ಯೆ ಎನ್ನುವುದು ಜಿಲ್ಲೆಯಲ್ಲಿ ಬಿಡಿಸಲಾಗದ ಕಗ್ಗಂಟಾಗಿ ಪರಿಗಣಿಸಿದೆ.
ಎನಿದು ಸಮಸ್ಯೆ?
ರೈತರ ಪ್ರತಿಭಟನೆಗೆ ಮಣಿದ ಸರ್ಕಾರ ಪ್ರತಿ ರೈತರಿಂದ 5 ಕ್ವಿಂಟಾಲ ಮೆಕ್ಕೆಜೋಳ ಖರೀದಿ ಮಾಡಬೇಕೆಂದು ಮಿತಿಗೊಳಿಸಿ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದೆ. ಅದೇ ಮಾದರಿಯಲ್ಲಿ ಜಿಲ್ಲಾ ಕೃಷಿ ಮಾರಾಟ ಮಂಡಳದವರು ಖರೀದಿ ಕೇಂದ್ರ ಆರಂಭಿಸಿದ್ದಾರೆ ಮತ್ತು ಅಷ್ಟೇ ಪ್ರಮಾಣದ ರೈತರು ನೋಂದಣಿ ಮಾಡಿಸಿದ್ದಾರೆ. 5 ಕ್ವಿಂಟಾಲ್​ ಖರೀದಿ ಕಡಿಮೆ ಪ್ರಮಾಣದ್ದಾಗಿ ಎಂದು ಮತ್ತೆ ರೈತರು ಪ್ರತಿಭಟನೆ ನಡೆಸಿದರು. ತದ ನಂತರ ಸರ್ಕಾರ 20 ಕ್ವಿಂಟಾಲ್​ ಖರೀದಿಸಬೇಕೆಂದು ಆದೇಶ ಮಾರ್ಪಾಡು ಮಾಡಿತು. ಆದರೆ, ಪ್ರಸಕ್ತ ಸಾಲಿನಲ್ಲಿ ಹೆಚ್ಚುವರಿ ಮೆಕ್ಕೆಜೋಳ ಬೆಳೆದ ಕಾರಣ ರೈತರ ಆಗ್ರಹಕ್ಕೆ ಮಣಿದ ಸರ್ಕಾರ ಪ್ರತಿ ರೈತರಿಗೆ 50 ಕ್ವಿಂಟಾಲ್​ ಮೆಕ್ಕೆಜೋಳ ಖರೀದಿಗೆ ಆದೇಶ ಮಾಡಿದೆ. ಈ ನಡುವೆ ಮಾರಾಟ ಮಂಡಳದಿಂದ ಮೆಕ್ಕೆಜೋಳ ಖರೀದಿಸಲು ಹೆಚ್ಚಿನ ಖಾಸಗಿ ಕಂಪನಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಹಲವಡೆ ನೋಂದಣಿ ಪ್ರಕ್ರಿಯೆ ಸಮಪರ್ಕಕವಾಗಿ ನಡೆಯುತ್ತಿಲ್ಲ. ಸರ್ಕಾರದ ಬೆಂಬಲ ಬೆಲೆಯಡಿ ಖರೀದಿಗೆ ಅವಕಾಶ ಇದ್ದರೂ ಸಹ ಮೆಕ್ಕೆಜೋಳ ಖರೀದಿಸುವ ಕಂಪನಿಗಳಿಂದ ಬೇಡಿಕೆ ನಿರಂತರವಾಗಿ ಇರದ ಕಾರಣ ಕೆಲವಡೆ ನೋಂದಣಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ನೋಂದಣಿಯಾದರೂ ಸಮಸ್ಯೆ:
ಜಿಲ್ಲೆಯ ಕೆಲ ಖರೀದಿ ಕೇಂದ್ರಗಳಲ್ಲಿ 50 ಕ್ವಿಂಟಾಲ್​ ಖರೀದಿಗೆ ಹಲವು ರೈತರಿಂದ ನೋಂದಣಿ ಮಾಡಿಸಿಕೊಳ್ಳಲಾಗಿದೆ. ಲೆ$್ಮಶ್ವರ ತಾಲೂಕು ಒಂದರಲ್ಲೇ 1500 ಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ. ಆದರೆ, ಖಾಸಗಿ ಸಂಸ್ಥೆಗಳಿಂದ ಬೇಡಿಕೆ ಬಾರದ ಕಾರಣ ಪ್ರತಿನಿತ್ಯ ಸರಾಸರಿ 4 ರಿಂದ 5 ರೈತರಿಂದ ಒಟ್ಟು 200 ರಿಂದ 250 ಕ್ವಿಂಟಾಲ್​ ಖರೀದಿ ಪ್ರಕ್ರಿಯೆ ಮಾತ್ರ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ನೋಂದಣಿ ಮಾಡಿಸಿದರೂ ಸಹ ರೈತರು ಕಾಯಬೇಕಾಗಿದೆ.
1.44 ಲಕ್ಷ ಹೆಕ್ಟರ್​ ಮೆಕ್ಕೆಜೋಳ ಬಿತ್ತನೆ:
ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಲ್ಲಿ ಈಗ ಗದಗ ಜಿಲ್ಲೆವೂ ಒಂದಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಸುಮಾರು 1.44 ಲಕ್ಷ ಹೆಕ್ಟೇರ್​ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಹೆಕ್ಟೇರ್​ಗೆ 20 ರಿಂದ 40 ಕ್ವಿಂಟಾಲ್​ ಇಳುವರಿ ಬಂದಿದೆ. ಜಿಲ್ಲೆಯಲ್ಲಿ ಅಂದಾಜು 45 ಲಕ್ಷ ಕ್ವಿಂಟಾಲ್​ ಮೆಕ್ಕೆಜೋಳ ಇಳುವರಿ ಬಂದಿದೆ. ಒಟ್ಟು 90 ಸಾವಿರ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಆದರೆ ಗೊಂದಲದ ಕಾರಣದಿಂದ ರೈತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಖರೀದಿ ಕೇಂದ್ರ ಮಾಫಿಯಾ:
ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಮಾಫಿಯಾ ಕೂಡ ನಡೆಯುತ್ತಿದೆ ಎಂಬ ಆರೋಪವನ್ನು ತಳ್ಳಲಿ ಹಾಕುವಂತಿಲ್ಲ. ಈ ಬಗ್ಗೆ ಹತ್ತಾರು ರೈತರು ಆರೋಪ ಮಾಡುತ್ತಿದ್ದಾರೆ ಮತ್ತು ಅನುಮಾನವು ಮೂಡಿದೆ. ಬೆಳೆ ಬಂದಾಗಲೇ ಖರೀದಿ ಕೇಂದ್ರ ಆರಂಭ ಮಾಡಿದರೆ ರೈತರಿಗೆ ಅನುಕೂಲ ಆಗುತ್ತಿತ್ತು. ರೈತರು ಎಪಿಎಂಸಿ ದಲ್ಲಾಳಿಗಳಿಗೆ ಮಾರಾಟ ಮಾಡಿದ ನಂತರವೇ ಖರೀದಿ ಕೇಂದ್ರ ಆರಂಭ ಮಾಡುತ್ತಾರೆ. ಇದು ದಲ್ಲಾಳಿಗಳಿಗೆ ವರವಾದಂತೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. ರೈತರಿಂದ ಕಡಿಮೆ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವ ದಲ್ಲಾಳಿಗಳು, ನಂತರ ಅದೇ ಧಾನ್ಯ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಲಾಭ ಪಡೆಯುತ್ತಿದ್ದಾರೆ ಎಂಬ ಆರೋಪ ಮತ್ತು ಅನುಮಾನಗಳು ರೈತರಲ್ಲಿ ಮೂಡಿದೆ.
ಕೋಟ:
ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕೆಲ ಸಮಸ್ಯೆಗಳು ಇರಬಹುದು. ಈ ಬಗ್ಗೆ ಗಮನ ಹರಿಸಲಾಗುವುದು. ಬೇಡಿಕೆಗೆ ತಕ್ಕಂತೆ ನೋಂದಣಿ ನಡೆಯುತ್ತಿದೆ. ಸರ್ಕಾರದ ಆದೇಶವನ್ನು ಪಾಲನೆ ಮಾಡಲಾಗುತ್ತಿದೆ.
ಡಿ.ಬಿ. ಡೊಕ್ಕನ್ನವರ, ಜಿಲ್ಲಾ ಅಧಿಕಾರಿ,
ಮಾರಾಟ ಮಂಡಳ - ಗದಗ
ಕೋಟ್​:
ರಾಜ್ಯ ಸರ್ಕಾರ ಆದೇಶ ನೀಡಿದ ನಂತರ ಜಿಲ್ಲೆಯಲ್ಲಿ ಮೂರು ದಿನ ನೋಂದಣಿ ಪ್ರಕ್ರಿಯೆ ನಡೆಸಿ ನಂತರ ನಮಗೆ ಬೇಕಾದ ಮೆಕ್ಕೆಜೋಳದ ಟಾರ್ಗೆಟ್​ ಮುಗಿಯಿತು ಎಂದು ಕೆಲವಡೆ ಖರೀದಿ ಕೇಂದ್ರ ಸ್ಥಗಿತಗೊಳಿಸಿ ಪ್ರಸಂಗ ನಡೆದಿವೆ. ಸರ್ಕಾರ ತನ್ನ ಆದೇಶ ಮಾರ್ಪಾಟು ಮಾಡಿದ ನಂತರ ಹೊಸ ಆದೇಶದಂತೆ ನೋಂದಣಿ ಮಾಡಿಕೊಳ್ಳಬೇಕು. ಕೆಲವಡೆ ಗೊಂದಲಗಳಿಂದ ಖರೀದಿ ಕೇಂದ್ರ ಆರಂಭವಾಗದೇ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಗೋಳಾಡುತ್ತಿದ್ದಾರೆ. ಸಮಸ್ಯೆ ಮುಂದುವರಿದರೆ ರೈತರ ಜತೆ ಮತ್ತೆ ಪ್ರತಿಭಟನೆ ನಡೆಸಲಾಗವುದು.
ರವಿಕಾಂತ ಅಂಗಡಿ, ಹೋರಾಟಗಾರ