ಎಸ್ಸಿ ಎಸ್ಟಿ ಒಳಮೀಸಲಾತಿ ಅನ್ಯಾಯ ಕಂಡಿಸಿ ಮಾಜಿ ಸಂಸದ ಉಮೇಶ ಜಾಧವ ಸುದ್ದಿಗೋಷ್ಟಿ ನಡೆಸಿದರು. ಪ್ರಭು ಚವ್ಹಾಣ, ಚಂದ್ರು ಲಮಾಣಿ, ಭೀಮಸಿಂಗ ರಾಥೋಡ ಇತರರು ಇದ್ದರು. - 
ರಾಜ್ಯ

ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯ: ಉಮೇಶ ಜಾಧವ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ಒಳ ಮೀಸಲಾತಿ ಕುರಿತು ಎಸ್​.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಸದಾಶಿವ ಆಯೋಗ ರಚನೆ ಮಾಡಲಾಗಿತ್ತು. ಅದು ಸರಿ ಇಲ್ಲ ಎಂದು ನಾವು ಹೋರಾಟ ಮಾಡಿದ್ದೇವು. ಈಗ ಒಳ ಮೀಸಲಾತಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ನಾಗಮೋಹನ್​ ದಾಸ ಅವರ ವರದಿ ದತ್ತಾಂಶಗಳು ತಪ್ಪಾಗಿದ್ದರಿಂದ ಒಳ ಮೀಸಲಿನಲ್ಲಿ ನಮಗೆ ಅನ್ಯಾಯ ಆಗಿದೆ ಎಂದು ಮಾಜಿ ಸಂಸದ ಉಮೇಶ ಜಾಧವ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಾಧುಸ್ವಾಮಿ ಅವರ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷತೆಯಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಲಾಗಿತ್ತು. ಉತ್ತಮವಾಗಿ ಮೀಸಲಾತಿ ನೀಡಲಾಗಿತ್ತು ಎಂದರು.
ಕೊರಚ, ಕೊರಮ, ಬೋವಿ ಮತ್ತು ಬಂಜಾರ ಸಮುದಾಯವನ್ನು ಎಸ್ಸಿ ಒಳಮೀಸಲಿನಿಂದ ತೆಗೆಯಬೇಕು ಎಂದು ಕೆಲವರು ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದರು. ಎಸ್ಸಿ ಕಮಿಷನ್​ ನಿಂದ ಬೊಮ್ಮಾಯಿ ಅವರಿಗೆ ವರದಿ ನೀಡುವಂತೆ ಪತ್ರ ಬರೆಯಲಾಗಿತ್ತು. ಬೊಮ್ಮಾಯಿ ಅವರು ಸ್ಪಷ್ಟ ಉತ್ತರ ನೀಡಿ, ಎಸ್ಸಿ ವರ್ಗದಿಂದ ಈ ನಾಲ್ಕು ಸಮುದಾಯಗಳನ್ನು ಹೊರಗಿಡಲು ಸಾಧ್ಯವಿಲ್ಲ. ಕೊರಚ, ಕೊರಮ ಬೋವಿ ಬಂಜಾರ ಸಮುದಾಯಗಳು ಇನ್ನೂ ಅಭಿವೃದ್ಧಿ ಹೊಂದಿಲ್ಲ. ಹಾಗಾಗಿ ಈ ಸಮುದಾಯಗಳಿಗೆ ಮೀಸಲು ಅಗತ್ಯವಿದೆ ಎಂದು ಉತ್ತರ ನೀಡಿ ಗಟ್ಟಿತನ ಮೆರೆದರು. ಆದರೆ ಕಾಂಗ್ರೆಸ್​ ಸರ್ಕಾರ ಒಳ ಮೀಸಲಾತಿಯಲ್ಲಿ ಅನ್ಯಾಯ ಮಾಡಿತು. ತಪ್ಪಾಗಿದ್ದನ್ನು ಸರ್ಕಾರ ಸರಿಪಡಿಸಬೇಕು. ಇಲ್ಲವಾದರೆ ಜನಾಂದೋಲನ ಮಾಡಲಾಗುವುದು ಎಂದು ಸಂಸದ ಉಮೇಶ ಜಾಧವ ಆಗ್ರಹಿಸಿದರು.
ಶಾಸಕ ಪ್ರಭು ಚವ್ವಾಣ ಮಾತನಾಡಿ, ಒಳ ಮೀಸಲಾತಿ ಅನ್ಯಾಯದಿಂದ ಶಿಕ್ಷಣದಲ್ಲಿ, ಹಾಸ್ಟೆಲ್​ ನೇಮಕಾತಿಯಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ. ಕಳೆದ ಬಾರಿಯ ಶೈಕ್ಷಣಿಕ ಹಕ್ಕುಗಳನ್ನು ಈ ಬಾರಿ ಪಡೆಯಲು ಆಗುತ್ತಿಲ್ಲ. ಒಳಮೀಸಲಾತಿ ಪುನಾರಚನೆ ಆಗಬೇಕು. ಇಲ್ಲವಾದರೆ, ಬಸ್​ ರೋಕೋ, ರೈಲು ರೋಕೋ, ಸಿಎಂ, ಸಚಿವರ ರೋಕೋ ಚಳುವಳಿ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಚಂದ್ರು ಲಮಾಣಿ ಮಾತನಾಡಿ, ಕಾಂಗ್ರೆಸ್​ ಪಕ್ಷದಿಂದ ಬಂಜಾರ ಸಮುದಾಯಕ್ಕೆ ಒಳಮೀಸಲಾತಿ ವಿಷಯದಲ್ಲಿ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ ಪಕ್ಷ ಅಪಪ್ರಚಾರ ಮಾಡಿತ್ತು. ಬಂಜಾರ ಸಮುದಾಯವನ್ನು ಎಸ್ಸಿ ಮೀಸಲಿನಿಂದ ಬಿಜೆಪಿ ಪಕ್ಷ ಹೊರಗಡೆ ಇಡುತ್ತದೆ ಎಂದು ಕಾಂಗ್ರೆಸ್​ ಪಕ್ಷ ಸುಳ್ಳನ್ನು ಹೇಳಿ ಅಪಪ್ರಚಾರ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್​ ಪಕ್ಷ ಬಾಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಕೊರಚ, ಕೊರಮ, ಬೋವಿ, ಬಂಜಾರ ಸಮುದಾಯಕ್ಕೆ ಶೇ. 4 ಮೀಸಲಾತಿಯನ್ನು ನೀಡಿದೆ. ನಾಗಮೋಹನ್​ ದಾಸ ವರದಿಯನ್ನು ನಾವು ವಿರೋಧಿಸಿದ್ದೇವೆ. ಕಾಂಗ್ರೆಸ್​ ಸರ್ಕಾರ ಒಳ ಮೀಸಲಾತಿಯಲ್ಲಿ ಮತ್ತೊಂದು ಒಳ ಮೀಸಲಾತಿ ಮಾಡಿ ಅನ್ಯಾಯ ಮಾಡಿದೆ. ಶೇ. 5 ಮೀಸಲಾತಿಯಲ್ಲಿ ಶೇ.1 ರಷ್ಟು ಅಲೆಮಾರಿಗೆ ನೀಡಿ, ಇನ್ನೂಳಿದ 63 ಸಮುದಾಯಗಳಿಗೆ ಶೇ. 4 ರಷ್ಟು ಒಳಮೀಸಲಾತಿಯನ್ನು ನೀಡಲಾಯಿತು. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ನಮಗಷ್ಟೇ ಅಲ್ಲದೇ ಇತರೆ ಸಮುದಾಯಗಳಿಗೂ ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಮುಂದಿನ ಅಧಿವೇಶನದಲ್ಲಿ ಈ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ತಾಂಡಾ ಬಚಾಮೋ, ಕಾಂಗ್ರೆಸ್​ ಹಠಾಮೋ ಆಂದೋಲನ ಮಾಡಲಾಗುವುದು ಎಂದು ಶಾ. ಚಂದ್ರು ಲಮಾಣಿ ಹೇಳಿದರು.
ಹೂವಿನ ಹಡಗಲು ಶಾಸಕ ಕೃಷ್ಣ ನಾಯಕ ಮಾತನಾಡಿದರು. ಭೀಮಸಿಂಗ್​ ರಾಥೋಡ, ಲಿಂಗಾರಾಜ ಪಾಟೀಲ ಇತರರು ಇದ್ದರು.