ತೋಂಟದಾರ್ಯ ಜಾತ್ರಾ ಮಹೋತ್ಸವ ಕುರಿತು ರಾಜು ಖಾನಪ್ಪನ್ನವರ ಸುದ್ದಿಗೋಷ್ಟಿ ನಡೆಸಿದರು. ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಪಿ. ಎಸ್​ ಕಾಳೆ, ಭರತ್​ ಲದ್ದಿ, ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಶಿವು ಲದ್ದಿ, ವಿಶ್ವನಾಥ ಸಿರಿ ಉಪಸ್ಥಿತರಿದ್ದರು.  
ರಾಜ್ಯ

ತೋಂಟದಾರ್ಯ ಮಠದ ಜಾತ್ರೆ ವಾರಕ್ಕೆ ಸಿಮಿತವಾಗಿರಲಿ: ರಾಜು ಖಾನಪ್ಪನವರ

ಶಿವಾನಂದ ಹಿರೇಮಠ
ವಿಜಯವಾಣಿ ಸುದ್ದಿಜಾಲ ಗದಗ
ತೋಂಟದಾರ್ಯ ಮಠದ ಜಾತ್ರೆ ಏ. 1 ರಿಂದ 4 ರ ವರೆಗೆ ನಡೆಯಲಿದೆ. ಆದರೆ, ನಗರಸಭೆ ಜಾಗೆಯಲ್ಲಿ ಈ ಜಾತ್ರೆ 65 ದಿನಗಳ ಕಾಲ ನಡೆಯುತ್ತದೆ. ಇದು ಒಂದು ವಾರಕ್ಕೆ ಸಿಮಿತವಾಗಿರಲಿ ಎಂದು ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ರಾಜು ಖಾನಪ್ಪನವರ ಆಗ್ರಹಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2016 ರಿಂದ ಅತೀ ಹೆಚ್ಚು ದಿನ ನಡೆಯುವ ಜಾತ್ರೆಯನ್ನು ವಿರೋಧಿಸುತ್ತ ಬಂದಿದ್ದೇವೆ. ಜಾತ್ರೆಗೆ ಹೋರ ರಾಜ್ಯದಿಂದ ವ್ಯಾಪಾರಕ್ಕೆ ಆಗಮಿಸುತ್ತಾರೆ. ಜಿಲ್ಲೆಯ ಉದ್ಯೋಗ ಕಸಿದುಕೊಂಡು ಹೋಗುತ್ತಾರೆ. ಬಟ್ಟೆ, ಶೂ, ಪಾತ್ರೆ ಸೇರಿದಂತೆ ಎಲ್ಲವನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಸ್ಥಳಿಯ ವ್ಯಾಪಾರಸ್ಥರು ಬಾಡಿಗೆ ಅಂಗಡಿಗಳನ್ನು ಇಟ್ಟುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಲಿಂ. ಸಿದ್ದಲಿಂಗ ಮಹಾಸ್ವಾಮಿಜಿಗಳು ದೇವಸ್ಥಾನಗಳನ್ನು ವಿರೋಧಿಸುತ್ತಿದ್ದರು. ಈಗಿರುವ ಡಾ. ಸಿದ್ದರಾಮ ಶ್ರೀಗಳು ಹಿಂದಿನ ಸಿದ್ದಲಿಂಗ ಶ್ರೀಗಳ ಗದ್ದುಗೆಯನ್ನು 1.5 ಕೋಟಿ ಗೂ ಹೆಚ್ಚು ಹಣ ಖರ್ಚು ಮಾಡಿ ನಿಮಿರ್ಸಿ ಪೂಜಿಸುತ್ತಾರೆ. ಇದು ಇಬ್ಬರು ಶ್ರೀಗಳ ದ್ವಿಮುಖ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯಸನ ಮುಕ್ತ ಸಮಾಜ ಮಾಡಲು ಸಿದ್ದರಾಮ ಶ್ರೀಗಳು ಹೊರಟಿದ್ದಾರೆ. ಹಿಂದೂ ದೇವರುಗಳನ್ನು ಅವಮಾನ ಮಾಡುವ ಇವರು ವೀರಭದ್ರೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲು ಹೊರಟಿದ್ದು ಹಾಸ್ಯಾಸ್ಪದವಾಗಿದೆ. ತೊಂಟದಾರ್ಯ ಮಠದ ಶ್ರೀಗಳ ಕೆಲ ಹಿಂಬಾಲಕರು ಪ್ರತಿದಿನ ಮದ್ಯ ಸೇವಿಸುತ್ತಾರೆ. ಮೊದಲು ಅವರನ್ನು ಸುಧಾರಿಸಲಿ. ನಂತರ ಸಮಾಜವನ್ನು ಸುಧಾರಿಸಲಿ ಎಂದು ವ್ಯಸನ ಮುಕ್ತ ಪಾದಯಾತ್ರೆ ವಿರುದ್ದ ಗುಡುಗಿದರು.
ಜಾತ್ರಾ ಮಹೋತ್ಸವದ ಅಧ್ಯಕ್ಷರು ಲೆಕ್ಕ ಪತ್ರಗಳನ್ನು ಭಕ್ತರ ಮುಂದೆ ಇಡಬೇಕು. ಈಗಿರುವ ಅಧ್ಯಕ್ಷ ವಿನಾಯಕ ಮಾನ್ವಿ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರು ಪ್ರಸಕ್ತ ವರ್ಷದ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಬೇಕು. ಹಾಗೂ ಜಿಲ್ಲಾಧಿಕಾರಿಗಳು ಪ್ರವೇಶಿಸಿ ನಗರಸಭೆ ಜಾಗದಲ್ಲಿ ನಡೆಯುತ್ತಿರುವ ಈ ಅನಧಿಕೃತ ವ್ಯಾಪಾರ ತಡೆಯಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲಾ ಹಿಂದೂಪರ ಸಂಟನೆಗಳ ಜೊತೆಗೂಡಿ ಪ್ರಸಕ್ತ ವರ್ಷ ನಿರ್ಣಾಯಕ ಹೋರಾಟ ಮಾಡಲಾಗುವುದು ಎಂದು ರಾಜು ಖಾನಪ್ಪನವರ ಎಚ್ಚರಿಕೆ ನೀಡಿದರು.
ಮಹೇಶ ರೋಖಡೆ, ಶಿವಯೋಗಿ ಹಿರೇಮಠ, ಪಿ. ಎಸ್​ ಕಾಳೆ, ಭರತ್​ ಲದ್ದಿ, ವೆಂಕಟೇಶ ದೊಡ್ಡಮನಿ, ಸತೀಶ ಕುಂಬಾರ, ಶಿವು ಲದ್ದಿ, ವಿಶ್ವನಾಥ ಸಿರಿ ಉಪಸ್ಥಿತರಿದ್ದರು.
ಹಿಂದೂ ದೇವರಿಗೆ ಅವಮಾನಿಸಬಾರದು:
ತೋಂಟದಾರ್ಯ ಮಠದ ಜಾತ್ರಾ ಸಮಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಕಾರ್ಯಕ್ರಮದ ವೇದಿಕೆಯಲ್ಲಿ ಕೆಲವು ಸ್ವಾಮಿಜಿಗಳು ಈ ಹಿಂದೆ ಹಿಂದೂ ದೇವರುಗಳಿಗೆ ಅವಮಾನ ಆಗುವ ರೀತಿ ಭಾಷಣ ಮಾಡಿದ್ದಾರೆ. ಈ ಬಾರಿ ಅದು ಮರುಕಳಿಸಿದರೆ ವೇದಿಕೆಯಲ್ಲಿಯೇ ತಕ್ಕ ಪಾಠ ಕಲಿಸುತ್ತೇವೆ. ಅಂತಹ ಸ್ವಾಮೀಜಿಗಳ ಮೇಲೆ ಪೊಲೀಸ ಇಲಾಖೆ ನಿಗಾ ಇಡಬೇಕು ಎಂದು ಆಗ್ರಹಿಸಿದರು.