ಜ್ಯುವೆಲರಿ ಶಾಪ್ ಕಳ್ಳತನ ಪ್ರಕರಣ! 24 ಗಂಟೆ ಒಳಗಾಗಿ ಪೊಲೀಸ್ ಕಾರ್ಯಾಚರಣೆ
80 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ
ಅಂತರಾಜ್ಯ ಕಳ್ಳನ ಬಂಧನ! ಪೊಲೀಸ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ
ನಗರದ ಖಾಸಗಿ ಜ್ಯುವೆಲೆರಿ ಶಾಪ್ ನಲ್ಲಿ ಬುಧವಾರ ಬೆಳಗಿನ ಜಾವ 80.21ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ ಖತರ್ನಾಕ ಕಳ್ಳನನ್ನು 24 ಗಂಟೆ ಒಳಗಾಗಿ ಸಿನೀಮಿಯ ರೀತಿಯಲ್ಲಿ ಪೊಲೀಸರು ಬಂಧಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ. ಪೊಲೀಸ್ ಕಾರ್ಯಾಚರಣೆಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮೂಲತಃ ಗುಜುರಾತಿನ ಅಹ್ಮದಾಬಾದ್ನ ನಿವಾಸಿ ಆಗಿರುವ ಮಹ್ಮದ ಸಿದ್ಧಿಕಿ(43) ಬಂದಿತ ಆರೋಪಿ ಆಗಿದ್ದು, ಮಹರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಕಿನ್ನಿ ಟೋಲ್ ಗೇಟ್ ನಲ್ಲಿ ಆರೋಪಿಯನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಸಾರಿಗೆ ಇಲಾಖೆ ಮತ್ತು ಸೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳ ಪೊಲಿಸ್ ವರಿಷ್ಠಾಧಿಕಾರಿಗಳು ಸಹಕಾರ ನೀಡಿದ್ದನ್ನು ಸ್ಮರಿಸಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ಶಾಂತಾದುರ್ಗಾ ಜ್ಯುವೆಲಿರಿ ಶಾಪ್ ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಅಂಗಡಿ ಮಾಲೀಕರು ಬೆಳಗ್ಗೆ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಮುರ್ತುಜಾ ಖಾದ್ರಿ ಹಾಗೂ ಪಿಎಸ್ಐ ಎಲ್.ಕೆ. ಜೂಲಕಟ್ಟಿ ಅವರು ತನಿಖೆ ಆರಂಭಿಸಿದರು. ಪ್ರಾಥಮಿಕ ತನಿಖೆಯಲ್ಲಿ ಜ್ಯುವೆಲರಿ ಶಾಪ್ ಹಿಂಬದಿ ಇರುವ ಲಾಡ್ಜ್ ಮೂಲಕ ಶಾಪ್ ಗೆ ನುಗ್ಗಿರುವ ಆರೋಪಿಯು ಅತ್ಯಾಧುನಿಕ ಉಪಕರಣ ಬಳಸಿ ಕಬ್ಬಿಣದ ಕಿಟಕಿಗಳನ್ನು ಒಡೆದು ಒಳಗೆ ಬಂದು ಕಳ್ಳತನ ಮಾಡಿರುವುವು ಗೊತ್ತಾಗಿದೆ. ಪ್ರಕರಣ ಗಂಭೀರತೆ ಅರಿತ ಎಸ್ಪಿ ರೋಹನ್ ಜಗದೀಶ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ತಂಡ ರಚನೆಯಾಗಿ ಆರೋಪಿ ಸುಳಿವಿಗಾಗಿ ಹುಡಕಾಟ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ನಗರದ ಶಾಂತಾ ದುರ್ಗಾ ಜ್ಯವೆಲರಿ ಶಾಪ್ ಹಿಂದುಗಡೆ ಖಾಸಗಿ ಲಾಡ್ಜನಲ್ಲಿ ಆರೋಪಿ ಕಳೆದ ಹಲವು ದಿನಗಳಿಂದ ತಂಗಿದ್ದನ್ನು ಎಂಬುದನ್ನು ಸಿಸಿ ಕೆಮಾರಾ ಆಧರಿಸಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಕಳ್ಳತನ ಆಗಿರುವ ಬಗ್ಗೆ ಅಂಗಡಿ ಮಾಲೀಕರು ದೂರು ದಾಖಲಿಸುವ ಮೊದಲೇ ಕಾರ್ಯಪ್ರವೃತ್ತರಾಗಿದ್ದಾರೆ. ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಸಿ.ಸಿ. ಕೆಮೆರಾ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿ ಬೆನ್ನಿಗೆ ಬಿದ್ದಿದ್ದಾರೆ. ಕಳ್ಳತನದ ಚಿನ್ನಾಭಾರಣಗಳೊಂದಿಗೆ ಆರೋಪಿಯು ನಗರದ ಹೊಸ ಬಸ್ ನಿಲ್ದಾಣದಿಂದ ಪುಣೆ ಬಸ್ ಮೂಲಕ ಮಹಾರಾಷ್ಟ್ರ ಕಡೆಗೆ ತೆರಳುತ್ತಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಹೀಗಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯ ವಡಗಾಂ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿ ಟೋಲ್ ಬಳಿ ಬಸ್ನಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ವಡಗಾಂ ಪೊಲೀಸರು ಬಂಧಿಸಿ ಪಂಚನಾಮೆಗೆ ಒಳಪಡಿಸಿದ್ದಾರೆ. ಆರೋಪಿತನಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರೊಳಗಾಗಿ ಗದಗ ಜಿಲ್ಲಾ ಪೊಲೀಸ್ ಸಿಬ್ಬಂದಿಯು ಅಲ್ಲಿಗೆ ತೆರಳಿ ಚಿನ್ನಾಭರಣದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ.
ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ ಕಳ್ಳತನ ಕುರಿತು ಪೊಲೀಸ್ ಇಲಾಖೆಗೆ ಆರೋಪಿ ವಿವರಿಸಿದ್ದಾರೆ. ಲಾಡ್ಜ ಮೂಲಕ ಜ್ಯುವೆಲರಿ ಶಾಪ್ನ ಎರಡನೇ ಮಹಡಿಗೆ ಬಂದಿದ್ದ ಆರೋಪಿಯು ಗ್ಯಾಸ್ ಕಟರ್ ಯಂತ್ರ, ಹೈಡ್ರೋಲಿಕ್ ಕಟರ್ ಯಂತ್ರ, ಕಬ್ಬಿಣ ಸುತ್ತಿಗೆ ಮೂಲಕ ಕಿಟಕಿಯನ್ನು ಕೊರೆದು ಒಳ ನುಗ್ಗಿದ್ದಾನೆ. ಮೊದಲು ಸಿಸಿ ಕೆಮಾರಾ ಡ್ಯಾಮೇಜ್ ಮಾಡಿದ್ದಾನೆ. ಚಿನ್ನಧ ಆಬರಣ ಇರುವ ಟ್ರೆಸರಿ ಒಡೆಯಲು ಯತ್ನಿಸಿದ್ದಾನೆ. ಟ್ರೆಸರಿ ಒಡೆಯುವ ಯತ್ನ ವಿಲವಾದಾಗ ಗ್ರಾಹಕರಿಗಾಗಿ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಟ್ಟ ಆಭರಣಗಳನ್ನು ಕಳ್ಳತನ ಮಾಡಿ ಮತ್ತೆ ಲಾಡ್ಜಗೆ ಮರಳಿದ್ದಾನೆ. ಲಾಡ್ಜ್ ರೆಜಿಸ್ಟ್ರಾರನಲ್ಲಿ ತನ್ನ ಮೂಲ ವಿಳಾಸವನ್ನು ತಾನೆ ತಿದ್ದುವ ಮೂಲಕ ಸಾ ನಾಶ ಮಾಡುವ ಯತ್ನ ನಡೆಸಿದ್ದಾರೆ. ಅದೇ ದಿನ ಪುಣೆ ಬಸ್ ಮೂಲಕ ತೆರಳಿರುವುದು ಗೊತ್ತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಮಹಾಂತೇಶ ಸಜ್ಜನ, ಎಲ್.ಕೆ. ಜೂಲಕಟ್ಟಿ, ಮುರ್ತುಜಾ ಖಾದ್ರಿ, ಧೀರಜ್ ಸಿಂಧೆ, ಸಿದ್ರಾಮೇಶ್ವರ ಗಡದ, ಆರ್.ಆರ್. ಮುಂಡೆವಾಡಗಿ, ಜಿ.ಟಿ. ಜಕ್ಕಲಿ, ಮಾರುತಿ ಜೋಗದಂಡಕರ, ಎಂ. ಬಿ. ವಡ್ಡಟ್ಟಿ, ಸಂತೋಷ ಗುಬ್ಬಿ, ವಿ. ಎಸ್. ಶೆಟ್ಟಣ್ಣವರ, ಯು.ಎ್. ಸುನಗಾರ, ಎಸ್. ಎಚ್. ನಾಗೇಂದ್ರಗಡ, ಕೆ.ವಿ. ತಿಗರಿ, ಎಚ್.ಐ. ಯಡಿಯಾಪೂರ, ಅಣ್ಣಪ್ಪ ಕವಲೂರು, ವೈ.ಬಿ. ಪಾಟೀಲ, ಎಸ್.ಎಸ್. ಮಾವಿನಕಾಯಿ, ಎ.ಎ್. ಹನಜಿ, ಪಿ.ಎಚ್. ಗುಬ್ಬಿ, ವಿಜಯಕುಮಾರ ವಾಲಿ, ನೆಹರು ನಾಯಕ, ಬಸವರಾಜ ಗುಡ್ಲಾನೂರು, ಪ್ರಕಾಶ ಗಾಣಿಗೇರ ಇತರರು ಇದ್ದರು.
10,16,200 ರೂ ಮೌಲ್ಯದ 76.80 ಗ್ರಾ ಬಂಗಾರದ ಆಭರಣಗಳು, 61,09,828 ರೂ, ಮೌಲ್ಯದಬೆಳ್ಳಿಯ ಆಭರಣಗಳು, 8,95,000 ರೂ. ಮೌಲ್ಯದ ಜೆಮ್ ಸ್ಟೋನ್ಗಳು ಹಾಗೂ 26000 ರೂ. ನಗದು ಸೇರಿ ಒಟ್ಟು 80,21,0258 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಸಾವಾಲಿನದಾಗಿತ್ತು. ಚಿನ್ನಾಭರಣಗಳ ಸಂಖ್ಯೆ ಅಧಿಕವಾಗಿದ್ದರಿಂದ ಆದಷ್ಟು ಬೇಗ ಆರೋಪಿ ಜತೆಗೆ ಚಿನ್ನಾಭರಣ ವಶಪಡಿಸಿಕೊಳ್ಳಬೇಕಿತ್ತು. ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಲಾಗುದು.
- ರೋಹನ್ ಜಗದೀಶ, ಎಸ್ಪಿ, ಗದಗ