ಗದಗ ಎಪಿಎಂಸಿ ಆವರಣದಲ್ಲಿ ಈರುಳ್ಳಿ ಬೆಳೆಗಾರರು ಪ್ರತಿಭಟನೆ ನಡೆಸಿದರು.
- Gadag Farmer Protest
- Onion protest
ಈರುಳ್ಳಿ ಖರೀದಿ ಅಂಗಡಿಗಳ ಮುಂದೆ ರೈತರ ಪ್ರತಿಭಟನೆ.
ಕಬ್ಬು, ಮೆಕ್ಕೆಜೋಳ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಈದೀಗ ಈರುಳ್ಳಿ ಬೆಲೆ ಕುಸಿತದಿಂದಲೂ ನಷ್ಟ ಅನುಭವಿಸುತ್ತಿದ್ದಾರೆ. ಪರಿಣಾಮ ಗದಗ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದ ಪ್ರತಿಭಟನೆಗಳು ಜರಗುತ್ತಿವೆ. ಜಿಲ್ಲೆಯ ಈರಳ್ಳಿ ಬೆಳೆಗಾರರು ಈರುಳ್ಳಿ ದರ ಕುಸಿತದಿಂದ ಆಕ್ರೋಶಗೊಂಡು ಗದಗ ಎಪಿಎಂಸಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಳಗ್ಗೆ ಎಂದಿನಂತೆ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಈರಳ್ಳಿ ಮೂಟೆಯನ್ನು ಇಳಿಸಿ ಮಾರಾಟಕ್ಕೆ ಕಾಯುತ್ತ ಕುಳಿತಿದ್ದರು. ಎಂದಿನಂತೆ ಟೆಂಡರ್ ಪ್ರಕ್ರಿಯೆ ಆರಂಬವಾಗದೇ ದಿನಕ್ಕಿಂತಲೂ ತಡವಾಗಿಯೇ ಪ್ರಾರಂಭವಾಯಿತು. ಪ್ರಕ್ರಿಯೆ ಪ್ರಾರಂಭವಾದರೂ ದರದಲ್ಲಿ ತೀರಾ ಕಡಿಮೆ ಘೋಷಣೆ ಆಗುತ್ತಿದ್ದಂತೆ ರೈತರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಮಾರುಕಟ್ಟೆಯಲ್ಲಿ ಎಲ್ಲ ಖರೀದಿದಾದರು ಉದ್ದೇಶ ಪೂರ್ವಕವಾಗಿ ದರದಲ್ಲಿ ಭಾರಿ ಕುಸಿತ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿ, ಅಂಗಡಿಗಳ ಮುಂದೆ ರೈತರು ಪ್ರತಿಭಟನೆಗೆ ಮುಂದಾದರು.
ಈ ವೇಳೆ ಈರುಳ್ಳಿ ಖರೀದಿ ಅಂಗಡಿ ಮಾಲೀಕರು ಮತ್ತು ರೈತರ ನಡುವೆ ತೀವ್ರ ಮಾತಿನ ಚಕಮಕಿ ಜರುಗಿತು. ಒಂದೆರಡು ಅಂಗಡಿಗಳ ಮುಂದೆ ಆರಂಭವಾದ ಪ್ರತಿಭಟನೆ ಕೆಲ ಹೊತ್ತಿನಲ್ಲಿಯೇ ಎಪಿಎಂಸಿ ಎಲ್ಲಾ ಅಂಗಡಿಗಳ ಮುಂದೆ ವಿಸ್ತರಿಸಿತು. ಪ್ರತಿಭಟನೆಯ ಜತೆಗೆ ಎಪಿಎಂಸಿ ಮುಖ್ಯ ರಸ್ತೆಗೆ ಆಗಮಿಸಿ ಪ್ರತಿಭಟನೆ ನಡೆಸಿ, ಕೂಡಲೇ ಮರು ಟೆಂಡರ್ ನಡೆಸುವಂತೆ ಒತ್ತಾಯಿಸಿದರು.
ಪ್ರತಿ ಕ್ವಿಂಟಾಲ್ ಈರುಳ್ಳಿ 100 ರೂ. ನಿಂದ 300 ರೂ ವರೆಗೆ ಮಾರಾಟವಾಗುತ್ತಿದೆ. ಕಡಿಮೆ ದರಕ್ಕೆ ಮಾರಾಟ ಮಾಡಿದರೆ ವಾಹನದ ಬಾಡಿಗೆ ಕೊಡುವಷ್ಟು ಬೆಲೆ ಸಿಗುವುದಿಲ್ಲ. ರಾಜ್ಯದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಉತ್ತಮವಾದ ದರವಿದೆ. ಆದರೆ ಗದಗ ಮಾರುಕಟ್ಟೆಯಲ್ಲಿ ಮಾತ್ರ ಹೀಗೆ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿ ನಮಗೆ ನ್ಯಾಯಯುತ ದರ ನೀಡಬೇಕು ಎಂದು ರೈತರು ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಎಪಿಎಂಸಿ ಅಧಿಕಾರಿಗಳು ರೈತರ ಮನಮೊಲಿಸಲು ಹರಸಾಹಸ ಪಟ್ಟರು. ಆದರೆ ಪಟ್ಟು ಬಿಡದ ರೈತರು ಗದಗ ಮಾರುಕಟ್ಟೆಯಲ್ಲಿ ಮರು ಟೆಂಡರ್ ಮಾಡಬೇಕು. ಉತ್ತಮ ಬೆಲೆ ಕೊಡಬೇಕು ಎಂದು ಆಗ್ರಹಿಸಿದರು.ಕೆಲಕಾಲ ಈರುಳ್ಳಿ ಖರೀದಿ ಪ್ರಕ್ರಿಯೆ ಸಂರ್ಪೂಣ ಸ್ಥಗಿತಗೊಂಡಿತು