ಬ್ಯೂಟಿಷಿಯನ್ ಗೆ ಕ್ಷೌರಿಕ ಕಾರ್ಡ ವಿತರಣೆ ಬಗ್ಗೆ ಸವಿತಾ ಸಮಾಜ ಆಕ್ಷೇಪಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕೃಷ್ಣ ಹಡಪದ, ವಿಕಾಸ ಕ್ಷೀರಸಾಗರ್, ಹನುಮಂತಪ್ಪ ರಾಂಪುರ ಇತರರು ಇದ್ದರು 
ರಾಜ್ಯ

ಬ್ಯೂಟಿಷಿಯನ್ ಗೆ ಕ್ಷೌರಿಕ(ಕಾರ್ಮಿಕ) ಕಾರ್ಡ: ಸವಿತಾ ಸಮಾಜ ಆಕ್ಷೇಪ! ಮನವಿ

ವಿಜಯವಾಣಿ ಸುದ್ದಿಜಾಲ ಗದಗ
ನಗರದಲ್ಲಿ ಇರುವ ಬ್ಯೂಟಿ ಪಾರ್ಲರಗಳ ಬ್ಯೂಟಿಷಿಯನ್ ಗಳಿಗೆ ಕ್ಷೌರಿಕ ಕಾರ್ಡ ವಿತರಿಸಲಾಗುತ್ತಿದೆ. ಇದರಿಂದ ಸವಿತಾ ಸಮಾಜಕ್ಕೆ ಅನ್ಯಾಯ ಆಗುತ್ತಿದ್ದು, ಕೂಡಲೇ ಈ ಕ್ರಮ ಸ್ಥಗಿತಗೊಳಿಸಬೇಕು ಎಂದು ಸವಿತಾ ಸಮಾಜ ಜಿಲ್ಲಾಧ್ಯಕ್ಷ ಕೃಷ್ಣ ಹಡಪದ ಹೇಳಿದರು.
ಕ್ಷೌರಿಕ ಕಾರ್ಡ ವಿತರಿಸುತ್ತಿರುವ ಕುರಿತು ಅಪರ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ನೀಡಿ ಮಾತನಾಡಿದ ಅವರು, ಸಾಂಪ್ರದಾಯಿಕ 'ಕ್ಷೌರಿಕ' ವೃತ್ತಿಯ ಅಸ್ಮಿತೆಯನ್ನು ಕಾಪಾಡುವಂತೆ ಆಗ್ರಹಿಸಿದರು.
ಅಸಂಘಟಿತ ಕಾರ್ಮಿಕ ಮಂಡಳಿಯು ಸವಿತಾ ಸಮಾಜದವರ ಕುಲಕಸುಬಾದ 'ಕ್ಷೌರಿಕ' (ಬಾರ್ಬರ್) ವೃತ್ತಿಯ ಹೆಸರನ್ನು ಅನ್ಯ ಸಮಾಜದವರು ನಡೆಸುವ ಬ್ಯೂಟಿ ಪಾರ್ಲರ್‌ಗಳಿಗೂ ನೀಡುತ್ತಿರುವುದು ಖಂಡನೀಯ. ಇದರಿಂದ ನಮ್ಮ ಸಮಾಜದ ನೈಜ ಫಲಾನುಭವಿಗಳಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು, ವಿಮೆ ಮತ್ತು ಆರ್ಥಿಕ ಪ್ಯಾಕೇಜ್‌ಗಳು ಅನ್ಯರ ಪಾಲಾಗುತ್ತಿವೆ. ಇದು ಸವಿತಾ ಸಮಾಜಕ್ಕೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್ ಅವರು, ಬ್ಯೂಟಿ ಪಾರ್ಲರ್ ಮಾಡುವವರಿಗೆ 'ಬ್ಯೂಟಿಷಿಯನ್' ಎಂದೇ ಕಾರ್ಡ್ ನೀಡಬೇಕು ಮತ್ತು ಸವಿತಾ ಸಮಾಜದವರಿಗೆ ಮಾತ್ರ 'ಕ್ಷೌರಿಕ' (ಬಾರ್ಬರ್) ಎಂದು ನಮೂದಿಸಬೇಕು ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ನಿಯಮ ಉಲ್ಲಂಘಿಸಿ ಇತರರಿಗೆ 'ಬಾರ್ಬರ್' ಕಾರ್ಡ್ ನೀಡು ಅಕ್ರಮ ಬಗ್ಗೆ ಎಚ್ವರಿಕೆ ನೋಟೀಸ್ ನೀಡಲಾಗುವುದು ಎಂದರು.
ಈ ವೇಳೆ ವಿಕಾಸ ಕ್ಷೀರಸಾಗರ್, ಹನುಮಂತಪ್ಪ ರಾಂಪುರ ಇತರರು ಇದ್ದರು