ಗದಗ ಸರ್ಕಾರಿ ಶಾಲೆಯಲ್ಲಿ ಕದಳಿಶ್ರೀವೇದಿಕೆಯಿಂದ ಅಮೃತ ಭೋಜನ ಕಾರ್ಯಕ್ರಮ ಜರುಗಿತು. ಹಸಿನಾ ಮಕಾನದಾರ, ಜೈಕುಮಾರ, ಎನ್. ಎಚ್. ಜಕ್ಕಲಿ, ಎಸ್.ಎಸ್. ಬಳ್ಳಾರಿ, ಸನಾ ಮುಳ್ಳನವರ ಇತರರು ಇದ್ದರು.
ಎಲ್ಲರಿಗೂ ಸಮಾನ ಪ್ರತಿಭೆ ಇಲ್ಲದೆ ಇರಬಹುದು. ಆದರೆ ಪ್ರತಿಭೆಯನ್ನು ಬೆಳೆಸಿಕೊಳ್ಳುವ ಅವಕಾಶ ಎಲ್ಲರಿಗೂ ಸಮಾನವಾಗಿದೆ. ಮಕ್ಕಳು ಪ್ರತಿಭೆಯನ್ನು ಹೊಂದಿ ವಿದ್ಯೆಯೊಂದಿಗೆ ನಮ್ರ, ವಿನಯತೆ ಹಾಗೂ ಹಿರಿಯರಲ್ಲಿ ಗೌರವವನ್ನು ಇಡಬೇಕು ಎಂದು ಚಿಂತಕಿ ನಿರ್ಮಲಾ ಪಾಟೀಲ ಹೇಳಿದರು.
ನಗರದ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರಿ ವೇದಿಕೆಯಿಂದ ಸರ್ಕಾರಿ ಶಾಲೆಗಳಲ್ಲಿ ಶ್ರಾವಣಮಾಸದಲ್ಲಿ ಏರ್ಪಡಿಸುವ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳು ಉತ್ತಮ ಸಂಸ್ಕಾರ ಹೊಂದಬೇಕು. ನಡೆ ನುಡಿಯಲ್ಲಿ ಗೌರವ ಇರಬೇಕು. ಟಿವಿ, ಮೊಬೈಲ್ದಿಂದ ದೂರವಿರಬೇಕು. ಸದಾ ಹಸನ್ಮುಖಿಯಾಗಿ ಇರಬೇಕು. ಓದಿನಲ್ಲಿ ತೊಡಗಬೇಕು. ಹಿತವಾದ ಆಹಾರ ಸೇವನೆ, ಮಿತವಾದ ಮಾತು, ಸರಿಯಾದ ಸಮಯದಲ್ಲಿ ನಿದ್ದೆ ಮಾಡುಬೇಕು. ಇದರಿಂದ ಆರೋಗ್ಯವು ಸದೃಢವಾಗಿರುತ್ತದೆ ಎಂದರು.
ಮಕ್ಕಳಿಗೆ ಸಿಹಿ ಭೋಜನ ಉಣಬಡಿಸಿ ಮಾತನಾಡಿದ ಚಿಂತಕ ಮಂಜುನಾಥ ಬೇಲೇರಿ, ಹಿರಿಯರು ದೇವರಿಗೆ ಸಮಾನ. ತಂದೆ ತಾಯಿಗಳು ನಿಜವಾದ ದೇವರು. ಅನುಭವದಿಂದ ಆಡುವ ಹಿರಿಯರ ಮಾತುಗಳು ಸದಾ ನಮಗೆ ದಾರಿತೋರುತ್ತವೆ. ನಾವೆಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಬಾಳನ್ನು ಹಸನಾಗಿಸಬೇಕು ಎಂದರು.
ಡೈಯಟ್ ಉಪನ್ಯಾಸಕಿ ಸುಧಾ ಬನಿಕಲ್ ಮಾತನಾಡಿ ಮಕ್ಕಳು ಮೌಲ್ಯಾಧಾರಿತ ಬದುಕನ್ನು ನಡೆಸಬೇಕು. ಚಿಕ್ಕವರಿದ್ದಾಗಲೇ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಉತ್ತಮ ವಿದ್ಯಾಥಿರ್ಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದರು.
ಸಂಚಾಲಕಿ ಕವಿತಾ ದಂಡಿನ ಮಾತನಾಡಿ ಶ್ರಾವಣ ಮಾಸದಲ್ಲಿ ಸರ್ಕಾರಿ ಶಾಲೆಗಳಿಗೆ ಸಮುದಾಯವನ್ನು ಕರೆತಂದು ಅವರಿಂದ ಮಕ್ಕಳಿಗೆ ಹಿತವಚನ ಹಾಗೂ ಊಟವನ್ನು ಉಣಬಡಿಸುವ ಮೂಲಕ ವೇದಿಕೆಯು ಕಳೆದ 20 ವರ್ಷಗಳಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ಮಾಡುತ್ತ ಸಾಗಿ ಬಂದಿದೆ. ಸಮಾನ ಮನಸ್ಕರ ತಂಡವು ನಮ್ಮೊಂದಿಗೆ ಕೈಜೋಡಿಸಿದೆ ಎಂದರು.
ಖಐರುನ್ನಿಸಾ ದಾವಲಖಾನವರ, ಶಾಲಾ ಎಸ್ಡಿಎಂಸಿ ಅಧ್ಯ ಮಾಬೂಬಸುಬಾನಿ ಸವಡಿ, ಐ. ಎ. ಗಾಡಗೋಳಿ ಇತರರು ಇದ್ದರು.