Gadag JT Math Blood camp 
ರಾಜ್ಯ

ಆಧುನಿಕ ದಿನಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯ : ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು

ಶಿವಾನಂದ ಹಿರೇಮಠ
ಗದಗ : ಆಧುನಿಕ ದಿನಮಾನದಲ್ಲಿ ದೈಹಿಕ ಶ್ರಮ ಕ್ಷೀಣಿಸಿ ಮಾನಸಿಕ ಶ್ರಮ ಹೆಚ್ಚಾಗುತ್ತಿದ್ದು, ದೈನಂದಿನ ವೃತ್ತಿಪರ ಜಂಜಾಟಗಳ ಮಧ್ಯೆ ಆರೋಗ್ಯದ ಕಾಳಜಿ ವಹಿಸದೇ ಇರುವುದು ಅಪಾಯಕಾರಿಯಾಗಿದೆ. ನಿಯಮಿತ ಆರೋಗ್ಯ ತಪಾಸಣೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿ ವರ್ಷದ ತೋಂಟದಾರ್ಯ ಜಾತ್ರೆಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ದಿ.೨೯ ರಂದು ರವಿವಾರ ಇಲ್ಲಿನ ಜಗದ್ಗುರು ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ೨೦೨೬ನೇ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ
ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್, ಡಿಜಿಎಂ ಆಯುರ್ವೇದ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ
ಜರುಗಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಾನಿಧ್ಯವಹಿಸಿ ಮಾತನಾಡಿ,
ಆರೋಗ್ಯವೇ ಮಾನವನ ನಿಜವಾದ ಸಂಪತ್ತಾಗಿದ್ದು, ನೆಮ್ಮದಿಯುತ ಜೀವನಕ್ಕೆ ಆರೋಗ್ಯವೇ ಅಡಿಗಲ್ಲಾಗಿದೆ. ರೋಗಿಗಳಿಗೆ ವೈದ್ಯರೇ ದೇವರಾದರೆ ತಮಗೆ ರೋಗಿಗಳೇ ದೇವರೆಂದು ತಿಳಿದು ಸೇವೆಯನ್ನು ಧ್ಯೇಯವನ್ನಾಗಿ ಇಟ್ಟುಕೊಂಡಿರುವ ವೈದ್ಯರು ಸಹ ನಿಜಕ್ಕೂ ಅಭಿನಂದನಾರ್ಹರು ಎಂದರು.
ಜಾತ್ರಾ ಸಮಿತಿ ಅಧ್ಯಕ್ಷರಾದ ವಿನಾಯಕ ಮಾನ್ವಿ ಮಾತನಾಡಿ, ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ವಿಶಿಷ್ಠ ಹಾಗೂ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವ್ಯಸನ ಮುಕ್ತ ಸಮಾಜಕ್ಕೆ ಪಾದಯಾತ್ರೆ, ಆರೋಗ್ಯ ತಪಾಸಣೆ ಅವುಗಳಲ್ಲಿ ಪ್ರಮುಖವಾಗಿವೆ. ನಿಯಮಿತ ಆರೋಗ್ಯ ತಪಾಸಣೆ ಇಂದಿನ ದಿನಮಾನದ ಅಗತ್ಯವಾಗಿದ್ದು, ಅನೇಕ ವೈದ್ಯರು ಶ್ರೀಮಠದ ಮೇಲಿನ ಅಭಿಮಾನ ಹಾಗೂ ಗೌರವಕ್ಕಾಗಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಖ್ಯಾತ ಮನೋವೈದ್ಯರಾದ ಡಾ.ಆನಂದ್ ಪಾಂಡುರಂಗಿ ತಮ್ಮ ಹಾಗೂ ತೋಂಟದಾರ್ಯ ಮಠದ ನಡುವಿನ ನಿರಂತರ ೪೦ ವರ್ಷಗಳ ಅವಿನಾಭಾವ ಸಂಬಂಧದ ಕುರಿತು ಮಾತನಾಡಿದರು, ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಪ್ರೋತ್ಸಾಹವನ್ನು ಸ್ಮರಿಸಿದ ಅವರು ತಮ್ಮ ಪುತ್ರ ಡಾ.ಆದಿತ್ಯ ಪಾಂಡುರಂಗಿ ಹಾಗೂ ಇತರೆ ವೈದ್ಯರ ತಂಡದೊಡನೆ ಮನೋರೋಗಿಗಳಿಗೆ ಸೂಕ್ತ ಸಲಹೆ-ಸೂಚನೆ ಹಾಗೂ ಚಿಕಿತ್ಸೆ ನೀಡಿದರು.
ಹೃದಯ ಸ್ತಂಭನವಾದಾಗ ಸಾಮಾನ್ಯ ನಾಗರಿಕರು ಯಾವ ಪ್ರಾಥಮಿಕ ಕ್ರಮ ಕೈಕೊಳ್ಳಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು ಹಾಗೂ ಕಿಡ್ನಿ, ಲಿವರ್, ಕಣ್ಣು ಸೇರಿದಂತೆ ಅಂಗಾಂಗಗಳ ದಾನದ ಮಹತ್ವವನ್ನು ಕುರಿತು ಜಾಗೃತಿ ಮೂಡಿಸಲಾಯಿತು.
ವೇದಿಕೆ ಮೇಲೆ ವೈದ್ಯರಾದ ಧನೇಶ ದೇಸಾಯಿ, ಜಯಕುಮಾರ ಬ್ಯಾಳಿ, ಪ್ಯಾರಾಅಲಿ ನೂರಾನಿ, ಶ್ರೀಧರ ಕುರಡಗಿ, ಎಸ್.ಬಿ ಶೆಟ್ಟರ, ಮಂಜುನಾಥ ಹಿರೇಮಠ, ಸಂದೀಪ ಕವಳಿಕಾಯಿ, ಲಯನ್ಸ್‌ ಕ್ಲಬ್‌ನ ರಾಜೀವ್‌ ವೇರ್ಣೇಕರ ಮುಂತಾದವರು ಪಾಲ್ಗೊಂಡಿದ್ದರು.
ಹೃದಯರೋಗ ತಪಾಸಣೆ, ಸ್ತ್ರೀರೋಗ, ಎಲುವು-ಕೀಲು, ಕಿವಿ, ಮೂಗು, ಗಂಟಲು, ಚರ್ಮರೋಗ, ಮಧುಮೇಹ, ಬಿ.ಪಿ, ಮೂಳೆಗಳ ಸಾಂದ್ರತೆ, ಮೂತ್ರಪಿಂಡ ರೋಗ, ನರದೌರ್ಬಲ್ಯ ಹೀಗೆ ಅನೇಕ ರೋಗಗಳಿಗೆ ೫೦ಕ್ಕೂ ಅಧಿಕ ಆಯುರ್ವೇದ ಹಾಗೂ ಆಲೋಪಥಿಕ್ ವೈದ್ಯರಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಜರುಗಿತು.
ಜಾತ್ರಾ ಸಮಿತಿಯ ಉಪಾಧ್ಯಕ್ಷ ಶಿವಯ್ಯ ನಾಲ್ವತ್‌ವಾಡಮಠ, ಸುಭಾಷ ಚನ್ನಪ್ಪನವರ, ಶ್ರೀಮತಿ ಸುಧಾ ಹುಚ್ಚಣ್ಣವರ, ಕೋಶಾಧ್ಯಕ್ಷ ವಿರುಪಾಕ್ಷಪ್ಪ ದಲಾಲಿ, ಸಹ ಕೋಶಾಧ್ಯಕ್ಷ ವೀರಣ್ಣ ಗಡಗಿ, ಕಾರ್ಯದರ್ಶಿ ಚೇತನ ಅಂಗಡಿ, ಸಹ ಕಾರ್ಯದರ್ಶಿ ಎಮ್. ಜಿ. ಹೂಗಾರ, ಚಂದ್ರಶೇಖರ ರಾಜೂರ, ಎಸ್.ವ್ಹಿ. ಪವಾಡಿಗೌಡ್ರ, ಸಂಘಟನಾ ಕಾರ್ಯದರ್ಶಿ ಉಮೇಶಗೌಡ ಪಾಟೀಲ, ಯಲ್ಲೂಸಾ ಹಬೀಬ ಸೇರಿದಂತೆ ಶ್ರೀಮಠದ ಹಿರಿಯ ಭಕ್ತರು ಪಾಲ್ಗೊಂಡಿದ್ದರು. ಸುಮಾರು ೫೦೦ ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ಶಿಬಿರದ ಉಪಯೋಗ ಪಡೆದರು.