ಗದಗ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು, ಎಸ್.ವಿ. ಸಂಕನೂರು, ವಿನಾಯಕ ಮಾನ್ವಿ, ಐ.ಜಿ. ಸನದಿ, ಎಸ್.ಎಸ್. ಪಾಟೀಲ ಇತರರು ಇದ್ದರು.
ಗದಗ: ಬಸವಣ್ಣನವರು ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ ಹೊಸ ಧರ್ಮ ಸ್ಥಾಪಿಸಿದರು. ಲಿಂಗಾಯತ ಧರ್ಮ ಕಾಯಕ ಶ್ರೇಷ್ಠ ಧರ್ಮ. ಸಮಾಜದಲ್ಲಿ ಸಮಾನತೆ, ಮಹಿಳೆಯರಿಗೆ ಸ್ವಾತಂತ್ರ್ಯ, ಜಾತಿ ರಹಿತ ಸಮಾಜ ನಿರ್ಮಿಸಲು ಬಸವಣ್ಣನವರು ಶ್ರಮೀಸಿದರು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ನಗರದ ತೋಂಟದಾರ್ಯ ಮಠದ 2026ನೇ ಸಾಲಿನ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಅನುಭವ ಮಂಟಪ ಮೂಲಕ ವಿಶ್ವಕ್ಕೆ ಮೊದಲ ಸಂಸತ್ ನೀಡಿ ಪ್ರಜಾಪ್ರಭುತ್ವಕ್ಕೆ ಬಸವ ಧರ್ಮ ಬುನಾದಿ ಹಾಕಿತು. ಇಂದಿನ ಯುಗದಲ್ಲಿ ಸಿದ್ಧಲಿಂಗ ಶ್ರೀಗಳು ಶರಣರ ಚಿಂತನೆ ಮತ್ತು ಸಾಹಿತ್ಯದ ಮೂಲಕ ಬಸವಧರ್ಮ ಪಸರಿಸಿದರು. ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸಿದ್ಧಲಿಂಗ ಶ್ರೀಗಳು ಆಗ್ರಹಿಸಿದರು. ಮುಂದುವರಿದು ಇಂದಿನ ಸಿದ್ಧರಾಮ ಶ್ರೀಗಳು ಕೃಷಿ, ಸಾಹಿತ್ಯ ಭೋದನೆ, ಕನ್ನಡಪರ ಹೋರಾಟಕ್ಕೆ ಮುನ್ನಡಿ ಬರೆಯುತ್ತಿದ್ದಾರೆ. ತೋಂಟದಾರ್ಯ ಮಠವು 12 ನೇ ಶತಮಾನದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರು ಎಸ್.ವಿ.ಸಂಕನೂರು ಮಾತನಾಡಿ, ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ತನ್ನದೇ ಇತಿಹಾಸ, ಸ್ಥಾನಮಾನ, ಗೌರವ ಇದೆ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲ. ಎಲ್ಲ ಸಾಹಿತ್ಯಕಿ, ಸಾಂಸ್ಕೃತಿಕ, ಜನಪರ ಕಾರ್ಯಕ್ರಮದ ಪ್ರತೀಕ ಎಂದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ತೋಂಟದಾರ್ಯ ಮಠ ನಾಡಿಗೆ ಆದರ್ಶ ಮಠವಾಗಿದೆ. ಇಲ್ಲಿ ಅಕ್ಷರ ಸಂಸ್ಕೃತಿ ಬೆಳೆದಿದೆ. ಸಿದ್ದಗಂಗಾ ಮಠ ಮತ್ತು ಗದಗಿನ ತೋಂಟದಾರ್ಯ ಮಠ ಬೇರೆ ಅಲ್ಲ. ಸಿದ್ಧಗಂಗ ಮಠದಲ್ಲಿ ಯಡಿಯೂರು ಸಿದ್ದಲಿಂಗೇಶ್ವರರ ಜಾತ್ರೆ ನಿರಂತರ ನಡೆದುಕೊಂಡು ಬಂದಿದೆ. ಇಂದು ಎಂ.ಬಿ. ಪಾಟೀಲ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ಸಂತೋಷದ ವಿಷಯ. ಎಂ.ಬಿ. ಪಾಟೀಲ ಅವರು ಸಿರಸಂಗಿ ಲಿಂಗರಾಜರ ವಂಶಜರು. ಎಂ.ಬಿ. ಪಾಟೀಲರು ಕೈಗಾರಿಕಾ ಸಚಿವರಾಗಿ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಹಲವು ಕ್ರಮ ಕೈಗೊಂಡಿದ್ದಾರೆ. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚುತ್ತಿವೆ. ಇಂದು ಎಂ.ಬಿ. ಪಾಟೀಲ ಅವರಿಂದ ಇಂದು ಗ್ರಂಥ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಿತ ನಾಲ್ಕು ಗ್ರಂಥಗಳನ್ನು ಎಂ.ಬಿ. ಪಾಟೀಲ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಶಿವಮೊಗ್ಗ ಮುರಘಾಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಶ್ರೀಗಳು, ಹಾವೇರಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಹಂದಿಗುಂದ ಸಿದ್ದೇಶ್ವರಮಠದ ಶಿವಾನಂದ ಶ್ರೀಗಳು, ಬೈರನಹಟ್ಟಿ ತೋಂಟದಾರ್ಯ ಶಾಖಾಮಠದ ಶಾಂತಲಿಂಗ ಶ್ರೀಗಳು, ಚೆನ್ನಮಲ್ಲಿಕಾರ್ಜುನ ಶ್ರೀಗಳು, ಸಿರಸಂಗಿ ಮಹಾಲಿಂಗೇಶ್ವರ ಮಠದ ಬಸವ ಮಹಾಂತ ಶ್ರೀಗಳು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಇತರರು ಇದ್ದರು.