ಹುಲಕೋಟಿ: ಸ್ಥಳೀಯ ರೂರಲ್ ಇಂಜಿನೀಯರಿಂಗ ಕಾಲೇಜಿನಲ್ಲಿ ಮಾನವಿಕ ಮತ್ತು ವಿಜ್ಞಾನ ವಿಭಾಗದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯರಾದ ಡಾ. ವಿ. ಎಂ. ಪಾಟೀಲ ಮಾತನಾಡಿ ಸರ್ ಸಿ.ವಿ. ರಾಮನ್ ಅವರ ಸಾಧನೆಯ ನೆನಪಿಗಾಗಿ ಆಚರಿಸಲಾಗುವ ಈ ದಿನವು ಕೇವಲ ಆಚರಣೆಯಾಗದೆ, ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ವೇದಿಕೆಯಾಗಬೇಕು. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನವಿಲ್ಲದೆ ಜೀವನ ಅಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪರಿಸರ ಪ್ರೇಮಿ ಎಸ್. ಹೆಚ್. ವಾಸನ ಮಾತನಾಡಿ ನಾವು ಪ್ರಕೃತಿಯನ್ನು ಉಳಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ಉಳಿಸುತ್ತದೆ. ಹೆಚ್ಚುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ಭೂಮಿಯ ಜೀವವೈವಿಧ್ಯಕ್ಕೆ ದೊಡ್ಡ ಕಂಟಕವಾಗಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಡುವುದು, ಮಣ್ಣಿನ ಫಲವತ್ತತೆ ಕಾಪಾಡುವುದು ಮತ್ತು ಜಲಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ್ದ ಡಾ. ನೇತ್ರಾವತಿ ಗಾಯಕವಾಡ ಮಾತನಾಡಿ ಭಾರತೀಯ ವಿಜ್ಞಾನಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಸ್ತಾಪಿಸಿ, ನಮ್ಮ ದೇಶದ ಪ್ರತಿಭಾವಂತ ವಿಜ್ಞಾನಿಗಳು ಸೂಕ್ತ ಸೌಲಭ್ಯಗಳ ಕೊರತೆಯಿಂದ ವಿದೇಶಗಳಿಗೆ ತೆರಳಿ ಅಲ್ಲಿ ನೊಬೆಲ್ ಪ್ರಶಸ್ತಿ ಪಡೆಯುತ್ತಿರುವುದು ನಮಗೆ ಚಿಂತನೆಯ ವಿಷಯವಾಗಿದೆ. ನಮ್ಮಲ್ಲೇ ಸಂಶೋಧನಾ ವಾತಾವರಣ ಸುಧಾರಿಸಬೇಕು ಎಂದರು.
ಮತ್ತೋರ್ವ ಅತಿಥಿಯಾದ ಡಾ. ಸುಗಂಧ ಮಾತನಾಡಿ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರದ ಕುರಿತು ಬೆಳಕು ಚೆಲ್ಲುತ್ತಾ, ಅಂತರಿಕ್ಷದಿಂದ ಹಿಡಿದು ಅಣು ವಿಜ್ಞಾನದವರೆಗೆ ಮಹಿಳಾ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ ಹಾಗೂ ಯುವತಿಯರು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ಫೂರ್ತಿ ತುಂಬಿದರು. ಪ್ರೊ. ಐಶ್ವರ್ಯ ಗೌಡರ ನಿರೂಪಿಸಿದರು.
ಮಾನವಿಕ ಮತ್ತು ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಶಿಲ್ಪಾ ಮೇಟಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಪವಿತ್ರಾ ಮತ್ತು ಕೀರ್ತಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪ್ರೊ. ಸುರೇಶ ಸದಮಲ, ಪ್ರೊ. ರೇಖಾ ಹೆಬಸೂರ, ಪ್ರೊ. ರೇಣುಕಾ ಅಬ್ಬಿಗೇರಿ, ಡಾ. ಮಹಮ್ಮದಸಾದಿಕ ಸೈಯದ, ಡಾ. ಅನಿತಾ ವೆಸ್ಲೀ, ಕಾಲೇಜಿನ ಬೋಧಕ- ಬೋಧಕೇತರ ವರ್ಗ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.