ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಫೇಸ್ಬುಕ್ ಮೂಲಕ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ.
ರೋಣ ತಾಲೂಕಿನ ಸೂಡಿ ಗ್ರಾಮದ ವೀರಣ್ಣ ಬೀಳಗಿ ಎಂಬುವನು ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದನು. ಸಚಿವರನ್ನು ಅವಹೇಳನಕಾರಿ ಪದಗಳಿಂದ ಕರೆಯುವ ಜೊತೆಗೆ ಸಚಿವರನ್ನು ನಿಲ್ಲಿಸಿ ಎಕೆ-47 ನಿಂದ ಗುಂಡಿನ ಮಳೆಗರೆಯಬೇಕು ಎಂದು ಪೋಸ್ಟ್ ಹಾಕಿದ್ದನು.
ಈ ಕುರಿತು ಗದಗ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಬಿ.ಬಿ. ಅಸೂಟಿ ಅವರು ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪೋಸ್ಟ್ಗಳಿಗೆ ಕಾನೂನು ಕ್ರಮ ಅನಿವಾರ್ಯ ಎಂದು ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಗದಗ ಜಿಲ್ಲಾಡಳಿತ ಭವನಕ್ಕೂ ಬಾಂಬ್ ಬೆದರಿಕೆಯ ಕರೆಗಳು, ಇ-ಮೇಲ್ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಕಾನೂನು ಸಚಿವ ಸಚಿವ ಎಚ್.ಕೆ. ಪಾಟೀಲ ಅವರಿಗೆ ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಕಿದ್ದು ಅನುಮಾನಕ್ಕೆ ಕಾರಣವಾಗಿದೆ.
ಧ್ವೇಷ ಭಾಷಣ ಮಾಡುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಕಿದ್ದವನನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.