ಜಿಲ್ಲೆಯಲ್ಲಿ ದಿನೇ ದಿನೆ ತಾಪಮಾಣ ಹೆಚ್ಚಾಗುತ್ತಿದೆ. ಬಿಸಿ ಗಾಳಿ ಮನುಷ್ಯರನ್ನು ಹೈರಾಣಾಗಿಸುತ್ತಿದೆ. ಮನೆಯ ಹೊರಗಡೆ ಕೆಲಸಕ್ಕೆ ಹೋಗುವರಿಗೆ ಬಿಸಿಲ ತಾಪಮಾನ ಇನ್ನೂ ಹೆಚ್ಚಾಗಿಯೇ ಆವರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ತಲೆ ಸುತ್ತಿ ಬೀಳುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಇಂತಹ ಪ್ರಕಣಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ ತೆರೆದಿರುವುದೇ ವಿಶೇಷ.
ಬಿಸಿಲಾಘಾತಕ್ಕೆ (ಹೀಟ್ ಸ್ಟ್ರೊಕ್) ಒಳಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವ ಸಂಖ್ಯೆ ಹೆಚ್ಚುತಿದ್ದೆ. ಹೀಗಾಗಿ ಸಾಮಾನ್ಯರಂತೆ ಚಿಕಿತ್ಸೆಗೆ ಒಳಪಡಿಸುವ ಬದಲಾಗಿ, ಬಿಸಿಲಾಘಾತಕ್ಕೆಂದೆ ಪ್ರತ್ಯೇಕ ವಿಶೇಷ ವಾರ್ಡ ಸೌಲಭ್ಯ ಕಲ್ಪಿಸುವುದು ಸೂಕ್ತ ಎಂಬುದು ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದರು. ಹೀಗಾಗಿ ಅವರ ಸೂಚನೆಯಂತೆ ಆಸ್ಪತ್ರೆ ನಿರ್ದೇಶಕರು ಈ ತೀರ್ಮಾನಕ್ಕೆ ಬಂದಿದ್ದಾರೆ. ಬಿಸಿಲಾಘಾತಕ್ಕೆ ಒಳಪಟ್ಟವರಿಗೆ ತುರ್ತು ಚಿಕಿತ್ಸೆ ನೀಡಲು ಗದಗ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯಲ್ಲಿ 10 ಹಾಸಿಗೆಗಳ ವಿಶೇಷ ವಾರ್ಡ ತೆರೆಯಲಾಗಿದೆ.
ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಲ್ಲಿ ವೆಂಟಿಲೇಟರ್ ಸೇರಿದಂತೆ ಹಲವು ಸೌಲಭ್ಯಗಳಿದ್ದು, ಚಿಕಿತ್ಸೆ ನೀಡಲು ತಜ್ಞ ವೈದ್ಯರು ಮತ್ತು ಸಹಾಯಕ್ಕೆ ನರ್ಸಗಳನ್ನು ನಿಯೋಜಿಸಲಾಗಿದೆ. ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ಹೊಸ ಕಟ್ಟಡದ ಎರಡನೇ ಮಹಡಿಯಲ್ಲಿ ಹೀಟ್ ಸ್ಟ್ರೊಕ್ ವಾರ್ಡ ತೆರೆಯಲಾಗಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ವಿನೂತನ ಚಿಕಿತ್ಸಾ ಸೌಲಭ್ಯಕ್ಕೆ ಜಿಲ್ಲಾಸ್ಪತ್ರೆ ಮುನ್ನುಡಿ ಬರೆದಿದೆ. ಇಲ್ಲಿ ಚಿಕಿತ್ಸೆಗೆ ಬೇಕಿರುವ ಔಷಧ, ಉಪಕರಣಗಳು ಮತ್ತು ವೈದ್ಯರ ತಂಡ ಇದ್ದು, 10 ಹಾಸಿಗೆಗಳಲ್ಲಿ ಐದು ಪುರುಷರಿಗೆ, ಉಳಿದ ಐದು ಹಾಸಿಗೆಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮಕ್ಕಳಿಗಾಗಿ ಮೂರು ಪ್ರತ್ಯೇಕ ಹಾಸಿಗೆ ಸೌಲಭ್ಯ ಒದಗಿಸಲಾಗಿದೆ.
ಬಿಸಿಲಾಘಾತದಿಂದ ದೇಹದಲ್ಲಿನ ನೀರಿನ ಅಂಶ ಕಡಿಮೆ ಆಗುತ್ತದೆ. ತೀವ್ರ ತಲೆನೋವು, ತಲೆಸುತ್ತು, ವಾಂತಿ, ಅತಿಸಾರ, ಚರ್ಮ ಸುಡುವ ಅನುಭವ ಆಗುತ್ತವೆ. ಇದರಿಂದಾಗಿ ಅಸ್ವಸ್ಥಗೊಂಡು ಜನರು ಆಸ್ಪತ್ರೆಗೆ ಸೇರುತ್ತಿದ್ದಾರೆ. ನಿರ್ಜಲೀಕರಣದಿಂದ ಬಳಲಿ ಬಂದ ಹೆಚ್ಚಿನ ಜನರಿಗೆ ತುರ್ತು ಚಿಕಿತ್ಸೆ ಅವಶ್ಯವಿದೆ. ಬಿಸಿಲಾಘಾತದ ತೀವ್ರತೆ ಹೆಚ್ಚಾಗಿ ಆಸ್ಪತ್ರೆಗೆ ಬಂದು ಅಡ್ಮಿಟ್ ಆಗುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗ ವಿಶೇಷ ವಾರ್ಡ ಕಲ್ಪಿಸಿ ಸಾರ್ವಜನಿಕಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
ಬೇಸಿಗೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪ್ರಖರ ಬಿಸಿಲು ಇರುತ್ತದೆ. ಈ ಸಮಯದಲ್ಲಿ ಮಕ್ಕಳು, ಗಭಿರ್ಣಿಯರು, ವೃದ್ಧರು ಹೊರಗಡೆ ತಿರುಗಾಡಬಾರದು. ಹೆಚ್ಚು ಸಮಯ ಬಿಸಿಲಿನಲ್ಲಿ ಇರುವುದರಿಂದ ದೇಹ ನಿರ್ಜಲೀಕರಣ ಆಗುವುದು ಮಾತ್ರವಲ್ಲದೇ ಕಿಡ್ನಿ ಸ್ಟೋನ್ ನಂತಹ ಸಮಸ್ಯೆಗಳಿಗೂ ಕಾರಣ ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಬಿಸಿಲಾಘಾತದಿಂದ ರಕ್ಷಣೆ ಪಡೆಯಲು ದ್ರವ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ನೀರು, ಒಆರ್ಎಸ್, ಎಳನೀರು, ಕಬ್ಬಿನ ಹಾಲು, ನಿಂಬೆಹಣ್ಣಿನ ಪಾನಕ, ಕಲ್ಲಂಗಡಿ ರಸವನ್ನು ಆಗಾಗ ಸೇವಿಸುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಕಾಬೋರ್ನೆಟೆಡ್ ಪಾನೀಯಗಳನ್ನು ತಪ್ಪಿಸುವುದು ಉತ್ತಮ ಎಂಬುದು ವೈದ್ಯರ ಸಲಹೆಯಾಗಿದೆ. ಬೇಸಿಗೆ ಅವಧಿಯಲ್ಲಿ ಒಣ ಪದಾರ್ಥಗಳಿಗಿಂತ ಮಜ್ಜಿಗೆ ಅಥವಾ ಮೊಸರನ್ನ ಹಾಗೂ ಮೆತ್ತನೆಯ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಹೆಚ್ಚು ಮಸಾಲೆ ಪದಾರ್ಥಗಳಿರುವ ಆಹಾರ ಕಡಿಮೆ ಮಾಡುವುದು ಒಳಿತು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಬಿಸಿಲಾಘಾತಕ್ಕೆ ಚಿಕಿತ್ಸೆ ನೀಡಲು ವಿಶೇಷ ವಾರ್ಡ ತೆರೆಯಲಾಗಿದೆ. ರೋಗಿಗಳ ಸಂಖ್ಯೆ ಆಧಾರದ ಮೇಲೆ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮವಹಿಸಲಾಗುವುದು. ಬೀಸಿಲಾತಕ್ಕೆ ಒಳಪಡುವರು ಭಯಪಡದೇ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಉತ್ತಮ
ಡಾ. ಬಸವರಾಜ ಬೊಮ್ಮನಹಳ್ಳಿ, ಜಿಮ್ಸ್ ನಿರ್ದೇಶಕ