Gadag HKP 
ರಾಜ್ಯ

ಉತ್ತರ ಕರ್ನಾಟಕ ಭಾಗದ ಚರ್ಚೆ ಅವಕಾಶವೇ ಇಲ್ಲ: ಎಚ್.ಕೆ. ಪಾಟೀಲ

ಶಿವಾನಂದ ಹಿರೇಮಠ
ಗದಗ:
ವಿಧಾನಮಂಡಲದ ಉಭಯ ಸದನಗಳ ಕಲಾಪಗಳಲ್ಲಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಶೇ. ೫ರಷ್ಟೂ ಸಮಯ ಮೀಸಲಿಡುತ್ತಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಸಭಾಪತಿ, ಸಭಾಧ್ಯಕ್ಷ, ಉಪ ಸಭಾಪತಿ, ಉಪ ಸಭಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ಇಂದು ಉತ್ತರ ಕರ್ನಾಟಕ ಭಾಗದ ವಿಶ್ವವಿದ್ಯಾಲಯಗಳ ಸ್ಥಿತಿ ಶೋಚನೀಯವಾಗಿದ್ದು, ಶೇ. ೮೦ರಷ್ಟು ಹುದ್ದೆಗಳು ಖಾಲಿ ಇವೆ. ಮೂಲಸೌಕರ್ಯ, ಕಟ್ಟಡಗಳು ಬಳಕೆಯಾಗದೆ ಪಾಳುಬಿದ್ದಿವೆ. ಇಂತಹ ಗಂಭೀರ ಅನ್ಯಾಯಗಳ ಬಗ್ಗೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆಯ ಆಗಬೇಕು ಎಂದರು.
ಬೆಳಗಾವಿ ಅಧಿವೇಶನದಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಹಾಗೂ ಬೆಂಗಳೂರಿನ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ಆಗಬೇಕು. ಭವಿಷ್ಯದಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರತ್ಯೇಕ ಚರ್ಚೆಗೆ ಅವಕಾಶ ಕಲ್ಪಿಸುವ ನಿಯಮ ರೂಪಿಸಬೇಕು ಎಂದರು.
ನಾನು ಈ ಹಿಂದೆ ಸಚಿವನಾಗಿದ್ದಾಗ ಉತ್ತರ ಕರ್ನಾಟಕದ ಹಿತದೃಷ್ಟಿಯಿಂದ ಅಂಗೀಕರಿಸಿದ್ದ 8 ನಿರ್ಣಯಗಳು ಇಂದಿಗೂ ದಿಕ್ಸೂಚಿಯಾಗಿವೆ. ಆದರೆ ಅವು ಯಾವ ಮಟ್ಟದಲ್ಲಿ ಅನುಷ್ಠಾನಗೊಂಡಿವೆ ಎಂಬುದನ್ನು ಪರಿಶೀಲಿಸಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಎರಡೂ ಸದನಗಳ ಮುಖ್ಯಸ್ಥರು ಮಾಡಬೇಕಿದೆ ಎಂದರು.
​ಪೀಠಾಧ್ಯಕ್ಷರ ನಿರ್ದೇಶನ ಅಗತ್ಯ. ಈ ಹಿಂದೆ ಸದನದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಧ್ವನಿ ಎತ್ತುವ ದಿಟ್ಟತನವನ್ನು ಬಣಕಾರ ವಕೀಲರು ಪ್ರದರ್ಶಿಸಿದ್ದರು. ಸದನದ ನಿರ್ಣಯಗಳು ಕಡತದಲ್ಲೇ ಉಳಿಯದೆ ಜಾರಿಗೆ ಬರಲು ಉಭಯ ಸದನಗಳ ಮುಖ್ಯಸ್ಥರು ಸರಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಸಭಾಧ್ಯಕ್ಷರು, ಸಭಾಪತಿಗಳು ಪಕ್ಷಾತೀತವಾಗಿರಬೇಕಾದರೂ ಜನರ ಪರವಾಗಿ ಮಾತನಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದರು.