ಗದಗ ಜಿಲ್ಲಾಡಳಿತ ಭವನದಲ್ಲಿ ಇಂಧನ ಕೊರತೆ ಕುರಿತು ಸಭೆ ಜರುಗಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು, ಬಂಕ್ ಮಾಲೀಕರು ಸೇರಿದಂಯೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಜಿಲ್ಲೆಯಲ್ಲಿ ಪೆಟ್ರೋಲ ಹಾಗೂ ಡೀಸೆಲ್ ಪೂರೈಕೆಯಲ್ಲಿ ಆಗುವ ವ್ಯತ್ಯೆಯವನ್ನು ಸಂಬಂಧಿಸಿದ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕದಿಂದ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ ಹೇಳಿದರು.
ಇತ್ತೀಚೆಗೆ ಇಂಧನ ಕೊರತೆ ಕುರಿತು ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿರುವುದು ಹಾಗೂ ಕೆಲವು ಬಂಕ್ಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜರುಗಿದ ಪೆಟ್ರೋಲ ಬಂಕ್ ಮಾಲೀಕರು, ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತೈಲ ಕಂಪನಿಗಳು ಸಮಯಕ್ಕೆ ಸರಿಯಾಗಿ ಇಂಧನ ಪೂರೈಸುವಂತೆ ಕ್ರಮ ವಹಿಸಬೇಕು. ಪೆಟ್ರೋಲ ಬಂಕ್ಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೂ ಸಾರ್ವಜನಿಕರಿಗೆ ಇಂಧನ ನೀಡದೆ ಬಂಕ್ ಮುಚ್ಚುವುದು ಅಥವಾ ಇಂಧನ ಲಭ್ಯವಿಲ್ಲ ಎಂಬ ಫಲಕ ಹಾಕಿ ಕೃತಕ ಅಭಾವ ಸೃಷ್ಟಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇಲಾಖೆಯ ಆಟೋಮೇಷನ್ ವ್ಯವಸ್ಥೆಯ ಮೂಲಕ ಬಂಕ್ಗಳ ದಾಸ್ತಾನು ಸ್ಥಿತಿಯನ್ನು ಆನ್ಲೈನ್ನಲ್ಲೇ ಪರಿಶೀಲಿಸಲು ಅವಕಾಶವಿದ್ದು, ನಿಯಮ ಉಲ್ಲಂಘಿಸುವ ಡೀಲರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಡಳಿತ ಪೆಟ್ರೋಲ ಬಂಕ್ಗಳಿಗೆ ಇಂಧನ ಸರಬರಾಜಿನಲ್ಲಿ ಅಗತ್ಯ ಸಹಕಾರ ನೀಡಲು ಸಿದ್ಧವಿದೆ. ಬಂಕ್ ಮಾಲೀಕರು ಸಹ ಸರ್ಕಾರದೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಇಂಧನ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಇಂಧನ ಕೊರತೆಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದು ಎಲ್ಲರು ಜವಾಬ್ದಾರಿಯಾಗಿದ್ದು, ಇಂಡೆಂಟ್ ಆಧಾರದ ಮೇಲೆ ಆದ್ಯತೆಯ ಕ್ರಮದಲ್ಲಿ ಇಂಧನ ಪೂರೈಕೆ ಆಗಬೇಕು. ಎಲ್ಲರಿಗೂ ಸಮಾನ ಅವಕಾಶ ದೊರೆಯುವಂತೆ ವಿತರಣಾ ವ್ಯವಸ್ಥೆ ಇರಬೇಕು ಎಂದು ಹೇಳಿದರು.
ದೈನಂದಿನ ವಾಹನ ಸವಾರರಿಗೆ ಎಂದಿನಂತೆ ಯಾವುದೇ ಅಡೆತಡೆ ಇಲ್ಲದೇ ಇಂಧನ ಪೂರೈಸಬೇಕು. ಬಂಕ್ಗಳಲ್ಲಿ ಜನಸಂದಣಿ ಹೆಚ್ಚಾದ ಸಂದರ್ಭದಲ್ಲೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಅವಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕ್ಯಾನ್ ಹಾಗೂ ಬ್ಯಾರೆಲ್ಗಳಲ್ಲಿ ಇಂಧನ ಮಾರಾಟ ಮಾಡುವುದನ್ನು ನಿರ್ಭಂಧಿಸಲಾಗಿದೆ. ಆಸ್ಪತ್ರೆಗಳು, ಎಟಿಎಂ ಕೇಂದ್ರಗಳು, ಮೊಬೈಲ್ ಟವರ್ಗಳು ಹಾಗೂ ಇತರೆ ಅಗತ್ಯ ಸೇವೆಗಳ ಜನರೇಟರ್ಗಳಿಗೆ ಡೀಸೆಲ್ ಅನಿವಾರ್ಯವಾಗಿದ್ದಲ್ಲಿ ಮಾತ್ರ ಸಂಬಂಧಪಟ್ಟವರು ಸ್ಥಳಿಯ ತಹಶೀಲ್ದಾರ್ ಅಥವಾ ಜಿಲ್ಲಾಡಳಿತದಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ಆಹಾರ ಇಲಾಖೆ ಅಥವಾ ಕಂದಾಯ ಇಲಾಖೆಯ ಅನುಮೋದನೆ ಪಡೆದವರಿಗೆ ಮಾತ್ರ ಕ್ಯಾನ್ ಅಥವಾ ಬ್ಯಾರೆಲ್ ಮೂಲಕ ಇಂಧನ ವಿತರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಪೆಟ್ರೋಲ್ ಬಂಕ್ ಮಾಲೀಕರು ಮತ್ತು ಪ್ರತಿನಿಧಿಗಳು ತಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ವಿಶೇಷವಾಗಿ ಹುಬ್ಬಳ್ಳಿಇಂದ ಇಂಧನ ಟ್ಯಾಂಕರ್ಗಳು ಬರುವಾಗ ಸಂಚಾರ ದಟ್ಟಣಿಯಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಸಭೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು, ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು, ಬಂಕ್ ಮಾಲೀಕರು ಸೇರಿದಂಯೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.