ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ ಕೃಷಿ ಬೆಳಗೆ ರಾಜ್ಯ ಸರ್ಕಾರ ಒಟ್ಟು 153 ಕೋಟಿ ರೂ. ಗಳನ್ನು ರೈತರಿಗೆ ಬೆಳೆ ಪರಿಹಾರವಾಗಿ ಬಿಡುಗಡೆ ಮಾಡಿದೆ. ಈಗಾಗಲೇ ಶೇ. 75 ರಷ್ಟು ರೈತರಿಗೆ ಬೆಳೆ ಪರಿಹಾರವನ್ನು ಪರಿಹಾರ ತಂತ್ರಾಂಶ ಮೂಲಕ ವಿತರಿಸುವ ಕಾರ್ಯ ನಡೆಯುತ್ತಿದೆ. ಆಧಾರ ಕಾರ್ಡ ಜೋಡಣೆ, ರೈತರ ಸಾವು ಮತ್ತು ಇತರೆ ತಾಂತ್ರಿಕ ಕಾರಣಗಳಿಂದ ಶೇ. 25 ರಷ್ಟು ರೈತರ ಬ್ಯಾಂಕ್ ಖಾತೆಗಳು ಪರಿಷ್ಕರಣೆ ಆಗಬೇಕಿದ್ದು, ತದ ನಂತರ ಇನ್ನೂಳಿದ ಶೇ. 25 ರಷ್ಟು ರೈತರಿಗೆ ಪರಿಹಾರ ವಿತರಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯಲ್ಲಿ ಆಗಸ್ಟ್ ಮತ್ತು ಅದಕ್ಕೂ ಪೂರ್ವದಲ್ಲಿ ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದ ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ನಾಶವಾಗಿತ್ತು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಒಟ್ಟು 1.32 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿತ್ತು. ಕೃಷಿ ಬೆಳೆಗಳಾದ ಹೆಸರು, ಶೇಂಗಾ, ಹತ್ತಿ ಮತ್ತು ಮೆಕ್ಕೆಜೊಳ ಬೆಳೆಗಳು ಸೇರಿದಂತೆ ಇತರೆ ಕೃಷಿ ಬೆಳೆಗಳು ಸೇರಿ ಒಟ್ಟು 1.21 ಲಕ್ಷ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಗಳಾದ ಉಳ್ಳಾಗಡ್ಡಿ, ಟಮೋಟೊ, ಮೆಣಸಿನಕಾಯಿ, ಕ್ಯಾಬೇಜ್, ಬಾಳೆಹಣ್ಣು, ಪಪ್ಪಾಯ ಮತ್ತು ಬೆಂಡಿಕಾಯಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಸೇರಿ 11 ಸಾವಿರ ತೋಟಗಾರಿಕೆ ಬೆಳೆ ಸೇರಿ ಒಟ್ಟು ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ನಾಶವಾಗಿದೆ. 1.32 ಲಕ್ಷ ಹೆಕ್ಟೇರ್ ಬೆಳೆ ನಾಶಕ್ಕೆ 153 ಕೋಟಿ ರೂ. ಬಿಡುಗಡೆ ಆಗಿದೆ.
1.41 ಲಕ್ಷ ರೈತರಿಗೆ 153 ಕೋಟಿ ಬಿಡುಗಡೆ:
ಪರಿಹಾರ ತಂತ್ರಾಂಶದ ಪ್ರಕಾರ ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ಬೆಳೆ ಪರಿಹಾರಕ್ಕೆ 1.41 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. 99,402 ಹೆಕ್ಟೇರ್ ಪ್ರದೇಶದ ವಿವರ ಮತ್ತು 81125 ರೈತರ ದತ್ತಾಂಶಗಳು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಇನ್ನೂಳಿದ ರೈತರ ಆಧಾರ ಕಾರ್ಡ ಹೊಂದಾಣಿಕೆ ಸಮಸ್ಯೆ, ರೈತ ಸಾವು ಪ್ರಕರಣ, ಎೈಡಿ ಮಾಡಿಸದಿರುವುದು, ಎೈಡಿ ಹೊಂದಾಣಿಕೆ ಆಗದಿರುವುದರಿಂದ ಇನ್ನೂಳಿದ ರೈತರ ದತ್ತಾಂಶ ಪರಿಹಾರ ತಂತ್ರಾಂಶದಲ್ಲಿ ನೋಂದಣಿ ಆಗಿಲ್ಲ. ಈ ಕುರಿತು ಪರಿಷ್ಕರಣೆ ನಡೆಯುತ್ತಿದೆ.
2025ರ ಮೇ ತಿಂಗಳಲ್ಲಿ ಅಗತ್ಯಕ್ಕಿಂತ ಅಧಿಕ ಮಳೆಯಾಗಿತ್ತು. ಹಾಗಾಗಿ ರೈತರು ಮೇ. 25 ರಿಂದ ಜೂನ್ 15ರ ಒಳಗಾಗಿ ಹೆಸರು, ಮೆಕ್ಕೆಜೋಳ, ತೋಗರಿ, ಶೇಂಗಾ, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಅವಧಿಗೂ ಮೊದಲೇ ಮಳೆ ಮತ್ತು ಅವಧಿ ಮೀರಿದ ನಂತರ ಮಳೆಯಿಂದಾಗಿ ಹೆಸರು ಬೆಳೆ ಸೇರಿದಂತೆ ಇತರೆ ಬೆಳೆಗಳಲ್ಲಿ ರೈತರು ಇಳುವರಿ ಕಾಣಲಿಲ್ಲ. ಕೆಲವಡೆ ಬಿತ್ತಿದ ಬೆಳೆಯನ್ನು ರೈತರು ಹರಗುವ ದೃಶ್ಯಗಳು ಸಾಮಾನ್ಯವಾಗಿ ಕಂಡಿ ಬಂದಿತ್ತು.
ಬಿತ್ತನೆ 1.42 ಲಕ್ಷ ಹೆಕ್ಟೇರ್! ನಾಶ 1.32 ಲಕ್ಷ ಹೆಕ್ಟೇರ್:
ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಆಗಿದ್ದರಿಂದ ಕೃಷಿ ಇಲಾಖೆ ಜಿಲ್ಲೆಯಲ್ಲಿ 1.32 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಂಡಿತ್ತು. ಆದರೆ ರೈತರು ಗುರಿಗಿಂತಲೂ ಅಧಿಕ 1.42 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಮಾಡಿದ್ದರು. ಪೂರ್ವ ಮುಂಗಾರಿನ ನಂತರ ಭೂಮಿಯಲ್ಲಿ ತೇವಾಂಶ ಇದ್ದ ಕಾರಣ ಆ ಸಮಯದಲ್ಲಿ ಕಾರಣ ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿತ್ತು. ಆದರೆ, ಏಕಾಏಕಿ ಮಳೆ ಕೊರತೆ ಉದ್ಬವಿಸಿದ ಕಾರಣ ಮುಂಗಾರಿನಲ್ಲಿ ಶೇ.50ಕ್ಕಿಂತ ಅಧಿಕ ಮಳೆ ಕೊರತೆಯಾಗಿ ಬೆಳೆ ಬಿತ್ತಿದಲ್ಲೇ ಚಿಗುರೊಡೆಯದೇ ರೈತರಿಗೆ ನಷ್ಟ ತಂದೊಡಿತ್ತು. ಗದಗ ಮತ್ತು ರೋಣದಲ್ಲಿ ಅತ್ಯಧಿಕ ಹೆಸರು ಬೆಳೆ ನಷ್ಟ, ರೋಣ ತಾಲೂಕಿನಲ್ಲಿ ಅಧಿಕ ಉಳ್ಳಾಗಡ್ಡಿ ಬೆಳೆ ಸೇರಿದಂತೆ ಜಿಲ್ಲೆಯಾದ್ಯಂತ ಅನೇಕ ಬೆಳೆಗಳಿಂದ ರೈತರಿಗೆ ನಷ್ಟವಾಯಿತು.