ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿ ದಂಧೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಆತಂಕಕಾರಿ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ತಾಲೂಕಿನ ಬೆಳಹೋಡ ಗ್ರಾಮದ ರೈತನೊಬ್ಬ 17 ಲಕ್ಷ ರೂ. ಸಾಲಕ್ಕಾಗಿ ತನ್ನ ಐದು ಎಕರೆ ಜಮೀನನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿರುವ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ತಾಲೂಕಿನ ಬೆಳಹೋಡ ಗ್ರಾಮದ ರೈತ ಮಹ್ಮ ರಫೀಕ ದೊಡ್ಡಮನಿ ಹಾಗೂ ಅವರ ಸಹೋದರರ ಸಂಕಷ್ಟದ ಹಿನ್ನೆಲೆಯಲ್ಲಿ ಖಾಸಗಿ ಬಡ್ಡಿ ದಂಧೆಕೋರರನ್ನು ಸಂಪಕಿರ್ಸಿದ್ದರು ಎನ್ನಲಾಗಿದೆ. ರೈತ ಕುಟುಂಬಕ್ಕೆ 17 ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿದ್ದ ಆರೋಪಿಗಳು, ಮುಂಗಡವಾಗಿಯೇ 5 ಲಕ್ಷ ರೂ. ಬಡ್ಡಿ ಕಡಿತ ಮಾಡಿಕೊಂಡು ಕೇವಲ 12 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಲದ ಭದ್ರತೆಯಾಗಿ ರೈತನ ಐದು ಎಕರೆ ಜಮೀನಿನ ದಾಖಲೆಗಳನ್ನು ಪಡೆದುಕೊಂಡ ಆರೋಪಿಗಳು, ಅಡಮಾನ ನೋಂದಣಿ ಮಾಡಿಕೊಳ್ಳುವುದಾಗಿ ನಂಬಿಸಿದ್ದರು. ಆದರೆ ನಂತರ ಅಡಮಾನ ಪತ್ರದ ಬದಲಿಗೆ ಖರೀದಿ ಪತ್ರ ಸಿದ್ಧಪಡಿಸಿ, ಜಮೀನನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣದಲ್ಲಿ ಶೇಷಗೀರಿಸಾ ಬಾಕಳೆ ಹೆಸರಿಗೆ ಜಮೀನಿನ ಖರೀದಿ ಪತ್ರ ಮಾಡಿಸಲಾಗಿದ್ದು, ಇದರ ಹಿಂದೆ ಬೆಟಗೇರಿ ಮೂಲದ ರೌಡಿ ಶೀಟರ್ ಹಾಗೂ ಬಡ್ಡಿ ದಂಧೆಕೋರ ಯುವರಾಜ ಕೊರವರನ ಕೈವಾಡವಿದೆ ಎಂದು ರೈತ ಕುಟುಂಬ ಆರೋಪಿಸಿದೆ.
ಕೋಟ್ಯಂತರ ರೂ. ಮೌಲ್ಯದ ಐದು ಎಕರೆ ಜಮೀನನ್ನು ಕಳೆದುಕೊಂಡ ರೈತ ಕುಟುಂಬ ನ್ಯಾಯಕ್ಕಾಗಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರನ್ನು ಸಂಪಕಿರ್ಸಿ ದೂರು ಸಲ್ಲಿಸಿತ್ತು. ಪ್ರಕರಣದ ಗಂಭೀರತೆಯನ್ನು ಅರಿತ ಎಸ್ಪಿ ತಕ್ಷಣ ತನಿಖೆಗೆ ಸೂಚನೆ ನೀಡಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಯುವರಾಜ್ ಕೊರವರ ಹಾಗೂ ರವಿ ಕೌಜಗೇರಿ ಅವರನ್ನು ಬಂಧಿಸಿದ್ದಾರೆ. ಬಸನಗೌಡ ಕರಮುಡಿ, ಶೇಷಗೀರಿಸಾ ಬಾಕಳೆ ಹಾಗೂ ಜಗದೀಶ ಅಯ್ಯನಗೌಡ ಎಂಬವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಕೊರವರನನ್ನು ಬಂಧಿಸಲಾಗಿದೆ. ಈ ಪ್ರಕರಣ ಜತೆಗೆ ಹಿಂದಿನ ಕೆಲ ಪ್ರಕರಣಗಳಲ್ಲಿ ಇಂತದ್ದೆ ಕೆಲ ಆರೋಪಗಳು ಯುವರಾಜ ಮೇಲಿದ್ದವು. ಈ ಪ್ರಕರಣದಲ್ಲಿ ಇನ್ನೂ ತನಿಖೆ ನಡೆಯಬೇಕಿದ್ದು, ಮುಂದಿನ ವಿಚಾರಣೆ ನಡೆಯುತ್ತಿದೆ.